ಮೈಸೂರು: ದಸರಾ ಡ್ಯೂಟಿ ಮುಗಿಸಿ ಕಾಡಿಗೆ ಹೊರಟ ಗಜಪಡೆ, ಮಾವುತರು ಕಾವಾಡಿಗಳಿಗೆ ಹೆಚ್ಚು ಗೌರವ ಧನ ನೀಡಿ ಬಿಳ್ಕೊಡುಗೆ
ಮಾವುತರು ಕಾವಾಡಿಗಳ ಕೋರಿಕೆ ಮೇರೆಗೆ ಈ ಬಾರಿ ಅವರಿಗೆ ಹೆಚ್ಚು ಗೌರವಧನ ನೀಡಲಾಗಿದೆ. ಕಳೆದ ವರ್ಷ ತಲಾ ಹತ್ತು ಸಾವಿರ ಗೌರವ ಧನ ನೀಡಲಾಗಿತ್ತು. ಈ ಬಾರಿ 55 ಮಂದಿಗೆ ತಲಾ 15 ಸಾವಿರ ರೂ. ಗೌರವ ಧನ ನೀಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಕೆವಿ ರಾಜೇಂದ್ರ ಹೇಳಿದ್ದಾರೆ.
ಮೈಸೂರು, ಅಕ್ಟೋಬರ್ 26: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಪ್ರಮುಖ ಆಕರ್ಷಣೆ ಜಂಬೂಸವಾರಿ. ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ನಿಭಾಯಿಸಿದ ದಸರಾ ಗಜಪಡೆ (Elephants) ಇಂದು ನಾಡಿನಿಂದ ಕಾಡಿನತ್ತ ಪ್ರಯಾಣ ಬೆಳೆಸಿವೆ. ಕಾಡಿಗೆ ಹೊರಟ ಆನೆಗಳಿಗೆ ಜಿಲ್ಲಾಡಳಿತದಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡಲಾಯ್ತು. ಒಲ್ಲದ ಮನಸಿನಲ್ಲೇ ಗಜಪಡೆಗಳು ಕಾಡಿನತ್ತ ಮುಖ ಮಾಡಿದವು. ಮಾವುತರು ಕಾವಾಡಿಗಳ ಕೋರಿಕೆ ಮೇರೆಗೆ ಈ ಬಾರಿ ಅವರಿಗೆ ಹೆಚ್ಚು ಗೌರವಧನ ನೀಡಲಾಗಿದೆ. ಕಳೆದ ವರ್ಷ ತಲಾ ಹತ್ತು ಸಾವಿರ ಗೌರವ ಧನ ನೀಡಲಾಗಿತ್ತು. ಈ ಬಾರಿ 55 ಮಂದಿಗೆ ತಲಾ 15 ಸಾವಿರ ರೂ. ಗೌರವ ಧನ ನೀಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಕೆವಿ ರಾಜೇಂದ್ರ ಹೇಳಿದ್ದಾರೆ.
ಸೊಂಡಿಲೆತ್ತಿ ಸಲಾಮು ಹೇಳಿದ ದಸರಾ ಗಜಪಡೆ, ಕುಂಬಳಕಾಯಿ ಆರತಿ ಎತ್ತಿ ಆನೆಗಳಿಗೆ ವಿಶೇಷ ಪೂಜೆ. ಸಲೀಸಾಗಿ ಲಾರಿ ಹತ್ತಿದ ಆನೆಗಳು, ಎಲ್ಲರ ಮುಖದಲ್ಲೂ ಬೇಸರ. ಇದು ಮೈಸೂರು ಅರಮನೆ ಆವರಣದಲ್ಲಿ ಕಂಡು ಬಂದ ದೃಶ್ಯ. ಹೌದು ಇಂದು ದಸರಾ ಗಜಪಡೆಗೆ ಮೈಸೂರು ಅರಮನೆ ಆವರಣದಲ್ಲಿ ಬೀಳ್ಕೊಡುಗೆ ನೀಡಲಾಯ್ತು. ಎರಡು ತಿಂಗಳಿಂದ ಅರಮನೆ ಅಂಗಳದಲ್ಲಿ ಬೀಡು ಬಿಟ್ಟಿದ್ದ ಆನೆಗಳು, ಯಶಸ್ವಿಯಾಗಿ ಜಂಬೂಸವಾರಿ ಪೂರ್ಣಗೊಳಿಸಿದ್ದವು. ನಿನ್ನೆ ವಿಶ್ರಾಂತಿ ಪಡೆದಿದ್ದ ಆನೆಗಳು, ಇಂದು ವಾಪಸ್ಸು ಕಾಡಿಗೆ ಹೊರಟವು. ಕಾಡಿಗೆ ಹೊರಟ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡುಗೆ ನೀಡಲಾಯ್ತು.
ಪುರೋಹಿತರಾದ ಪ್ರಹ್ಲಾದ್, ಡಿಸಿ ಡಾ. ಕೆವಿ ರಾಜೇಂದ್ರ ಡಿಸಿಎಫ್ ಸೌರಬ್ ಕುಮಾರ್, ಪಶು ವೈದ್ಯ ಮುಜೀಬ್ ನೇತೃತ್ವದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಲಾಯ್ತು. ಪೂಜೆ ನಂತರ ಆನೆಗಳು ಮತ್ತಿಗೋಡು, ರಾಮಪುರ, ದುಬಾರೆ ಶಿಬಿರಗಳಿಗೆ ಪ್ರಯಾಣ ಬೆಳೆಸಿದವು. ಆನೆ ಜೊತೆಗೆ ಬಂದಿದ್ದ ಮಾವುತ ಕಾವಾಡಿಗಳಿಗೆ ಅರಮನೆ ಆಡಳಿತ ಮಂಡಳಿಯಿಂದ ಗೌರವಿಸಿ ಸನ್ಮಾನಿಸಿ ಬೀಳ್ಕೊಡಲಾಯ್ತು.
ಇದನ್ನೂ ಓದಿ: ನಂದಿಪೂಜೆ ಬಳಿಕವೇ ಜಂಬೂಸವಾರಿಗೆ ಮುನ್ನುಡಿ: ಈ ಪೂಜೆಯ ಹಿಂದಿದೆ ರಾಜರ ಕಾಲದ ಇತಿಹಾಸ
ಎರಡು ತಿಂಗಳ ಹಿಂದೆ ಅರಮನೆ ಅಂಗಳಕ್ಕೆ ಬಂದಿದ್ದ ಆನೆಗಳಿಗೆ ವಿಶೇಷ ಆರೈಕೆ ಮಾಡಲಾಗಿತ್ತು. ಮೈಸೂರಿನಲ್ಲಿದ್ದಾಗ ಆನೆಗಳಿಗೆ ಬೇಯಿಸಿದ ಕಾಳು, ತರಕಾರಿ, ಹಸಿ ಸೊಪ್ಪು ಮತ್ತು ಬೆಲ್ಲ- ಭತ್ತದಿಂದ ಮಾಡಿದ ಕುಸುರೆಗಳನ್ನು ನೀಡಲಾಗುತ್ತಿತ್ತು. ನಾಳೆಯಿಂದ ಎಂದಿನಂತೆ ನೈಸರ್ಗಿಕವಾಗಿ ಕಾಡಿನ ಮೇವು ಸವಿಯಲಿವೆ. ಈ ಬಾರಿ ಅಭಿಮನ್ಯು ನೇತೃತ್ವದ 14 ಆನೆಗಳನ್ನ ಕರೆತರಲಾಗಿತ್ತು. ಅಭಿಮನ್ಯು, ಭೀಮಾ,ಅರ್ಜುನ, ಕಂಜನ್, ವಿಜಯ, ವರಲಕ್ಷ್ಮೀ, ಗೋಪಿ,ಸುಗ್ರೀವ,ಧನಂಜಯ,ಹಿರಣ್ಯ, ರೋಹಿತ್, ಪ್ರಶಾಂತ್,ಮಹೇಂದ್ರ,ಲಕ್ಷ್ಮೀ ಆನೆಗಳು ಮರಳಿ ಲಾರಿಗಳ ಮೂಲಕ ತಮ್ಮ ಕ್ಯಾಂಪ್ ಗೆ ತೆರಳಿದ್ವು.
ಸದ್ಯ ಆನೆಗಳು ಅರಮನೆಯಿಂದ ಕಾಡಿನತ್ತ ಪ್ರಯಾಣ ಬೆಳೆಸಿದ್ದು ಎಲ್ಲರಿಗೂ ಬೇಸರ ತಂದಿತ್ತು. ಅರಮನೆ ಆವರಣದಲ್ಲಿ ಆನೆಗಳನ್ನು ಲಾರಿಗೆ ಹತ್ತಿಸಲಾಯ್ತು. ಎಲ್ಲಾ ಆನೆಗಳು ಒಂದೊಂದಾಗಿ ಲಾರಿಯನ್ನು ಹತ್ತಿದವು. ಸದ್ಯ ಅರಮನೆಯಂಗಳದಲ್ಲಿ ಆನೆಗಳಿಲ್ಲದೆ ನೀರವ ಮೌನ ಆವರಿಸಿದೆ. ಮತ್ತೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಜಪಡೆಯ ಕಲರವ ಕೇಳಬೇಕು ಅಂದರೆ ಮುಂದಿನ ದಸರೆಯವರೆಗೂ ಕಾಯಲೇಬೇಕು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ