
ಮೈಸೂರು, (ಜೂನ್ 15): ಮೈಸೂರಿನ (Mysuru) ದಟ್ಟಗಳ್ಳಿ 4ನೇ ಹಂತದ ಬಳಿಯಿರುವ ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್’ (Fox Den Liquor Garage) ಪಬ್ ನಲ್ಲಿ (Pub) ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಈ ಬೆಂಕಿ ದುರಂತದಲ್ಲಿ ಇಬ್ಬರು ಸಜೀವ ದಹನವಾಗಿದ್ದರೆ, ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಪಬ್‌ನಲ್ಲಿ ಕೆಲಸ ಮಾಡುತ್ತಿದ್ದ ಶಾಹಿಲ್, ಪ್ರಕಾಶ್ ಮೃತ ದುರ್ವೈವಿಗಳು. ಇನ್ನು ಗಾಯಗೊಂಡಿರುವ ಏಳು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೈಸೂರಿನ ದಟ್ಟಗಳ್ಳಿ 4ನೇ ಹಂತದ ಬಳಿ ಇರುವ ಪಬ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಮೊದಲು ಪಬ್‌ನ ಅಡುಗೆ ಕೋಣೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಇಡೀ ಪಬ್ ಗೆ ವ್ಯಾಪಿಸಿದ್ದು, ದಟ್ಟವಾದ ಕಪ್ಪು ಹೊಗೆ ಇಡೀ ಕಟ್ಟಡವನ್ನು ಆವರಿಸಿಕೊಂಡಿದೆ. ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ ಅಂದರೆ ಮೇಲ್ನೋಟಕ್ಕೆ ಸಿಲಿಂಡರ್ ಸ್ಫೋಟಗೊಂಡಬಹುದು ಎಂದು ಶಂಕಿಸಲಾಗಿದೆ.
ಆದ್ರೆ, ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸದ್ಯ ಪೊಲೀಸರು ಹಾಗೂ ಅಗ್ನಿಶಾಮಕ ದಳ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
Published On - 5:10 pm, Mon, 15 June 26