ಮನೆಯ ಕಿಟಕಿ ಮುರಿದು ಒಳನುಗ್ಗಿ ಚಿನ್ನಾಭರಣ ಕದ್ದ ಖದೀಮರು; 110 ಗ್ರಾಂ ಬಂಗಾರ ಕಳವು

ಕುಟುಂಬಸ್ಥರು ಊರಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿರುವ ಕಳ್ಳರು ಕೊಠಡಿಯ ಬೀರುವಿನಲ್ಲಿದ್ದ ಚಿನ್ನಾಭರಣ ಕದ್ದು ಎಸ್ಕೇಪ್​​ ಆಗಿರುವ ಘಟನೆ ಮೈಸೂರು ತಾಲೂಕು ಹುಲ್ಯಾಳು ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಇತ್ತ ಬೆಂಗಳೂರಿನ ಕೋಣನಕುಂಟೆಯಲ್ಲಿ ವಿದ್ಯಾರ್ಥಿಗಳು ವಾಸವಿದ್ದ ಬಾಡಿಗೆ ಮನೆಗೆ ನುಗ್ಗಿದ ದರೋಡೆಕೋರರ ಗುಂಪು, ಅವರ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್​​ಗಳನ್ನು ದೋಚಿರುವ ಬಗ್ಗೆ ದೂರು ದಾಖಲಾಗಿದೆ.

ಮನೆಯ ಕಿಟಕಿ ಮುರಿದು ಒಳನುಗ್ಗಿ ಚಿನ್ನಾಭರಣ ಕದ್ದ ಖದೀಮರು; 110 ಗ್ರಾಂ ಬಂಗಾರ ಕಳವು
ಮನೆಯಲ್ಲಿದ್ದ ಚಿನ್ನಾಭರಣ ಕಳವು
Image Credit source: Tv9 Kannada
Edited By:

Updated on: Apr 19, 2026 | 7:47 AM

ಮೈಸೂರು, ಏಪ್ರಿಲ್​​ 19: ಮನೆಯ ಕಿಟಕಿ ಮುರಿದು ಖದೀಮರು ಚಿನ್ನಾಭರಣ ಕಳ್ಳತನ ನಡೆಸಿರುವ ಘಟನೆ ಮೈಸೂರು ತಾಲೂಕು ಹುಲ್ಯಾಳು ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಜುಬೇರ್ ಎಂಬುವವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಸುಮಾರು 110ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಜುಬೇರ್ ಕುಟುಂಬ ನಾಲ್ಕು ದಿನಗಳ ಹಿಂದೆ ಊರಿಗೆ ತೆರಳಿದ್ದು, ನಿನ್ನೆ ಮಧ್ಯಾಹ್ನ ಹಿಂತಿರುಗಿ ಬಂದು ನೋಡಿದಾಗ ಕಳ್ಳತನದ ವಿಚಾರ ಗೊತ್ತಾಗಿದೆ. ಮನೆಯ ಕೊಠಡಿಯ ಬೀರುವಿನಲ್ಲಿದ್ದ ಚಿನ್ನ ಕಳುವಾಗಿದ್ದು, ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿಗಳಿದ್ದ ಮನೆಗೆ ನುಗ್ಗಿ ದರೋಡೆ

ಮನೆಗೆ ನುಗ್ಗಿದ ಆರು ಮಂದಿ ಅಪರಿಚಿತರು ಕೇರಳ ಮೂಲದ ಮೂವರು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿ ದರೋಡೆ ನಡೆಸಿರುವ ಘಟನೆ ಬೆಂಗಳೂರಿನ ಕೊಣನಕುಂಟೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ, ಖಾಸಗಿ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಬಾಡಿಗೆ ಮನೆಯಲ್ಲಿ ವಾಸವಿದ್ದರು. ರಾತ್ರಿ ಸುಮಾರು 11 ಗಂಟೆಗೆ ಬಾಗಿಲು ಲಾಕ್ ಇದ್ದರೂ ಹಿಂಭಾಗದ ಮೂಲಕ ಆರೋಪಿಗಳು ಮನೆಗೆ ನುಗ್ಗಿದ್ದರು ಎನ್ನಲಾಗಿದೆ. ಗ್ಯಾಂಗ್ ವಿದ್ಯಾರ್ಥಿಗಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬೆದರಿಕೆ ಹಾಕಿ, ಮೂರು ಮೊಬೈಲ್ ಫೋನ್‌ಗಳು ಹಾಗೂ ಸುಮಾರು 10,000 ರೂ. ನಗದು ದೋಚಿಕೊಂಡು ಪರಾರಿಯಾಗಿದೆ. ಈ ವೇಳೆ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಆರೋಪಿಗಳು ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಈ ಸಂಬಂಧ ಕೊಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕಸ್ಟಡಿಯಿಂದ ಎಸ್ಕೇಪ್ ಆದ ಆರೋಪಿ!

ಲಕ್ಷಾಂತರ ಮೌಲ್ಯದ ದಾಳಿಂಬೆ ಕಳ್ಳತನಕ್ಕೆ ಯತ್ನ

ಜಮೀನಿಗೆ ನುಗ್ಗಿರುವ 8-10 ಜನರ ಗುಂಪೊಂದು ಲಕ್ಷಾಂತರ ಮೌಲ್ಯದ ದಾಳಿಂಬೆ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ಹೊರವಲಯದಲ್ಲಿ ನಡೆದಿದೆ. ಸೂರ್ಯನಾರಾಯಣ ರಾಜು ಅವರಿಗೆ ಸೇರಿದ ಜಮೀನಿಗೆ ಲಗ್ಗೆ ಇಟ್ಟಿದ್ದ ಆರೋಪಿಗಳು ದಾಳಿಂಬೆ ಕಳವಿಗೆ ಯತ್ನಿಸಿದ್ದಾರೆ. ಈ ವೇಳೆ ನಾಯಿ ಬೊಗಳಿದ ಕಾರಣ, ತಂದಿದ್ದ ಆಟೋ ಬಿಟ್ಟು ಖದೀಮರು ಓಡಿ ಹೋಗಿದ್ದಾರೆ. ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:45 am, Sun, 19 April 26

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us