ಕುಂಭಮೇಳ: ಪ್ರಯಾಗ್ರಾಜ್ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ ಕರ್ನಾಟಕದ ಯುವಕರು ಅಪಘಾತದಲ್ಲಿ ಸಾವು
ಪ್ರಯಾಗರಾಜ್ ಯಾತ್ರೆಯಿಂದ ವಾಪಸಾಗುತ್ತಿದ್ದ ಕರ್ನಾಟಕದ ಇಬ್ಬರು ಯುವಕರು ಉತ್ತರಪ್ರದೇಶದ ಮಿರ್ಜಾಪುರದ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೈಸೂರಿನ ರಾಮಕೃಷ್ಣ ಶರ್ಮಾ ಮತ್ತು ಮಂಡ್ಯದ ಅರುಣ್ ಶಾಸ್ತ್ರಿ ಮೃತಪಟ್ಟವರು. ಲಾರಿ ಮತ್ತು ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
![ಕುಂಭಮೇಳ: ಪ್ರಯಾಗ್ರಾಜ್ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ ಕರ್ನಾಟಕದ ಯುವಕರು ಅಪಘಾತದಲ್ಲಿ ಸಾವು](https://images.tv9kannada.com/wp-content/uploads/2025/01/prayagraj-accident-death.jpg?w=1280)
ಮೈಸೂರು, ಜನವರಿ 29: ಪ್ರಯಾಗ್ರಾಜ್ (Prayagraj) ಯಾತ್ರೆ ಮುಗಿಸಿ ವಾಪಸ್ ಬರುತ್ತಿದ್ದಾಗ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಕರ್ನಾಟಕದ (Karnataka) ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಮಿರ್ಜಾಪುರ ಬಳಿ ನಡೆದಿದೆ. ಮೈಸೂರು ತಾಲೂಕಿನ ಮಂಟಿಕ್ಯಾತನಹಳ್ಳಿ ನಿವಾಸಿ ರಾಮಕೃಷ್ಣ ಶರ್ಮಾ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟ ತಾಲೂಕಿನ ಕೆಆರ್ಎಸ್ ನಿವಾಸಿ ಅರುಣ್ ಶಾಸ್ತ್ರಿ ಮೃತ ದುರ್ದೈವಿಗಳು.
ಯುವಕರು ಎರಡು ಕಾರುಗಳಲ್ಲಿ ಪ್ರಯಾಗ್ರಾಜ್ ಯಾತ್ರೆಗೆ ಹೋಗಿದ್ದರು. ಪ್ರಯಾಗ್ರಾಜ್ ಯಾತ್ರೆ ಮುಗಿಸಿ ಕಾಶಿಗೆ ಬರುತ್ತಿದ್ದಾಗ ಮಿರ್ಜಾಪುರದ ಬಳಿ ಲಾರಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದು ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೆ ರಾಮಕೃಷ್ಣ ಶರ್ಮಾ ಮತ್ತು ಅರುಣ್ ಶಾಸ್ತ್ರಿ ಮೃತಪಟ್ಟಿದ್ದಾರೆ.
ಪ್ರಯಾಗ್ರಾಜ್ನಲ್ಲಿ ಕಾಲ್ತುಳಿತ
ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿದೆ. ಬುಧವಾರ ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದಿಢೀರನೆ ಆಗಮಿಸಿದ್ದಾರೆ. ಇದರಿಂದ, ಕಾಲ್ತುಳಿತ ಉಂಟಾಗಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಕಾಲ್ತುಳಿತ, ಹಲವು ಮಂದಿಗೆ ಗಂಭೀರ ಗಾಯ
ರೈಲುಗಳು ರದ್ದು
ಕಾಲ್ತುಳಿತ ಉಂಟಾಗಿದ್ದರಿಂದ ಪ್ರಯಾಗ್ರಾಜ್ ಸಂಪರ್ಕಿಸುತ್ತಿದ್ದ ಹಲವು ವಿಶೇಷ ರೈಲುಗಳನ್ನು ರದ್ದುಗೊಳಿಸಲಾಗಿದೆ. ಹಾಗೂ ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಪಂಡಿತ್ ದೀನದಯಾಳ್ ಉಪಾಧ್ಯಾಯ ಜಂಕ್ಷನ್‌ನಿಂದ ಪ್ರಯಾಗರಾಜ್‌ಗೆ ಹೋಗುವ ಮಹಾಕುಂಭಮೇಳದ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:29 am, Wed, 29 January 25