ಕ್ಯಾಥೆಡ್ರಲ್ ಸೊಸೈಟಿಗೆ ಅಕ್ರಮ ಸೈಟ್ ಹಂಚಿಕೆ: ಮುಡಾ ಮಾಜಿ ಆಯುಕ್ತ, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಸೂಚನೆ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಮಾಜಿ ಆಯುಕ್ತ ಹಾಗೂ ಅಧಿಕಾರಿಗಳ ವಿರುದ್ಧ ಅಕ್ರಮ ಭೂಮಿ ಹಂಚಿಕೆ ಆರೋಪದ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಸೂಚನೆ ನೀಡಿದೆ. ಕ್ಯಾಥೆಡ್ರಲ್ ಸೊಸೈಟಿಗೆ ಅಕ್ರಮವಾಗಿ ಜಾಗ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಮೈಸೂರು, ಜನವರಿ 25: ಕ್ಯಾಥೆಡ್ರಲ್ ಸೊಸೈಟಿಗೆ ಅಕ್ರಮವಾಗಿ ಸೈಟ್ ಹಂಚಿಕೆ ಮಾಡಿದ ಆರೋಪ ಸಂಬಂಧ ಮುಡಾದ ಮಾಜಿ ಆಯುಕ್ತ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಸೂಚನೆ ನೀಡಿದೆ. 75225 ಚದರ ಅಡಿ ಜಾಗವನ್ನು ಕ್ಯಾಥೆಡ್ರಲ್ ಸೊಸೈಟಿಗೆ ಅಕ್ರಮವಾಗಿ ನೀಡಿದ ಆರೋಪ ಕೇಳಿಬಂದಿದ್ದು, ಹಿಂದಿನ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿತ್ತು. ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಅಕ್ರಮ ಎಸಗಿರುವ ಆರೋಪ ಇದಾಗಿದೆ.
ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣದ ದೂರುದಾರರೂ ಆಗಿರುವ ಸ್ನೇಹಮಯಿ ಕೃಷ್ಣ, ನಿವೃತ್ತ ಶಿಕ್ಷಕ ಶಾಂತಪ್ಪರಿಂದ ದೂರು ಸಲ್ಲಿಕೆಯಾಗಿತ್ತು. ಈ ಸಂಬಂಧ ಇದೀಗ ಕ್ರಮ ಕೈಗೊಂಡಿರುವ ಸರ್ಕಾರ, 3 ದಿನದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸುವಂತೆ ಸೂಚನೆ ನೀಡಿದೆ.
ಮುಡಾ 50:50 ಹಗರಣದಲ್ಲಿ ನಿಯಮಬಾಹಿರವಾಗಿ ಸೈಟ್ಹಂಚಿಕೆ ವಿಚಾರವಾಗಿ ಮುಡಾದ ಮಾಜಿ ಆಯುಕ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಕೆ.ಲತಾ ಆದೇಶಿಸಿದ್ದಾರೆ. ಈ ಸಂಬಂಧ ಜ.10 ರಂದೇ ಮುಡಾದ ಆಯುಕ್ತ ರಘುನಂದನ್ ಅವರಿಗೆ ಕಾರ್ಯದರ್ಶಿಗಳು ಪತ್ರ ಬರೆದಿದ್ದಾರೆ.
ಭೂಮಿ ನೀಡಿದ ಅಂದಿನ ಆಯುಕ್ತರು, ಅಧಿಕಾರಿಗಳು, ನಗರ ಯೋಜನಾ ಕಾರ್ಯದರ್ಶಿ, ಅವರ ಜನ್ಮದಿನಾಂಕ, ವಿಳಾಸ, ನಿವೃತ್ತರಾಗಿದ್ದರೆ ಮನೆ ವಿಳಾಸ ನೀಡಿ. ಪ್ರಾಧಿಕಾರದ ಹಿತಾಸಕ್ತಿಗೆ ವಿರುದ್ಧವಾಗಿ ದಿನೇಶ್ ಕುಮಾರ್ ನಡೆದುಕೊಂಡಿದ್ದಾರೆ. ದಿನೇಶ್ ಕುಮಾರ್ ಗಂಭೀರವಾದ ಕರ್ತವ್ಯಲೋಪ ಎಸಗಿದ್ದಾರೆ. ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಜವಬ್ದಾರಿಯುತ ಸರ್ಕಾರಿ ನೌಕರನ ರೀತಿ ನಡೆದುಕೊಂಡಿಲ್ಲ. ಕರ್ನಾಟಕ ನಾಗರೀಕ ಸೇವಾ ನಿಯಮಗಳು-1957 ರ ಅಧಿನಿಯಮದ ಅಡಿ ಶಿಸ್ತುಕ್ರಮ ಜರುಗಿಸಲು ಅನುವಾಗುವಂತೆ ದೋಷಾರೋಪ ಸಲ್ಲಿಸಿ. ಮೂಲ ಅಥವಾ ದೃಢೀಕೃತ ಪ್ರತಿಗಳೊಂದಿಗೆ ಸರ್ಕಾರಕ್ಕೆ ಕಳುಹಿಸಿ ಎಂದು ಕೆ.ಲತಾ ಅವರಿಂದ ಮುಡಾ ಆಯುಕ್ತ ರಘುನಂದನ್ಗೆ ಪತ್ರ ಕಳುಹಿಸಲಾಗಿದೆ.
ಇದನ್ನೂ ಓದಿ: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ವರದಿಯಲ್ಲಿ ಕ್ಲೀನ್ಚಿಟ್
ಈ ಮಧ್ಯೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಆರೋಪ ಸಂಬಂಧ ಲೋಕಾಯುಕ್ತ ತನಿಖಾ ವರದಿ ಸಿದ್ಧಗೊಂಡಿದೆ. ಮೈಸೂರು ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ಅಕ್ರಮದ ತನಿಖೆ ನಡೆದಿದ್ದು, 3,000ಕ್ಕೂ ಹೆಚ್ಚು ಪುಟಗಳ ವರದಿ ಸಿದ್ಧಪಡಿಸಲಾಗಿದೆ. ಕೋರ್ಟ್ ನೀಡಿದ್ದ ಗಡುವಿನ ಒಳಗೆ ವರದಿ ಸಲ್ಲಿಸಲು ಲೋಕಾಯಕ್ತ ನಿರ್ಧಾರ ಮಾಡಿದೆ. ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ವರದಿಯಲ್ಲಿ ಕ್ಲೀನ್ಚಿಟ್ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ