ಮೈಸೂರು ದಸರಾ ಸಂಭ್ರಮ: ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜಂಬೂಸವಾರಿ ಕಣ್ತುಂಬಿಕೊಂಡ ಜನಸ್ತೋಮ
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಮೊದಲ ಬಾರಿಗೆ 750 ಕೆಜಿ ಚಿನ್ನದ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಪ್ರಶಾಂತ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು, ಸಂಭ್ರಮದ ಕ್ಷಣವನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡಿದ್ದಾರೆ. ದಸರಾಗೆ ಸಿನಿ ತಾರೆಯರ ಮೆರುಗು ಒಂದೆಡೆಯಾದರೆ, ಜಂಬೂ ಸವಾರಿಗೂ ಮುನ್ನ ನಡೆದ ಸ್ತಬ್ಧ ಚಿತ್ರಗಳ ಮೆರವಣಿಯೂ ನೋಡುಗರ ಕಣ್ಮನ ಸೆಳೆದಿದೆ.

ಮುಖ್ಯಾಂಶಗಳು
- ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವಿಶ್ವವಿಖ್ಯಾತ ಜಂಬೂಸವಾರಿ ಸಂಭ್ರಮ
- ಮೊದಲ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತ ಆನೆ ಪ್ರಶಾಂತ
- ಸಂಜೆ 4.28ರ ಶುಭ ಮೀನ ಲಗ್ನದಲ್ಲಿ ಜಂಬೂಸವಾರಿಗೆ ಸಿಎಂ ಡಿಕೆಶಿ ಚಾಲನೆ
ಮೈಸೂರು, ಅಕ್ಟೋಬರ್ 21: ಸಾಂಸ್ಕೃತಿಕ ನಗರಿಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಲಕ್ಷಾಂತರ ಜನರ ಸಮ್ಮುಖದಲ್ಲಿ ವೈಭವೋಪೇತವಾಗಿ ಸಂಪನ್ನಗೊಂಡಿದ್ದು, ಮೊದಲ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತ ಆನೆ ಪ್ರಶಾಂತ ಮೈಸೂರು ಅರಮನೆಯಿಂದ ಬನ್ನಿಮಂಟಪ ಮೈದಾನದವರೆಗೆ ರಾಜಗಾಂಭೀರ್ಯದಲ್ಲಿ ಹೆಜ್ಜೆ ಹಾಕಿದ್ದಾನೆ. ಸಂಜೆ 4.28ರ ಶುಭ ಮೀನ ಲಗ್ನದಲ್ಲಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ್ದರು. ಸಂಸದ ಮತ್ತು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತೆಲಂಗಾಣ ಸಿಎಂ ರೇವಂತ ರೆಡ್ಡಿ, ಕೇರಳ ಸಿಎಂ ವಿ. ಡಿ. ಸತೀಶನ್, ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಮೈಸೂರು ಡಿಸಿ ಲಕ್ಷ್ಮೀಕಾಂತರೆಡ್ಡಿ, ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೇರದಂತೆ ಗಣ್ಯಾತಿ ಗಣ್ಯರು ಈ ವೇಳೆ ಉಪಸ್ಥಿತರಿದ್ದರು.
ಜಂಬೂಸವಾರಿಯಲ್ಲಿ ಒಟ್ಟು 12 ಆನೆಗಳು ಭಾಗಿ
ದಸರಾ ಜಂಬೂಸವಾರಿಯಲ್ಲಿ ಒಟ್ಟು 12 ಆನೆಗಳು ಭಾಗಿಯಾಗಿದ್ದವು. ಪ್ರಶಾಂತ ಚಿನ್ನದ ಅಂಬಾರಿ ಹೊತ್ತಿದ್ದರೆ, ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ರೂಪಾ ಆತನಿಗೆ ಸಾಥ್ ನೀಡಿವೆ. ನಿಶಾನೆ ಆನೆಯಾಗಿ ಗಜಪಡೆಯನ್ನು ಅಭಿಮನ್ಯು ಮುನ್ನಡೆಸಿದ್ದರೆ, ನೌಪತ್ ಆನೆಯಾಗಿ ಅಭಿಮನ್ಯು ಹಿಂದೆ ಗೋಪಿ ಆನೆ ಸಾಗಿದೆ. ಮೊದಲ ಸಾಲಾನೆಗಳಾಗಿ ಮಹೇಂದ್ರ, ಶ್ರೀರಾಮ, ಶ್ರೀಕಂಠ ಹೆಜ್ಜೆ ಹಾಕಿದ್ದು, 2ನೇ ಸಾಲಾನೆಗಳಾಗಿ ಚೈತ್ರಾ ಹಾಗೂ ಲಕ್ಷ್ಮೀ ಆನೆಗಳು ಸಾಗಿವೆ. ಮೂರನೇ ಸಾಲಾನೆಗಳಾಗಿ ಸುಗ್ರೀವ ಹಾಗೂ ಏಕಲವ್ಯ ಭಾಗಿಯಾಗಿವೆ. 18 ಬಾರಿ ದಸರಾ ಜಂಬೂಸವಾರಿಯಲ್ಲಿ ಭಾಗಿಯಾಗಿದ್ದ ಪ್ರಶಾಂತ ಆನೆಗೆ ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಸಿಕ್ಕಿತ್ತು. ಹಾಗೆಯೇ 6 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅಭಿಮನ್ಯು ಈ ಬಾರಿ ನಿಶಾನೆ ಆನೆಯಾಗಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ಮೈಸೂರು ದಸರಾ: ತಾಯಿ ಚಾಮುಂಡೇಶ್ವರಿ ಜಂಬೂಸವಾರಿ ವೇಳೆ ಮಳೆ ಸುರಿಯುವುದು ಏಕೆ?
ದಸರಾಗೆ ಸಿನಿ ತಾರೆಯರ ಮೆರುಗು
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಚಿತ್ರತಾರೆಯರ ದಂಡೇ ಭಾಗಿಯಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ನಟರಾದ ವಿ.ರವಿಚಂದ್ರನ್, ಕಿಚ್ಚ ಸುದೀಪ್, ರಮೇಶ್ ಅರವಿಂದ್, ಮುಖ್ಯಮಂತ್ರಿ ಚಂದ್ರು, ದೇವರಾಜ್, ದೊಡ್ಡಣ್ಣ, ಸುಂದರ್ರಾಜ್, ಸಾಧುಕೋಕಿಲ, ಡಾಲಿ ಧನಂಜಯ್, ಪ್ರಜ್ವಲ್, ನೆನಪಿರಲಿ ಪ್ರೇಮ್, ಶ್ರೀಮುರಳಿ, ಗಣೇಶ್, ಶರಣ್, ಶ್ರೀರಾಮ್, ನೀನಾಸಂ ಸತೀಶ್, ದುನಿಯಾ ವಿಜಯ್, ಅಜಯ್ ರಾವ್, ತರುಣ್ ಸುಧೀರ್, ಮನೋರಂಜನ್, ಸಾ.ರಾ.ಗೋವಿಂದು ಸೇರಿದಂತೆ ಹಲವರು ಭಾಗಿಯಾಗಿದ್ದರು. ನಟಿಯರಾದ ರುಕ್ಮಿಣಿ ವಸಂತ್, ಸಪ್ತಮಿಗೌಡ, ಸೋನಾಲ್, ಪೂಜಾಗಾಂಧಿ, ರಾಗಿಣಿ ದ್ವಿವೇದಿ, ಹೇಮಾ ಚೌಧರಿ, ವಿಜಯಲಕ್ಷ್ಮೀ ಸಿಂಗ್ ಕೂಡ ಉಪಸ್ಥಿತರಿದ್ದರು.
ಮೈಸೂರು ದಸರಾ ಕಣ್ತುಂಬಿಕೊಂಡ ವಿದೇಶಿ ಗಣ್ಯರು
11 ದೇಶಗಳ ರಾಯಭಾರಿಗಳು, ವಿದೇಶಿ ಗಣ್ಯರು ಕೂಡ ಅದ್ಧೂರಿ ಮೈಸೂರು ದಸರಾವನ್ನು ಕಣ್ತುಂಬಿಕೊಂಡಿದ್ದಾರೆ. ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಸ್ವಿಟ್ಜರ್ಲೆಂಡ್, ಇಟಲಿ, ಮಲೇಷಿಯಾ, ನೆದರ್ಲ್ಯಾಂಡ್ನಿಂದ ಆಗಮಿಸಿರುವ ಗಣ್ಯರು ಅರಮನೆ ಆವರಣದಲ್ಲಿ ಕುಳಿತು ದಸರಾ ವೀಕ್ಷಿಸಿದ್ದಾರೆ.
ನೋಡುಗರ ಕಣ್ಮನ ಸೆಳೆದ ಸ್ತಬ್ಧ ಚಿತ್ರಗಳ ಮೆರವಣಿಗೆ
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೂ ಮುನ್ನ ನಡೆದ ಸ್ತಬ್ಧ ಚಿತ್ರಗಳ ಮೆರವಣಿಗೆ ನೋಡುಗರ ಕಣ್ಮನ ಸೆಳೆದಿವೆ. ಮೆರವಣಿಗೆಯಲ್ಲಿ 16 ಜಿಲ್ಲೆಗಳ, ರಾಜ್ಯ ಸರ್ಕಾರದ 18 ಮತ್ತು ಕೇಂದ್ರ ಸರ್ಕಾರದ 11 ಸೇರಿ ಒಟ್ಟು 60 ಸ್ತಬ್ಧಚಿತ್ರಗಳ ಪ್ರದಶರ್ಶನ ನಡೆದಿದೆ. ದಸರಾ ಮೆರವಣಿಗೆಯಲ್ಲಿ ಹೊರ ರಾಜ್ಯದ ಸ್ತಬ್ಧ ಚಿತ್ರಗಳಿಗೂ ಅವಕಾಶ ನೀಡಲಾಗಿದ್ದು, ಕೀಲುಕುದುರೆ, ಗೊರವರ ಕುಣಿತ, ಡೊಳ್ಳು ಕುಣಿತ, ಯಕ್ಷಗಾನ, ಕೀಲುಗೊಂಬೆ, ಮರಗಾಲು, ವೀರಗಾಸೆ, ಹಾಡಿಮಕ್ಕಳ ನೃತ್ಯ ಸೇರಿ ಹಲವು ಸಾಂಸ್ಕೃತಿಕ ಪ್ರದರ್ಶನಗಳು ನೆರವೇರಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:31 pm, Wed, 21 October 26
