ನಾಳೆ ಮೈಸೂರಿಗೆ ಪ್ರಧಾನಿ ಮೋದಿ: ಬಿಗಿ ಪೊಲೀಸ್ ಬಂದೋಬಸ್ತ್; 12 ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ
PM Narendra Modi Mysuru Visit: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಮೈಸೂರಿಗೆ ಆಗಮಿಸುತ್ತಿದ್ದಾರೆ. ರಾಮಕೃಷ್ಣ ಆಶ್ರಮದಲ್ಲಿ ನಿರ್ಮಿಸಿರುವ ವಿವೇಕ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ. ಈಗಾಗಲೇ ಕಾರ್ಯಕ್ರಮದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಧಾನಿ ಮೋದಿ ಆಗಮನ ಹಿನ್ನೆಲೆ ನಗರದಾದ್ಯಂತ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಮುಖ್ಯಾಂಶಗಳು
- ನಾಳೆ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
- ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್
- ನಗರದ 12 ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ
ಮೈಸೂರು, ಜುಲೈ 31: ಸಾಂಸ್ಕೃತಿಕ ನಗರಿ ಮೈಸೂರಿಗೆ (Mysuru) ನಾಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಆಗಮಿಸಲಿದ್ದಾರೆ. ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ಆಯೋಜಿಸಲಾಗಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಜನ ಕೇಂದ್ರದ ‘ವಿವೇಕ ಸ್ಮಾರಕ’ವನ್ನು ಉದ್ಘಾಟಿಸಲಿದ್ದಾರೆ. ಈಗಾಗಲೇ ಕಾರ್ಯಕ್ರಮದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪ್ರಧಾನಿ ಮೋದಿ ಸಂಚರಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಕೂಡ ಅಳವಡಿಸಲಾಗಿದೆ.
ಪ್ರಧಾನಿ ಮೋದಿ ಮೈಸೂರು ಪ್ರವಾಸದ ವೇಳಾಪಟ್ಟಿ ಹೀಗಿದೆ
- ಆಗಸ್ಟ್ 1 ರಂದು ಮಧ್ಯಾಹ್ನ 2:55ಕ್ಕೆ ಪ್ರಧಾನಿ ಮೋದಿ ವಿಶೇಷ ವಿಮಾನದ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
- ನಂತರ ಅಲ್ಲಿಂದ ಮಧ್ಯಾಹ್ನ 3:15ಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ನಗರದ ಓವಲ್ ಮೈದಾನಕ್ಕೆ ತಲುಪಲಿದ್ದಾರೆ.
- ಮಧ್ಯಾಹ್ನ 3:25ಕ್ಕೆ ಓವಲ್ ಮೈದಾನದಿಂದ ರಸ್ತೆ ಮಾರ್ಗವಾಗಿ ವಿವೇಕ ಸ್ಮಾರಕಕ್ಕೆ ತೆರಳಲಿರುವ ಅವರು, ಮಧ್ಯಾಹ್ನ 3:30 ರಿಂದ ಸಂಜೆ 5:15 ರವರೆಗೆ ರಾಮಕೃಷ್ಣ ಆಶ್ರಮದಲ್ಲಿ ನಡೆಯಲಿರುವ ಪ್ರಮುಖ ವೇದಿಕೆ ಕಾರ್ಯಕ್ರಮ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
- ಬಳಿಕ ಸಂಜೆ 5:20ಕ್ಕೆ ರಾಮಕೃಷ್ಣ ಆಶ್ರಮದ ಶಾಲೆಗೆ ಭೇಟಿ ನೀಡಲಿದ್ದು, ಸಂಜೆ 5:30ಕ್ಕೆ ಓವಲ್ ಮೈದಾನದಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ತೆರಳಿ, ಸಂಜೆ 5:55ಕ್ಕೆ ವಿಶೇಷ ವಿಮಾನದ ಮೂಲಕ ದೆಹಲಿಗೆ ವಾಪಸಾಗಲಿದ್ದಾರೆ.
ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಭದ್ರತೆ
ಇನ್ನು ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆ ಮೈಸೂರು ನಗರದಾದ್ಯಂತ ಹಾಗೂ ಅವರು ಸಂಚರಿಸುವ ಮಾರ್ಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ರಸ್ತೆ ಬದಿಗಳಲ್ಲಿ ಶ್ವಾನ ದಳದ ಸಿಬ್ಬಂದಿಯಿಂದ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸರನ್ನು ನಿಯೋಜಿಸಲಾಗಿದೆ. ಜೊತೆಗೆ ಪ್ರಧಾನಿ ಸಂಚರಿಸುವ ಮಾರ್ಗಗಳಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಸುಣ್ಣ-ಬಣ್ಣ ಬಳಿಯಲಾಗಿದೆ.
12 ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ
ಇನ್ನು ನಗರದ 12 ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೆ.ಆರ್.ಬಿ ರಸ್ತೆಯ ಡಿಸಿ ಆಫೀಸ್‌ನಿಂದ ಏಕಲವ್ಯ ಸರ್ಕಲ್‌ವರೆಗೆ, ಬೋಗಾದಿ ರಸ್ತೆ, ಮುಡಾ ಜಂಕ್ಷನ್‌ನಿಂದ ಡಾ. ಪದ್ಮ ವೃತ್ತ, ಪಡುವಾರಹಳ್ಳಿ ಜಂಕ್ಷನ್‌ನಿಂದ ಮೆಟ್ರೋಪೋಲ್ ಸರ್ಕಲ್ ಹಾಗೂ ಜೆ.ಎಲ್.ಬಿ ರಸ್ತೆ, ರಮಾವಿಲಾಸ ರಸ್ತೆ, ಕೃಷ್ಣವಿಲಾಸ ರಸ್ತೆ ಮತ್ತು ದಿವಾನ್ಸ್ ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಪರ್ಯಾಯ ಮಾರ್ಗಗಳು ಯಾವವು?
ಸಾರ್ವಜನಿಕರ ಅನುಕೂಲಕ್ಕಾಗಿ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದ್ದು, ಹುಣಸೂರು ರಸ್ತೆ ಹಾಗೂ ವಿಜಯನಗರ ಕಡೆಯಿಂದ ಬರುವ ವಾಹನ ಸವಾರರು ಗೋಕುಲಂ ರಸ್ತೆ, ಪಂಚವಟಿ, ಜಾವಾ ರಸ್ತೆ ಮತ್ತು ಆಯುರ್ವೇದಿಕ್ ವೃತ್ತದ ಮೂಲಕ ನಗರ ಪ್ರವೇಶಿಸಬೇಕಿದೆ. ಅದೇ ರೀತಿ ಅಗ್ರಹಾರ ಹಾಗೂ ಜೆ.ಪಿ. ನಗರ ಭಾಗದಿಂದ ಬಸ್ ನಿಲ್ದಾಣದತ್ತ ತೆರಳುವವರು ಸಿದ್ಧಪ್ಪ ಸ್ಕ್ವೇರ್, ಎಂ.ಜಿ. ರಸ್ತೆ ಅಂಡರ್ ಬ್ರಿಡ್ಜ್ ಹಾಗೂ ಜಿ.ಎನ್. ರಸ್ತೆ ಮಾರ್ಗವಾಗಿ ಪ್ರಯಾಣಿಸುವಂತೆ ಸೂಚಿಸಲಾಗಿದೆ.
ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆ ಉತ್ತರಗಳು
ಪ್ರಶ್ನೆ: ಪ್ರಧಾನಿ ಮೋದಿ ಯಾವಾಗ ಮೈಸೂರಿಗೆ ಭೇಟಿ ಕೊಡುತ್ತಿದ್ದಾರೆ?
ಉತ್ತರ; ಪ್ರಧಾನಿ ಮೋದಿ ಆಗಸ್ಟ್ 1 ಶನಿವಾರದಂದು ಮೈಸೂರಿಗೆ ಭೇಟಿ ಕೊಡುತ್ತಿದ್ದಾರೆ.
ಪ್ರಶ್ನೆ: ಪ್ರಧಾನಿ ಮೋದಿ ಈಗ ಏಕೆ ಮೈಸೂರಿಗೆ ಭೇಟಿ ಕೊಡುತ್ತಿದ್ದಾರೆ?
ಉತ್ತರ: ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ನಿರ್ಮಿಸಲಾಗಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ (ವಿವೇಕ ಸ್ಮಾರಕ) ಲೋಕಾರ್ಪಣೆ ಮಾಡಲು ಭೇಟಿ ಕೊಡುತ್ತಿದ್ದಾರೆ.
ಇದನ್ನೂ ಓದಿ: ಆಗಸ್ಟ್ 1ರಂದು ಮೈಸೂರಿಗೆ ಪ್ರಧಾನಿ ಮೋದಿ ಭೇಟಿ: 45 ಕೋಟಿ ರೂ ವೆಚ್ಚದ ವಿವೇಕಾನಂದ ಸ್ಮಾರಕ ಲೋಕಾರ್ಪಣೆ
ಪ್ರಶ್ನೆ: ಪ್ರಧಾನಿ ಮೋದಿ ಯಾವ ಸಮಯಕ್ಕೆ ಮೈಸೂರಿಗೆ ಭೇಟಿ ಕೊಡುತ್ತಿದ್ದಾರೆ?
ಉತ್ತರ: ಪ್ರಧಾನಿ ಮೋದಿ ಮಧ್ಯಾಹ್ನ 2:55ಕ್ಕೆ ಮೈಸೂರಿಗೆ ಆಗಮಿಸಲಿದ್ದಾರೆ.
ಪ್ರಶ್ನೆ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ಎಲ್ಲಿದೆ?
ಉತ್ತರ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ಮೈಸೂರಿನಲ್ಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:20 pm, Fri, 31 July 26




