ಮೈಸೂರು, ಫೆಬ್ರವರಿ 17: ಮೈಸೂರಿನ (Mysore) ವಿಶ್ವೇಶ್ವರಯ್ಯನಗರದ ಅಪಾರ್ಟ್ಮೆಂಟ್ನಲ್ಲಿ ಬಾಲಕ ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಕುಶಾಲ್ (15), ಚೇತನ್ (45), ರೂಪಾಲಿ (43), ಪ್ರಿಯಂವಧಾ (62) ಮೃತ ದುರ್ದೈವಿಗಳು. ಚೇತನ್ ಮೊದಲಿಗೆ ತಾಯಿ ಪ್ರಿಯಂವಧಾ, ಪತ್ನಿ ರೂಪಾಲಿ ಮತ್ತು ಮಗ ಕುಶಾಲ್ಗೆ ವಿಷವುಣಿಸಿ ಸಾಯಿಸಿರುವ ಶಂಕೆ ವ್ಯಕ್ತವಾಗಿದೆ. ಮೂವರಿಗೆ ವಿಷವುಣಿಸಿ ಸಾಯಿಸಿ ಬಳಿಕ ಚೇತನ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಡಿಸಿಪಿ ಜಾಹ್ನವಿ, ವಿದ್ಯಾರಣ್ಯಪುರಂ ಇನ್ಸ್ಪೆಕ್ಟರ್ ಮೋಹಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾತನಾಡಿ, ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಚೇತನ್ ಕುಟುಂಬ ಹಾಗೂ ಚೇತನ್ ತಾಯಿ ಪ್ರಿಯಂವಧಾ ಅಕ್ಕಪಕ್ಕದ ಫ್ಲ್ಯಾಟ್ನಲ್ಲಿ ವಾಸವಿದ್ದರು. ತಾಯಿ ಒಂದು ಕಡೆ ಇದ್ದರು, ಮಗ ಇನ್ನೊಂದು ಕಡೆ ಇದ್ದರು. ತಾಯಿ ಪ್ರಿಯಂವಧಾ ಮತ್ತು ಮಗ ಚೇತನ್ ಕುಟುಂಬ ಒಟ್ಟಾಗಿ ರವಿವಾರ ಗೊರೂರಿಗೆ ಹೋಗಿದ್ದರು ಎಂದು ತಿಳಿಸಿದರು.
ಗೊರೂರು ದೇವಸ್ಥಾನಕ್ಕೆ ಹೋಗಿ ಸಂಜೆ ಮನೆಗೆ ಬಂದಿದ್ದರು. ಮೃತ ಚೇತನ್ ಹಾಸನ ಜಿಲ್ಲೆ ಗೊರೂರು ಮೂಲದ ನಿವಾಸಿಯಾಗಿದ್ದರು. ಚೇತನ್ ಪತ್ನಿ ರೂಪಾಲಿ ಮೈಸೂರಿನ ನಿವಾಸಿಯಾಗಿದ್ದರು. 2019 ರಿಂದ ಚೇತನ್ ಮತ್ತು ರೂಪಾಲಿ ಮೈಸೂರಿನಲ್ಲೇ ನೆಲೆಸಿದ್ದರು. ಕೇಸ್ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದೇವೆ. ಚೇತನ್ ಕಾರ್ಮಿಕರನ್ನು ಸೌದಿಗೆ ಕಳಿಸುವ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.
ಇದನ್ನೂ ಓದಿ: ಪ್ರಯಾಗ್ರಾಜ್ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ ಕರ್ನಾಟಕದ ಯುವಕರು ಅಪಘಾತದಲ್ಲಿ ಸಾವು
ಚೇತನ್ ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದಾರೆ. ನಮ್ಮ ಸಾವಿಗೆ ನಾವೇ ಕಾರಣ. ಹಣಕಾಸಿನ ಸಮಸ್ಯೆಯಿಂದಾಗಿ ನಾವು ಸಾಯುತ್ತಿದ್ದೇವೆ. ನಮ್ಮ ಸಾವಿಗೆ ಬೇರೆ ಯಾರೂ ಕಾರಣರಲ್ಲ. ನನ್ನ ಸ್ನೇಹಿತರು, ಸಂಬಂಧಕರಿಗೆ ಯಾರೂ ತೊಂದರೆ ಕೊಡಬೇಡಿ. ನಮ್ಮನ್ನು ಕ್ಷಮಿಸಿಬಿಡಿ, I AM SORRY ಎಂದು ಡೆತ್ನೋಟ್ನಲ್ಲಿ ಬರೆದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:46 am, Mon, 17 February 25