ಮೈಸೂರಿನಲ್ಲಿ ಶೂಟೌಟ್: ಕೇರಳ ಉದ್ಯಮಿಯ ದರೋಡೆ ಮಾಡಿದ್ದ ಆರೋಪಿ ಕಾಲಿಗೆ ಗುಂಡೇಟು

| Updated By: Ganapathi Sharma

Updated on: Mar 22, 2025 | 10:38 AM

ಮೈಸೂರು ಹೊರವಲಯದಲ್ಲಿ ದರೋಡೆ ಪ್ರಕರಣದ ಆರೋಪಿ ಆದರ್ಶ್ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಮಹಜರ್ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಆದರ್ಶ್, ಸಬ್ ಇನ್ಸ್ಪೆಕ್ಟರ್ ಮತ್ತು ಪೇದೆಯೊಬ್ಬರನ್ನು ಗಾಯಗೊಳಿಸಿದ್ದ. ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಆದರ್ಶ್ ಕೇರಳ ಮೂಲದವನು ಮತ್ತು ಹಲವು ದಿನಗಳಿಂದ ಪೊಲೀಸರ ಬಲೆಗೆ ಸಿಗದೆ ಪರಾರಿಯಾಗಿದ್ದ.

ಮೈಸೂರಿನಲ್ಲಿ ಶೂಟೌಟ್: ಕೇರಳ ಉದ್ಯಮಿಯ ದರೋಡೆ ಮಾಡಿದ್ದ ಆರೋಪಿ ಕಾಲಿಗೆ ಗುಂಡೇಟು
ಗಾಯಗೊಂಡ ಸಬ್ ಇನ್ಸ್​​ಪೆಕ್ಟರ್ ಪ್ರಕಾಶ್ ಹಾಗೂ ಹರೀಶ್ ಅವರನ್ನು ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ
Follow us on

ಮೈಸೂರು, ಮಾರ್ಚ್ 22: ದರೋಡೆ ಪ್ರಕರಣವೊಂದರಲ್ಲಿ ಶಾಮೀಲಾಗಿದ್ದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ (Shootout) ಘಟನೆ ಮೈಸೂರು (Mysuru) ಹೊರವಲಯದಲ್ಲಿ ನಡೆದಿದೆ. ಮಹಜರ್ ನಡೆಸುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿ ಆಗಲು ಯತ್ನಿಸಿದ ಕಾರಣ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ಹಿಡಿದಿದ್ದಾರೆ. ಆರೋಪಿ ನಡೆಸಿದ ದಾಳಿಯಲ್ಲಿ ಸಬ್ ಇನ್ಸ್​​ಪೆಕ್ಟರ್ ಹಾಗೂ ಪೇದೆಯೊಬ್ಬರಿಗೆ ಗಾಯವಾಗಿದೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರ ಗ್ರಾಮದ ಬಳಿ ಈ ಘಟನೆ ನಡೆದಿದೆ. ಕೇರಳ ಮೂಲದ ಆರೋಪಿ ಆದರ್ಶ್​ಗೆ ಗುಂಡೇಟು ಬಿದ್ದಿದೆ. ಘಟನೆಯಲ್ಲಿ ಜಯಪುರ ಠಾಣೆ ಎ ಎಸ್​ಐ ಪ್ರಕಾಶ್ ಹಾಗೂ ಸಿಬ್ಬಂದಿ ಗಾಯಗೊಂಡಿದ್ದಾರೆ.

ಘಟನೆ ವಿವರ

ಕೆಲವು ದಿನಗಳ ಹಿಂದೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಾರೋಹಳ್ಳಿ ಬಳಿ ದರೋಡೆ ನಡೆದಿತ್ತು. ಹಾಡ ಹಗಲೇ ಕೇರಳ ಮೂಲದ ಉದ್ಯಮಿಯನ್ನು ಅಡ್ಡಗಟ್ಟಿ ದರೋಡೆ ನಡೆಸಲಾಗಿತ್ತು. ಈ ಪ್ರಕರಣಕ್ಕೆ ಸಂಭಂಧಿಸಿದಂತೆ ಪೊಲೀಸರು ಈಗಾಗಲೇ 3 ಆರೋಪಿಗಳನ್ನು ಬಂಧಿಸಿದ್ದರು. ಕೆಲವು ದಿನ ಹಿಂದೆ ಮತ್ತೊಬ್ಬ ಆರೋಪಿ ಆದರ್ಶ್ ಸೇರಿ ಇಬ್ಬರನ್ನು ಬಂಧಿಸಲಾಗಿತ್ತು. ದರೋಡೆಯಲ್ಲಿ ಆದರ್ಶ್ ಪಾತ್ರ ಸಹಾ ಪ್ರಮುಖವಾಗಿತ್ತು. ದರೋಡೆ ನಡೆದ ಸ್ಥಳದ ಬಳಿ ಪೊಲೀಸರಿಗೆ ಕ್ವಾಲಿಸ್ ಕಾರು ದೊರೆತಿತ್ತು. ಇದರ ಮಾಲೀಕ ಆದರ್ಶ್ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಆದರ್ಶ್‌ಗಾಗಿ ಮೈಸೂರು ಜಿಲ್ಲಾ ಪೊಲೀಸರು ತಂಡಗಳನ್ನು ರಚಿಸಿದ್ದರು. ಆದರ್ಶ್ ಬಂಧನ ಸವಾಲಾಗಿತ್ತು. ಕೊನೆಗೂ ಎರಡು ದಿನಗಳ ಹಿಂದೆ ಆದರ್ಶ್ ಪೊಲೀಸರ ಬಲೆಗೆ ಬಿದ್ದಿದ್ದ. ಮೈಸೂರಿಗೆ ಕರೆ ತಂದ ಪೊಲೀಸರು ಈತನ ಕಾರು ದೊರೆತ ಸ್ಥಳಕ್ಕೆ ಮಹಜರ್‌ಗಾಗಿ ಕರೆದುಕೊಂಡು ಹೋಗಿದ್ದರು.

ಪೊಲೀಸರ ಮೇಲೆ ಹಲ್ಲೆ: ಆರೋಪಿ ಕಾಲಿಗೆ ಗುಂಡು

ಆದರ್ಶ್ ಬಂಧಿಸಿದ ಪೊಲೀಸರು ಸ್ಥಳ ಮಹಜರಿಗಾಗಿ ಆದರ್ಶ್ ಕಾರು ಸಿಕ್ಕ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ಜಯಪುರ ಸಬ್ ಇನ್ಸ್​​ಪೆಕ್ಟರ್ ಪ್ರಕಾಶ್ ಬೈಲುಕುಪ್ಪೆ, ಇನ್ಸಪೆಕ್ಟರ್ ದೀಪಕ್ ಹಾಗೂ ಇಬ್ಬರು ಸಿಬ್ಬಂ ಕರೆದೊಯ್ದಿದ್ದರು. ಕಾರು ಪತ್ತೆಯಾದ ಸ್ಥಳವನ್ನು ಆದರ್ಶ್ ಗುರುತಿಸಿದ್ದಾನೆ. ನಂತರ ಮೂತ್ರವಿಸರ್ಜನೆ ನೆಪವೊಡ್ಡಿ ರಸ್ತೆ ಬದಿಯಲ್ಲಿ ನಿಂತಿದ್ದಾನೆ. ಅಲ್ಲಿ ಯಾರೋ ಕುಡಿದು ಬಿಸಾಕಿದ್ದ ಬಿಯರ್ ಬಾಟಲಿ ಈತನ ಕೈಗೆ ಸಿಕ್ಕಿದೆ. ಬಾಟಲಿಯನ್ನು ತೆಗೆದುಕೊಂಡು ಅದನ್ನು ಒಡೆದು ಸಬ್ ಇನ್ಸ್​ಪೆಕ್ಟರ್ ಪ್ರಕಾಶ್ ಹಾಗೂ ಸಿಬ್ಬಂದಿ ಹರೀಶ್ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಪ್ರಕಾಶ್ ಸಾಕಷ್ಟು ಬಾರಿ ಶರಣಾಗುವಂತೆ ಮನವಿ ಮಾಡಿದರೂ ಕೇಳಿಲ್ಲ. ನಿರಂತರ ದಾಳಿ ಮುಂದುವರಿಸಿದ್ದಾನೆ. ಈ ವೇಳೆ ಜೊತೆಯಲ್ಲಿದ್ದ ಬೈಲುಕುಪ್ಪೆ ಇನ್ಸ್​​ಪೆಕ್ಟರ್ ದೀಪಕ್ ಆತ್ಮರಕ್ಷಣೆಗಾಗಿ ತಮ್ಮಲ್ಲಿದ್ದ ಪಿಸ್ತೂಲ್​ನಿಂದ ಆದರ್ಶ್ ಮೇಲೆ ಗುಂಡು ಹಾರಿಸಿದ್ದಾರೆ. ಆದರ್ಶ್ ಎಡಗಾಲಿಗೆ ಗುಂಡು ತಗುಲಿ ಬಿದ್ದಿದ್ದಾನೆ. ಗಾಯಗೊಂಡ ಸಬ್ ಇನ್ಸ್​​ಪೆಕ್ಟರ್ ಪ್ರಕಾಶ್ ಹಾಗೂ ಹರೀಶ್ ಅವರನ್ನು ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕಾಶ್, ಹರೀಶ್ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಗುಂಡು ತಗುಲಿದ ಆದರ್ಶ್​ನನ್ನು ಮೇಟಗಳ್ಳಿಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ
ಪ್ರತಿಭಟನೆಗೆ ಬಂದ್ ಬಿಟ್ಟು ಪರ್ಯಾಯ ದಾರಿ ಹುಡುಕಬೇಕು: ಆಟೋರಿಕ್ಷಾ ಚಾಲಕರು
ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳಲ್ಲೇ ಪತ್ರ ವ್ಯವಹಾರ: ಅಮಿತ್ ಶಾ ಘೋಷಣೆ
ಬೆಂಗಳೂರಿಗೆ ತಟ್ಟದ ಬಂದ್ ಬಿಸಿ: ಯಾವ ಜಿಲ್ಲೆಯಲ್ಲಿ ಹೇಗಿದೆ ಪರಿಸ್ಥಿತಿ?
ಕರ್ನಾಟಕ ಬಂದ್​ಗೆ ಕಾರಣವೇನು? ಏನೇನಿದೆ, ಏನೇನಿಲ್ಲ? ವಿವರ ಇಲ್ಲಿದೆ

ಇದನ್ನೂ ಓದಿ: ಸರ್ಕಾರಿ ಆಂಬ್ಯುಲೆನ್ಸ್​​ನಲ್ಲಿ ಆಕ್ಸಿಜನ್ ಕೊರತೆ: ಹಸುಗೂಸು ದುತಂತ ಸಾವು, ಸಿಎಂ ತವರಿನಲ್ಲಿ ಇದೆಂಥಾ ಸ್ಥಿತಿ!

ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಎಸ್​​ಪಿ ವಿಷ್ಣುವರ್ಧನ್, ಅಡಿಷನಲ್ ಎಸ್​ಪಿ ಮಲ್ಲಿಕ್, ಡಿವೈಎಸ್‌ಪಿ ಕರೀಂ ರಾವತರ್, ಸರ್ಕಲ್ ಇನ್ಸ್​​ಪೆಕ್ಟರ್ ಶೇಖರ್ ಹಾಗೂ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಜಯಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ