Pratap Simha: ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ರಾಜವಂಶಸ್ಥರಿಗೆ ಆಹ್ವಾನ ನಿರಾಕರಣೆ ವಿವಾದ: ಸುಳ್ಳು ಹಬ್ಬಿಸದಿರಿ ಎಂದ ಸಂಸದ ಪ್ರತಾಪ್ ಸಿಂಹ

ಮೈಸೂರು ಅರಮನೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಒಡೆಯರ್ ಕುಟುಂಬಕ್ಕೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಿ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.

Pratap Simha: ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ರಾಜವಂಶಸ್ಥರಿಗೆ ಆಹ್ವಾನ ನಿರಾಕರಣೆ ವಿವಾದ: ಸುಳ್ಳು ಹಬ್ಬಿಸದಿರಿ ಎಂದ ಸಂಸದ ಪ್ರತಾಪ್ ಸಿಂಹ
ಪ್ರತಾಪ್ ಸಿಂಹ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 15, 2022 | 11:11 AM

ಮೈಸೂರು: ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಮಕ್ಷಮದಲ್ಲಿ ಜೂನ್ 21ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆಗೆ (World Yoga Day) ರಾಜವಂಶಸ್ಥರನ್ನು (Mysore Wodeyar Family) ಆಹ್ವಾನಿಸಿಲ್ಲ ಎಂಬುದು ದೊಡ್ಡ ಸುದ್ದಿಯಾಗಿದೆ. ಈ ನಡೆಯನ್ನು ಖಂಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನಗಳು ನಡೆಯುತ್ತಿವೆ. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ (Pratap Simha), ‘ಸುಳ್ಳು ಸುದ್ದಿ ಹಬ್ಬಿಸಬೇಡಿ’ ಎಂದು ಆಗ್ರಹಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ವೇದಿಕೆ ಮೇಲೆ ಸೀಮಿತ ಜನರಿಗಷ್ಟೇ ಅವಕಾಶ ಇರುತ್ತದೆ. ಬೇರೆ ಯಾರೂ ವೇದಿಕೆ ಮೇಲೆ ಇರುವಂತಿಲ್ಲ ಎನ್ನುವ ನನ್ನ ಮಾತು ಕೇವಲ ಜನಪ್ರತಿನಿಧಿಗಳಿಗೆ ಸಂಬಂಭಪಟ್ಟಿದ್ದು’ ಎಂದು ಸ್ಪಷ್ಟನೆ ನೀಡಿದರು.

‘ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಾದ ಗಣ್ಯರ ಪಟ್ಟಿ ಇನ್ನೂ ಸಿದ್ಧವಾಗುತ್ತಿದೆ. ಪಟ್ಟಿ ಅಂತಿಮಗೊಳ್ಳುವ ಮೊದಲು ದಯವಿಟ್ಟು ಸುಳ್ಳುಸುದ್ದಿ ಹಬ್ಬಿಸಬೇಡಿ. ರಾಜವಂಶಸ್ಥರ ಬಗ್ಗೆ ಎಲ್ಲರಿಗಿಂತ ಹೆಚ್ಚು ಗೌರವ ನಮಗೆ ಇದೆ. ಯಾವುದೋ ಪೋಸ್ಟರ್ ಹಾಕಿ ನಮಗೆ ತಿಳಿ ಹೇಳಲು ಬರಬೇಡಿ’ ಎಂದು ಹರಿಹಾಯ್ದರು.

‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಮಹಾರಾಜರ ಬಗ್ಗೆ ಹಗುರವಾಗಿ ಮಾತನಾಡಿದಾಗ ಅದರ ವಿರುದ್ಧ ಮೊದಲು ಧ್ವನಿ ಎತ್ತಿದವನು ನಾನು. ಸಿದ್ದರಾಮಯ್ಯ ಮಾತು ವಿರೋಧಿಸಲು ಬಹುತೇಕರಿಗೆ ಹೆದರಿಕೆಯಾಗುತ್ತಿತ್ತು. ಆದರೆ ನಾನು ಅವರಿಗೆ ಉತ್ತರ ಕೊಟ್ಟಿದ್ದೆ. ಹಿಂದೆ ಸಿದ್ದರಾಮಯ್ಯನವರು ಮಹಾರಾಜರ ಕುಟುಂಬಕ್ಕೆ ಆನೇಕ ಕಾಟ ಕೊಟ್ಟರು. ಹಲವು ಅನ್ಯಾಯ ಮಾಡಿದರು. ಅವತ್ತು ಮೈಸೂರಿನಲ್ಲಿದ್ದ ಯಾವ ಜನಪ್ರತಿನಿಧಿಯೂ ಯಾರೊಬ್ಬರು ಧ್ವನಿ ಎತ್ತಲಿಲ್ಲ. ಆದರೆ ಮಹಾರಾಜರ ಪರವಾಗಿ ಬಿಜೆಪಿ ಎಲ್ಲ ಸಂಧರ್ಭದಲ್ಲೂ ಧ್ವನಿ ಎತ್ತುತ್ತದೆ. ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಾಡಿ ಕೃಷ್ಣರಾಜ ಒಡೆಯರ್ ಮತ್ತು ರೈಲು ನಿಲ್ದಾಣಕ್ಕೆ ಚಾಮರಾಜ ಒಡೆಯರ್ ಹೆಸರು ಇಡುತ್ತಿದ್ದೇವೆ. ಇದು ಮಹಾರಾಜರಿಗೆ ನಾವು ಕೊಡುವ ಗೌರವ’ ಎಂದು ವಿವರಿಸಿದರು.

ಸಿದ್ದರಾಮಯ್ಯ ಏಕೆ ಬರಲ್ಲ

ಮೈಸೂರು ಅಭಿವೃದ್ಧಿ ವಿಚಾರವಾಗಿ ಪ್ರತಾಪ್ ಸಿಂಹ ಜೊತೆಗೆ ಚರ್ಚೆ ನಡೆಸಲು ನಮ್ಮ ವಕ್ತಾರ ಲಕ್ಷ್ಮಣ ಸಾಕು. ನಾನು ಚರ್ಚೆಗೆ ಹೋಗುವ ಅಗತ್ಯವಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಪ್ರತಾಪ್ ಸಿಂಹ ಖಂಡಿಸಿದರು. ‘ಯಾಕೆ ಸಿದ್ದರಾಮಯ್ಯನವರ ಬಾಯಿ ಬಿದ್ದು ಹೋಗಿದೆಯೇ, ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪಗೆ ಮಾತು ಬರುವುದಿಲ್ಲವೇ ಎಂದು ಪ್ರಶ್ನಿಸಿದಲಾಗಿದೆ. 48 ಗಂಟೆ ಮೊದಲೇ ಹೇಳಿ ಎಲ್ಲಿಗೆ ಬೇಕಾದರೂ ಕರೆಯಲಿ, ನಾನು ಏಕಾಂಗಿಯಾಗಿ ಚರ್ಚೆಗೆ ಬರುತ್ತೇನೆ. ನೀವು ಬೇಕಾದರೆ ದಂಡು ದಾಳಿ ಸಮೇತ ಬನ್ನಿ ಎಂದು ಸವಾಲು ಹಾಕಿದರು.

ವೀರರು, ಶೂರರು ಕುದುರೆಯನ್ನೋ ಅಥವಾ ಆನೆಯನ್ನೋ ಏರಿ ಬರುತ್ತಾರೆ. ಕತ್ತೆಯನ್ನೇರಿ ಬರುವುದಿಲ್ಲ. ನೀವೇ ಬನ್ನಿ ಯುದ್ಧ ಮಾಡೋಣ, ಚರ್ಚೆ ಮಾಡೋಣ. ನನಗೆ ಅರ್ಧ ಗಂಟೆ ಸಾಕು ಪಾಯಿಂಟು ಪಾಯಿಂಟು ಕ್ಲಿಯರ್ ಮಾಡುತ್ತೇನೆ. ವೇದಿಕೆಗಳಲ್ಲಿ ಗಂಟೆ ಗಂಟೆಲೇ ಪುಂಖಾನುಪುಂಖ ಭಾಷಣ ಮಾಡುತ್ತೀರಾ‌. ಖಾಲಿ‌ ಕುಳಿತಿರುವ ಮಹದೇವಪ್ಪ ಫೇಸ್ ಬುಕ್ ನಲ್ಲಿ ಉದ್ದುದ್ದ ಪೋಸ್ಟರ್ ಹಾಕುತ್ತಾರೆ. ನನ್ನ ಜೊತೆ ಚೆರ್ಚೆಗೆ ಬರಲು ಏನು ಕಷ್ಟ ಎಂದು ಪ್ರಶ್ನಿಸಿದರು. ಜಯ-ವಿಜಯನರ ಥರಾ ನೀವು ಮೈಸೂರು ಭಾಗದಲ್ಲಿದೀರಿ. ನನ್ನ ಜೊತೆ ಚರ್ಚೆ ಮಾಡಲು ನಿಮಗೆ ನಮ್ಮ ಅಹಂ ಅಡ್ಡ ಬರುತ್ತಿದ್ದೇಯೇ ಅಥವಾ ಭಯವೇ ಎಂದು ಕೇಳಿದರು.

ಬಾಡೂಟಕ್ಕೆ, ಬೀಗರ ಊಟಕ್ಕೆ ವಾರಕ್ಕೆ ಹಲವು ಬಾರಿ ಸಿದ್ದರಾಮಯ್ಯ ಬರುತ್ತಾರೆ. ಅದೇ ಟೈಂ ನಲ್ಲಿ ಅರ್ಧ ಗಂಟೆ ಬಿಡುವು ಮಾಡಿಕೊಂಡು ಚೆರ್ಚೆಗೆ ಬನ್ನಿ. ನೀವು ಮಾಡಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಹೇಳಿಕೊಳ್ಳಲು ಭಯವೇಕೆ ಎಂದು ಸಿಎಂ ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಪಂಥಾಹ್ವಾನ ಕೊಟ್ಟರು.

ತಾಲ್ಲೂಕು ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಸಿದ್ದರಾಮಯ್ಯ ಅವರನ್ನು ನಾನು ಆರ್ಥಿಕ ತಜ್ಞರಲ್ಲ ಎಂದು ಹೇಳಿದರೆ ಅದು ಹೇಗೆ ಇಡೀ ವಕೀಲ ಸಮುದಾಯಕ್ಕೆ ಮಾಡುವ ಅವಮಾನವಾಗುತ್ತದೆ? ಮುಖ್ಯಮಂತ್ರಿಗಳಾಗಿ ಬಜೆಟ್ ಮಂಡನೆ ಮಾಡಿದ ಇತರರೂ ನಮ್ಮಲ್ಲಿ ಇದ್ದಾರೆ. ಆದರೆ ಅವರು ಸಿದ್ದರಾಮಯ್ಯ ಅವರಂತೆ ತಮ್ಮನ್ನು ತಾವು ಆರ್ಥಿಕ ತಜ್ಞ ಎಂದು ಕೊಚ್ಚಿಕೊಳ್ಳುತ್ತಿಲ್ಲ. ಇವರು ಮಾತ್ರ ಜಂಭದ ಕೋಳಿಯಂತೆ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಂಜನಗೂಡು: ಸಮರ್ಪಕ ಬಸ್ ಸೌಲಭ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವವರೆಗೆ ನಾವು ಶಾಲೆಗೆ ಹೋಗುವುದಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ನಂಜನಗೂಡು ತಾಲ್ಲೂಕು ವೆಂಕಟಾಚಲಪುರ, ಹಾದನೂರ, ಒಡೆಯನಪುರ ಗ್ರಾಮದ ಮಕ್ಕಳು ನಡೆಸಿದ ಪ್ರತಿಭಟನೆಗೆ ಪೋಷಕರೂ ಸಾಥ್ ನೀಡಿದರು. ಪ್ರತಿನಿತ್ಯ 4 ಕಿಲೋಮೀಟರ್ ನಡೆದು ಶಾಲೆಗೆ ಹೋಗಬೇಕಾದ ಪರಿಸ್ಥಿತಿಯಿದೆ. ಈ ಬರುತ್ತಿದ್ದ ಬಸ್​ ಅನ್ನು ದಿಢೀರ್ ಎಂದು ನಿಲ್ಲಿಸಲಾಗಿದೆ. ಸರ್ಕಾರಿ ಬಸ್ ಸೌಲಭ್ಯಕ್ಕಾಗಿ ಹಲವು ಬಾರಿ ಮನವಿ ಮಾಡಿದ್ದರೂ ತಾಲ್ಲೂಕು ಆಡಳಿತ ಸ್ಪಂದಿಸಿಲ್ಲ ಎಂದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:11 am, Wed, 15 June 22