ನನ್ನಂಥ ರಾಜಕಾರಣಿ ಈ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಯಾರು ಇಲ್ಲ -ಶಾಸಕ ಜಿ.ಟಿ.ದೇವೆಗೌಡ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಜಿ.ಟಿ.ದೇವೇಗೌಡರು ಕಾಂಗ್ರೆಸ್ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಸಾಲ ಮಾಡಿಕೊಂಡು ರಾಜಕಾರಣ ಮಾಡಿದ್ದೇನೆ. ನಗರಾಭಿವೃದ್ಧಿ ಪ್ರಾಧಿಕಾರದ ಮಂತ್ರಿಗಳು ಜವಾಬ್ದಾರಿಯಿಂದ ಇಲಾಖೆ ನಡೆಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ತಮ್ಮ ವಿರುದ್ಧ ಬಂದ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಮೈಸೂರು, ಜುಲೈ.27: ನನ್ನಂಥ ರಾಜಕಾರಣಿ ಈ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಯಾರು ಇಲ್ಲ. ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಸಾಲ ಮಾಡಿಕೊಂಡು ರಾಜಕಾರಣ ಮಾಡಿದ್ದೇನೆ. ನಗರಾಭಿವೃದ್ಧಿ ಪ್ರಾಧಿಕಾರದ ಮಂತ್ರಿಗಳು ಜವಾಬ್ದಾರಿಯಿಂದ ಇಲಾಖೆ ನಡೆಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಮೈಸೂರಿನಲ್ಲಿ ಶಾಸಕ ಜಿ.ಟಿ.ದೇವೆಗೌಡ (GT Deve Gowda) ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಜಿ.ಟಿ.ದೇವೇಗೌಡರಿಗೆ ಮಾದಗಳ್ಳಿಯಲ್ಲಿ 1 ಎಕರೆ ಜಾಗ ಕೊಟ್ಟಿದ್ದೇವೆ ಅಂತ ಸಿಎಂ ಸಿದ್ದರಾಮಯ್ಯ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಹೇಳಿದ್ದಾರೆ. ನನ್ನ ರಾಜಕೀಯ ಜೀವನ ನಿಮಗೆ ಗೊತ್ತಿಲ್ಲ. ನಾನು ಯಾವುದೇ ಒಂದು ಚೌಲ್ಟ್ರಿ, ಪೆಟ್ರೋಲ್ ಬಂಕ್, ಸ್ಕೂಲ್, ಕಮರ್ಷಿಯಲ್ ಬಿಲ್ಡಿಂಗ್ ಮಾಡಿಲ್ಲ. ನನ್ನ ತಂದೆ 15 ಎಕರೆ ಜಾಗ ಮಾಡಿದ್ದರು. ಪ್ರಗತಿಪರ ರೈತನಾಗಿ ದುಡಿದು ಪಕ್ಕದಲ್ಲಿ ಜಮೀನು ಖರೀದಿ ಮಾಡಿದ್ದೇನೆ. ಸಾಲಗಾರನಾಗಿ ರಾಜಕಾರಣ ಮಾಡುತ್ತಿದ್ದೇನೆ. ಮುಡಾದ ಶೇ.90ರಷ್ಟು ಜಾಗ ಇರೋದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ. ಗೋವಿಂದರಾಜು ಅಧ್ಯಕ್ಷರಾಗಿದ್ದಾಗ ಜಯಲಕ್ಷ್ಮಿಪುರಂ ಬಾಡಿಗೆ ಮನೆಯಲ್ಲಿದ್ದೆ. ಲಾಟರಿಯಲ್ಲಿ 50×80 ಸೈಟ್ ಬಂದಿದೆ. ಅದನ್ನು ಬಿಟ್ಟು ಬೇರೆ ಯಾವುದೇ ಸೈಟ್ ಪಡೆದಿಲ್ಲ. ಮಂತ್ರಿಗಳೇ, ನೀವು ಸರಿಯಾಗಿ ನಡೆದಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮಾನನಷ್ಟ ಮೊಕದ್ದಮೆ ಹೂಡುತ್ತೇನೆ
ಸಚಿವರು ಎಲ್ಲವನ್ನೂ ಸಮರ್ಪಕವಾಗಿ ಪರಿಶೀಲನೆ ಮಾಡಬೇಕಿತ್ತು. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕೆಲಸ ಮಾಡಬೇಕಿತ್ತು. ಬಡಾವಣೆಗಳನ್ನು ಅಭಿವೃದ್ಧಿ ಮಾಡುವಲ್ಲಿ ಮುಡಾ ವಿಫಲವಾಗಿದೆ. ಸ್ಲಂಗಳನ್ನು ಸೃಷ್ಟಿಸಲು ಮುಡಾ ಹೊರಟಿದೆ. ಮುಡಾ ಬಡಾವಣೆಗಳ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ವಿಫಲವಾಗಿದೆ. ಸಚಿವರು ಸತ್ಯಾಂಶ ಬಯಲು ಮಾಡಬೇಕು. ಏಳು ದಿನಗಳಲ್ಲಿ ದಾಖಲೆ ಸಮೇತ ಸಾಬೀತುಪಡಿಸಬೇಕು. ಅದು ಬಿಟ್ಟು ನನ್ನಂತಹ ಪ್ರಾಮಾಣಿಕನಿಗೆ ಏಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಶಾಸಕರ ಬಗ್ಗೆಯೂ ತನಿಖೆ ಮಾಡಿಸಿ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕೆಲಸ ಮಾಡಲಿ.
ಇದನ್ನೂ ಓದಿ: 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಬರೆದಿಟ್ಟುಕೊಳ್ಳಿ; ಹೆಚ್ಡಿಕೆಗೆ ಸವಾಲ್ ಹಾಕಿದ ಡಿಕೆ ಶಿವಕುಮಾರ್
ಒಂದು ವಾರದೊಳಗೆ ನಗರಾಭಿವೃದ್ಧಿ ಸಚಿವರು ಉತ್ತರ ಕೊಡಬೇಕು. ಇಲ್ಲದಿದ್ದರೇ ನಾನೇ ಅವರಿಗೆ ನೋಟಿಸ್ ಜಾರಿ ಮಾಡುತ್ತೇನೆ. ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತು ಮಾಡದಿದ್ದರೆ ಸಚಿವರ ವಿರುದ್ಧ ಕಾನೂನು ಸಮರ ನಡೆಸುತ್ತೇನೆ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ನಾವು ಇಂತಹವರಿಗೆ ನಿವೇಶನ ಮಂಜೂರು ಮಾಡಿಕೊಡಿ ಎಂದು ಶಿಫಾರಸು ಪತ್ರ ಕೊಟ್ಟಿರುತ್ತೇವೆ. ಇಷ್ಟಕ್ಕೆ ನಮಗೇ ನಿವೇಶನ ಕೊಟ್ಟಿದ್ದೇವೆ ಎಂದು ಆರೋಪ ಮಾಡಿರುವುದು ಸರಿಯಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಕಿಡಿಕಾರಿದ್ದಾರೆ.
ಇನ್ನು ನನ್ನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಎರಡು ಪತ್ರ ಬರೆದಿದ್ದೇನೆ. ಅದನ್ನೇ ನೆಪ ಮಾಡಿಕೊಂಡು ಸೈಟ್ ಕೊಟ್ಟಿದ್ದೇವೆಂದು ಹೇಳಿದ್ದಾರೆ. ಮುಖಂಡ ಶಿವಮೂರ್ತಿಯವರ ಜಾಗವನ್ನು ಮುಡಾ ಬಳಸಿಕೊಂಡಿತ್ತು. ವೀರನಗೆರೆ ಗ್ರಾಮದ ರೈತನಿಗೂ ಇದೇ ರೀತಿಯ ಸಮಸ್ಯೆ ಆಗಿತ್ತು. ಕಾನೂನಾತ್ಮಕವಾಗಿದ್ದರೆ ಪರಿಹಾರ ಕೊಡಿ ಅಂತ ಪತ್ರ ಬರೆದಿದ್ದೇನೆ. ಮಂತ್ರಿಗಳು ಯಾವುದನ್ನು ಕೂಡ ನೋಡದೇ ಹೇಳಿಕೆ ನೀಡಿದ್ದೀರಿ. ಕಲೆಕ್ಷನ್ ಮಾಡೋಕೆ ಇಟ್ಟುಕೊಂಡವರ ಮಾತುಕೇಳಿ ಹೇಳಿಕೆ ನೀಡಿದ್ದೀರಿ. ನಿಮ್ಮ ತಪ್ಪಿನಿಂದಾಗಿ ಈಗ ಮುಖ್ಯಮಂತ್ರಿಗಳ ತಲೆಗೆ ಬಂದಿದೆ. ಪ್ರಾಧಿಕಾರಗಳು ಸಂಬಳ ಕೊಡಲೂ ಕಾಸಿಲ್ಲದ ಸ್ಥಿತಿಗೆ ಬಂದಿವೆ. ಯುಜಿಡಿ, ನೀರು, ರಸ್ತೆ ಅಭಿವೃದ್ಧಿಗೂ ದುಡ್ಡಿಲ್ಲ ಎಂದರು.
JDLP ನಾಯಕ ಸ್ಥಾನ ತಪ್ಪಿದ್ದಕ್ಕೆ ನನಗೆ ಯಾವುದೇ ಬೇಸರವೂ ಇಲ್ಲ
ಇನ್ನು ಇದೇ ವೇಳೆ JDS ಶಾಸಕಾಂಗ ಪಕ್ಷದ ನಾಯಕ ಸ್ಥಾನ ತಪ್ಪಿದಕ್ಕೆ ಜಿಟಿಡಿ ಪ್ರತಿಕ್ರಿಯೆ ನೀಡಿದ್ದು, ಎಲ್ಲರೂ ಒಕ್ಕಲಿಗರೆ ಆಗುತ್ತಾರೆಂದು ಕುರುಬರಿಗೆ ಸ್ಥಾನ ನೀಡಲಾಗಿದೆ. JDLP ನಾಯಕ ಸುರೇಶ್ ಬಾಬು ಅವರನ್ನ ನಾನೇ ಅಭಿನಂದಿಸಿದ್ದೇನೆ. JDLP ನಾಯಕ ಸ್ಥಾನ ತಪ್ಪಿದ್ದಕ್ಕೆ ನನಗೆ ಯಾವುದೇ ಬೇಸರವೂ ಇಲ್ಲ. ನನಗೆ ಯಾಕೆ ತಪ್ಪಿತು ಅಂತಾ ಈಗ ಹೋಗಿ ನಾನು ಕೇಳಲಾಗುತ್ತಾ?ಈಗ ಹೆಚ್.ಡಿ.ಕುಮಾರಸ್ವಾಮಿಯವರು ಕೇಂದ್ರ ಸಚಿವರು, ದೊಡ್ಡವರು. ಕೇಂದ್ರ ಮಂತ್ರಿಗಳನ್ನು ಯಾಕೆ, ಏನೆಂದು ಪ್ರಶ್ನೆ ಮಾಡಲು ಸಾಧ್ಯವಾ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:56 pm, Sat, 27 July 24