ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೊರವಲಯದಲ್ಲಿರುವ ಇಲವಾಲದಿಂದ ವಾರದ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ನಾಗೇಶ್(17) ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಐ ಫೋನ್ (iPhone) ಖರೀದಿ ಮಾಡುವ ವಿಚಾರವಾಗಿ ಮನೆಯವರ ಜೊತೆ ಮುನಿಸಿಕೊಂಡಿದ್ದ ನಾಗೇಶ್ ತಾನೇ ಹಣ ಹೊಂದಿಸಿದ್ದ. ಆತ ಹೊಂದಿಸಿದ್ದ ಹಣಕ್ಕಾಗಿ ಸ್ನೇಹಿತರೇ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ನಾಗೇಶ್ ಪೋಷಕರು ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿದ್ಯಾರ್ಥಿ ನಾಗೇಶ್ ಬಹಳ ದಿನದಿಂದ ಐ ಫೋನ್ ಖರೀದಿ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದ. ಈ ಬಗ್ಗೆ ಪೋಷಕರ ಬಳಿ ಕೇಳಿದಾಗ ಅಷ್ಟೊಂದು ಹಣದ ಫೋನ್ ಏಕೆ ಎಂದು ನಿರಾಕರಿಸಿದ್ದರು. ಹೀಗಾಗಿ ನಾಗೇಶ್ ಪೋಷಕರೊಂದಿಗೆ ಮುನಿಸಿಕೊಂಡಿದ್ದ. ಸದ್ಯ ತಾನೇ ಐ ಫೋನ್ ಖರೀದಿಸಲು ಹಣ ಹೊಂದಿಸುತ್ತಿದ್ದ. ಆದ್ರೆ ವಾರದ ಹಿಂದೆ ಏಕಾಏಕಿ ನಾಗೇಶ್ ನಾಪತ್ತೆಯಾಗಿದ್ದ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿತ್ತು. ಆದ್ರೆ ಇಂದು ವಿದ್ಯಾರ್ಥಿ ನಾಗೇಶ್ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ಸಂಬಂಧ ಪೋಷಕರು ನಾಗೇಶ್ ಹೊಂದಿಸಿದ್ದ ಹಣಕ್ಕಾಗಿ ಸ್ನೇಹಿತರೇ ಕೊಲೆ ಮಾಡಿರಬೇಕು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಪತ್ನಿಗೆ ಸ್ಕ್ರೂಡೈವರ್ ನಿಂದ ಚುಚ್ಚಿ ಕೊಲೆ
ಇನ್ನು ಮತ್ತೊಂದೆಡೆ ಕುಡಿದ ಮತ್ತಿನಲ್ಲಿ ಪತ್ನಿಗೆ ಸ್ಕ್ರೂಡ್ರೈವರ್ನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಕುದೂರು ಸಮೀಪದ ಕೆಂಬಳಲು ಕಾಲೋನಿಯಲ್ಲಿ ನಡೆದಿದೆ. ಅಲ್ಲದೆ ಪತ್ನಿಯನ್ನ ಕೊಲೆಗೈದು ಬಾತ್ ರೂಂ ಪಿಟ್ನಲ್ಲಿ ಬಿಸಾಡಲಾಗಿದೆ. ಜಯಮ್ಮ (52) ಕೊಲೆಯಾದ ಮಹಿಳೆ. ನಾಗರಾಜ್ (58)ಕೊಲೆ ಮಾಡಿದ ಆರೋಪಿ.
ಜಯಮ್ಮಳನ್ನ ಎರಡನೇ ಮದುವೆಯಾಗಿದ್ದ ನಾಗರಾಜ್, ಕಳೆದ ಮೂರು ದಿನಗಳ ಹಿಂದೆ ಕೊಲೆ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ಪತ್ನಿ ಜೊತೆ ಗಲಾಟೆ ಮಾಡಿಕೊಂಡು ಗಲಾಟೆ ವೇಳೆ ಸ್ಕ್ರೂಡ್ರೈವರ್ನಿಂದ ಪತ್ನಿಗೆ ಮನಬಂದಂತೆ ಚುಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಮನೆ ಹಿಂಬದಿಯಿದ್ದ ಬಾತ್ ರೂಂ ಪಿಟ್ಗೆ ಮೃತದೇಹ ಎಸೆದಿದ್ದಾನೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಬ್ಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನ ಹೊರತೆಗೆದು ತುಮಕೂರು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Karnataka Budget 2022: ಮದ್ಯದ ಮೇಲೆ ತೆರಿಗೆ ಹೆಚ್ಚಿಸದಿರಲು ಮಾಡಿರುವ ಮನವಿಗೆ ಸ್ಪಂದಿಸುತ್ತಾರಾ ಬಸವರಾಜ್ ಬೊಮ್ಮಾಯಿ?
Published On - 2:31 pm, Thu, 3 March 22