ಕುಡಿದ ಅಮಲಿನಲ್ಲಿ ತನ್ನ ಮನೆಗೆ ತಾನೇ ಬೆಂಕಿಯಿಟ್ಟ ವ್ಯಕ್ತಿ: ಇಡೀ ಮನೆ ಬೆಂಕಿಗಾಹುತಿ
ಮೈಸೂರಿನ ಅಗ್ರಹಾರದಲ್ಲಿ ಒಬ್ಬ ವ್ಯಕ್ತಿ ಕುಡಿದ ನಶೆಯಲ್ಲಿ ತನ್ನ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಬೆಳಗ್ಗೆಯೇ ಕುಡಿದು ಬಂದು ಮತ್ತೆ ಕುಡಿಯಲು ಹಣಕ್ಕಾಗಿ ಮನೆಯವರ ಜೊತೆ ಜಗಳವಾಗಿದೆ. ಈ ವೇಳೆ ಸೇದುತ್ತಿದ್ದ ಬೀಡಿ ಹಾಸಿಗೆ ಮೇಲೆ ಇಟ್ಟಿದ್ದಕ್ಕೆ ಬೆಂಕಿ ಹೊತ್ತುಕೊಂಡಿದ್ದು, ಇಡೀ ಮನೆಗೆ ವ್ಯಾಪಿಸಿದೆ.

ಮೈಸೂರು, ಮಾರ್ಚ್ 01: ಕುಡಿದ ಅಮಲಿನಲ್ಲಿ ವ್ಯಕ್ತಿ ಓರ್ವ ತನ್ನ ಮನೆಗೆ ತಾನೇ ಬೆಂಕಿಯಿಟ್ಟುಕೊಂಡಿರುವಂತಹ (fire) ಘಟನೆ ಮೈಸೂರಿನ ಅಗ್ರಹಾರದ ಮಧುವನ ಬಡಾವಣೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡು ಇಡೀ ಮನೆ ಅಗ್ನಿಗಾಹುತಿಯಾಗಿದ್ದು, ಬಟ್ಟೆ, ದವಸ ಧಾನ್ಯ, ಗೃಹೋಪಯೋಗಿ ವಸ್ತುಗಳು ಸುಟ್ಟುಹೋಗಿವೆ.
ನಡೆದದ್ದೇನು?
ಕುಡಿತದ ದಾಸನಾಗಿದ್ದ ಗುರು, ಬೆಳಗ್ಗೆಯೇ ಕುಡಿದು ಬಂದು ಮತ್ತೆ ಕುಡಿಯಲು ಹಣ ಕೇಳಿದ್ದಾರೆ. ಈ ವಿಚಾರಕ್ಕೆ ಮನೆಯವರ ಜೊತೆ ಗಲಾಟೆ ಮಾಡಿಕೊಂಡು ಬೀಡಿ ಸೇದುತ್ತಿದ್ದರು. ಕುಡಿದ ನಶೆಯಲ್ಲಿ ಗುರು ಬೀಡಿ ಸೇದಿ ಬೆಡ್ ಮೇಲಿಟ್ಟಿದ್ದಾರೆ. ಹೀಗಾಗಿ ಹಾಸಿಗೆಗೆ ಹೊತ್ತಿಕೊಂಡಿದ್ದ ಬೆಂಕಿ ಇಡೀ ಮನೆಗೆ ವ್ಯಾಪಿಸಿದೆ. ಮನೆಯವರು ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ವಸ್ತುಗಳೆಲ್ಲಾ ಸುಟ್ಟುಹೋಗಿವೆ.
ಕುಡಿದ ಅಮಲಿನಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವಂತಹ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕು ಪಾರಾಂಡಹಳ್ಳಿ ಗ್ರಾಮದ ಬಳಿ ಇರುವ ನಗರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಮೈಸೂರು: ಡಾಲಿ ಧನಂಜಯ ಮದುವೆಗೆ ಹಾಕಲಾಗಿದ್ದ ಸೆಟ್ ಪಕ್ಕದಲ್ಲಿ ಬೆಂಕಿ ಅವಘಡ
ಘಟಕದ ಬಳಿ ಕೂತು ಕುಡಿದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗುತ್ತಿದೆ. ಕಳೆದ ರಾತ್ರಿಯಿಂದ ಬೆಂಕಿ ಹೊತ್ತಿ ಉರಿಯುತ್ತಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹಾಗೂ ನಗರಸಭೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಸದ್ಯ ಇಡಿ ಪ್ರದೇಶ ದಟ್ಟವಾಗಿ ಹೊಗೆಯಿಂದ ಆವರಿಸಿಕೊಂಡಿತ್ತು.
ವನ್ಯಧಾಮಕ್ಕೆ ಬೆಂಕಿಯಿಟ್ಟ ಆರೋಪ: ಓರ್ವನ ಬಂಧನ
ಚಿತ್ರದುರ್ಗದ ಜೋಗಿಮಟ್ಟಿ ವನ್ಯಧಾಮಕ್ಕೆ ಬೆಂಕಿಯಿಟ್ಟ ಆರೋಪ ಹಿನ್ನಲೆ ಆರೋಪಿ ಸಂಗಪ್ಪ ಎಂಬಾತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿ ಸಂಗಪ್ಪ ಚಿತ್ರದುರ್ಗ ತಾಲೂಕಿನ ಜಂಪಯ್ಯನಹಟ್ಟಿ ನಿವಾಸಿ. RFO ವಸಂತಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.