ಹೊಸ ವರ್ಷಾಚರಣೆ: ಮೈಸೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್, ಡಿ.31ರ ಸಂಜೆ ಬಳಿಕ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ
ಹೊಸ ವರ್ಷ 2024 ಅನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಜನರು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದು, ಎಲ್ಲೆಡೆ ಚೆಕ್ ಪೋಸ್ಟ್ ಮತ್ತು ಸಿಸಿಟಿವಿ ಅಳವಡಿಸಲಾಗಿದೆ.
ಮೈಸೂರು, (ಡಿಸೆಂಬರ್ 28): ಹೊಸ ವರ್ಷ (News Year) ಸಮೀಪಿಸುತ್ತಿದೆ. 2023ಕ್ಕೆ ಗುಡ್ಬೈ ಹೇಳಿ 2024ಅನ್ನು ಅದ್ಧೂರಿಯಾಗಿ ಸ್ವಾಗತಿಗಳು ಜನರು ಕಾತರದಿಂದ ಕಾಯುತ್ತಿದ್ದಾರೆ. ಮತ್ತೊಂದೆಡೆ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಅದರಲ್ಲೂ ಮೈಸೂರಿನಲ್ಲಿ (Mysuru) ಈ ಬಾರಿ ರಾತ್ರಿ 1 ಗಂಟೆವರೆಗೆ ಹೊಸ ವರ್ಷಾಚರಣೆಗೆ ಅವಕಾಶ ನೀಡಲಾಗಿದೆ. ಆದ್ರೆ, ಡಿಸೆಂಬರ್ 31ರ ಸಂಜೆ 7 ಗಂಟೆ ನಂತರ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರು ಪ್ರವೇಶ ನಿಷೇಧಿಸಲಾಗಿದೆ.
ಈ ಬಗ್ಗೆ ಮೈಸೂರಿನ್ಲಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಮೈಸೂರಿನಲ್ಲಿ ರಾತ್ರಿ 1 ಗಂಟೆವರೆಗೆ ವರ್ಷಾಚರಣೆಗೆ ಅವಕಾಶವಿದೆ. ಹೀಗಾಗಿ ರಾಜ್ಯ ಸರ್ಕಾರ ನಿಗದಿಪಡಿಸಿರುವ ಸಮಯ ಪಾಲನೆ ಮಾಡಬೇಕು. ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್, ಹೋಂ ಸ್ಟೇಗಳು ಮಾಲ್ಗಳಲ್ಲಿ ರಾತ್ರಿ 1 ಗಂಟೆಗೆ ಹೊಸ ವರ್ಷ ಸಂಭ್ರಮಾಚರಣೆ ಮುಗಿಸಬೇಕು. ಅಸಭ್ಯ ವರ್ತನೆ ತಡೆಯಲು 36 ವಿಶೇಷ ಕಾರ್ಯಪಡೆ ತಂಡ ರಚನೆ ಮಾಡಲಾಗಿದೆ. ಇನ್ನು ಮಹಿಳೆಯರ ಸುರಕ್ಷೆಗಾಗಿ 8 ಸುರಕ್ಷತಾ ಪಿಂಕ್ ಗರುಡಾ ರಚಿಸಲಾಗಿದೆ. ಪ್ರಮುಖ ಸ್ಥಳದಲ್ಲಿ ಶ್ವಾನದಳ, ವಿದ್ವಂಸಕ ಕೃತ್ಯ ತಡೆಗಾಗಿ 4 ತಂಡ ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜನೆಗೆ ಅನುಮತಿ ಕಡ್ಡಾಯ
ಮೈಸೂರು ನಗರದಲ್ಲಿ 275 ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ರಿಂಗ್ ರೋಡ್‌ನಲ್ಲಿ 8 ಹೈವೇ ಪೆಟ್ರೋಲ್ ವಾಹನ ನಿಯೋಜನೆ ಮಾಡಲಾಗುತ್ತದೆ. ಮೈಸೂರು ನಗರದ ಹೊರವಲಯದಲ್ಲಿ 12 ಕಡೆ ಚೆಕ್ಪೋಸ್ಟ್ ನಿರ್ಮಿಸಲಾಗುತ್ತದೆ. 18 ಕಡೆ ಚೆಕ್ಪೋಸ್ಟ್ ನಿರ್ಮಿಸಿ ಕಿಡಿಗೇಡಿಗಳ ಮೇಲೆ ತೀವ್ರಾ ನಿಗಾ ವಹಿಸಲಾಗುತ್ತೆ. ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜನೆಗೆ ಅನುಮತಿ ಕಡ್ಡಾಯವಾಗಿದೆ. ಧ್ವನಿವರ್ಧಕ ಅಳವಡಿಸುವುದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಬೇಕು. ಕಾರ್ಯಕ್ರಮದ ನೆಪದಲ್ಲಿ ಮಾದಕ ವಸ್ತುಗಳ ಸೇವನೆ, ಜೂಜಾಟ ನಿಷೇಧಿಸಲಾಗಿದೆ ಎಂದು ವಿವರಿಸಿದರು.
ಫುಲ್ ಸೆಕ್ಯೂರಿಟಿ
ನಗರದಾದ್ಯಂತ ಒಟ್ಟು 275 ಸಿಸಿಟಿವಿಗಳ ಅಳವಡಿಕೆ ಮಾಡಲಾಗಿದ್ದು, ಪೊಲೀಸ್ ಕಂಟ್ರೋಲ್ ರೂಂ ಮೂಲಕ ಕಣ್ಗಾವಲು ಇಡಲಾಗುತ್ತದೆ. ನಗರದ ಹೊರವಲಯದಲ್ಲಿ 12 ಕಡೆ ಚೆಕ್ಪೋಸ್ಟ್ ಹಾಗೂ ನಗರದಲ್ಲಿ 18 ಕಡೆಗಳಲ್ಲಿ ಚೆಕ್ಪೋಸ್ಟ್ಗಳ ಸ್ಥಾಪನೆ ಮಾಡಲಾಗಿದೆ. ಮೂವರು ಡಿಸಿಪಿ, 12 ಎಸಿಪಿ, 30 ಪಿಐ, 70 ASP, 550 ಹೆಚ್‌ಸಿ/ಪಿಸಿ, 80 ಸಿಬ್ಬಂದಿ, 12 CAR ತುಕಡಿ, 4 ಕೆಎಸ್ಆರ್ಪಿ ತುಕಡಿ ಹಾಗೂ ನಾಲ್ಕು ಶ್ವಾನದಳ, ನಾಲ್ಕು ಕಮಾಂಡೋ ಪಡೆ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಡಿಸೆಂಬರ್ 31ರಂದು ಸಂಜೆ 7ರ ಬಳಿಕ ಚಾಮುಂಡಿ ಬೆಟ್ಟಕ್ಕೆ ಪ್ರವೇಶವಿಲ್ಲ. ಆದ್ರೆ, ಇದು ಸ್ಥಳೀಯರಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ