ಮೈಸೂರಿನಲ್ಲಿ ಸಾಲಗಾರರ ಕಾಟಕ್ಕೆ ಹೆದರಿ ಇಡೀ ಕುಟುಂಬ ನಾಪತ್ತೆ, 8 ದಿನ ಕಳೆದರೂ ಸಿಕ್ಕಿಲ್ಲ ಸುಳಿವು
ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದ ತಪ್ಪಿಗೆ ಪಶ್ಚಾತಾಪ ಪಡುವಂತಾಗಿದೆ. ಮಹೇಶ್ ಪರಿಚಯ ಹೇಳಿಕೊಂಡು ವೀರೇಶ್ 30 ರಿಂದ 35 ಲಕ್ಷ ಸಾಲ ಪಡೆದು ಪರಾರಿಯಾಗಿದ್ದರು. ವೀರೇಶ್ ಗೆ ಸಾಲ ನೀಡಿದವರಿಂದ ಮಹೇಶ್ ಮೇಲೆ ಒತ್ತಡ ಹೆಚ್ಚಾಗಿದೆ. ಸದ್ಯ ಮಹೇಶ್ ತಮ್ಮ ಸ್ನೇಹಿತನಿಗೆ ವಾಟ್ಸಾಪ್ ಮೆಸೇಜ್ ಕಳುಹಿಸಿ ಇಡೀ ಕುಟುಂಬ ನಾಪತ್ತೆಯಾಗಿದೆ.
ಮೈಸೂರು, ಜ.29: ಸಾಲಗಾರರ ಕಾಟಕ್ಕೆ ಹೆದರಿ ಕುಟುಂಬ ನಾಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತರೊಬ್ಬರ ಮೊಬೈಲ್ಗೆ ವಾಟ್ಸಾಪ್ ಮೆಸೇಜ್ ಕಳುಹಿಸಿ ಇಡೀ ಕುಟುಂಬ ನಾಪತ್ತೆಯಾಗಿದೆ (Family Missing). ಮೈಸೂರಿನ ಕೆ.ಜಿ.ಕೊಪ್ಪಲು ಬಡಾವಣೆಯ ಮಹೇಶ್(35), ಪತ್ನಿ ಭವಾನಿ(28), ಪುತ್ರಿ ಪ್ರೇಕ್ಷಾ(3), ಮಹೇಶ್ ತಂದೆ ಮಹದೇವಪ್ಪ(65), ತಾಯಿ ಸುಮಿತ್ರಾ(55) ನಾಪತ್ತೆಯಾದವರು. ಕಳೆದ 8 ದಿನಗಳಿಂದ ಈ ಕುಟುಂಬ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.
ವಾಟ್ಸಾಪ್ಗೆ ಸಂದೇಶ ರವಾನಿಸಿ 8 ದಿನಗಳಿಂದ ನಾಪತ್ತೆಯಾಗಿರುವ ಕುಟುಂಬವನ್ನು ಪತ್ತೆ ಹಚ್ಚುವಂತೆ ಭವಾನಿ ಸಹೋದರ ಜಗದೀಶ್ ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾರ್ಕೆಟಿಂಗ್ ಬಿಸಿನೆಸ್ ನಡೆಸುತ್ತಿದ್ದ ಮಹೇಶ್ಗೆ, ವೀರೇಶ್ ಎಂಬುವರು ವ್ಯವಹಾರಕ್ಕೆ ಸಾಥ್ ನೀಡಿದ್ದರು. ಮಹೇಶ್ ಪರಿಚಯ ಹೇಳಿಕೊಂಡು ವೀರೇಶ್ 30 ರಿಂದ 35 ಲಕ್ಷ ಸಾಲ ಪಡೆದು ಪರಾರಿಯಾಗಿದ್ದರು. ವೀರೇಶ್ ಗೆ ಸಾಲ ನೀಡಿದವರಿಂದ ಮಹೇಶ್ ಮೇಲೆ ಒತ್ತಡ ಹೆಚ್ಚಾಗಿದೆ. ಸಾಲಗಾರರ ನಿರಂತರ ಒತ್ತಡಕ್ಕೆ ಹೆದರಿದ ಮಹೇಶ್ ಕುಟುಂಬ ಸಮೇತ ನಾಪತ್ತೆಯಾಗಿದ್ದಾರೆ.
ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದೆ. ಸಾಲಗಾರರು ನನಗೆ ತೊಂದರೆ ಕೊಡುತ್ತಿದ್ದಾರೆ. ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಸಾಲಗಾರರು ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ನಾವು ಕೆರೆ ಅಥವಾ ಬಾವಿಗೆ ಬೀಳುತ್ತೇವೆ. ಒಂದು ವೇಳೆ ಮೃತದೇಹ ದೊರೆತರೆ ಅಂತ್ಯಕ್ರಿಯೆ ಮಾಡಿ. ಅವರನ್ನಂತೂ ಬಿಡಬೇಡಿ ಎಂದು ಮಹೇಶ್ ಮಸೇಜ್ ಕಳುಹಿಸಿ ನಾಪತ್ತೆಯಾಗಿದ್ದಾರೆ. ರಂಜಿತಾ, ದಿನೇಶ್, ಚಂದ್ರು ಹಾಗೂ ನೇತ್ರ ಎಂಬುವವರ ಹೆಸರು ವಾಯ್ಸ್ ಮೆಸೇಜ್ ನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು ಪೊಲೀಸರು ಹುಡುಕಾಡುತ್ತಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ: ಶಾಲಾ ಬಸ್ ಹಾಗೂ ಟ್ರ್ಯಾಕ್ಟರ್ ಮಧ್ಯೆ ಅಪಘಾತ, ನಾಲ್ವರು ವಿದ್ಯಾರ್ಥಿಗಳ ಸಾವು
ಲಾರಿ ಡಿಕ್ಕಿಯಾಗಿ ಬೈಕ್ ಸವಾರ ದುರ್ಮರಣ
ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ದುರ್ಮರಣ ಹೊಂದಿದ್ದಾನೆ. ಬೆಂಗಳೂರು ಉತ್ತರ ತಾಲೂಕಿನ ನೈಸ್ ರಸ್ತೆಯಲ್ಲಿ ಘಟನೆ ನಡೆದಿದೆ. ಜೆ.ಪಿ.ನಗರದ ನಿವಾಸಿ ಸಾಯಿಮೆನನ್ ಮೃತ ಬೈಕ್ ಸವಾರ. ಅಪಘಾತ ಬಳಿಕ ಸ್ಥಳದಲ್ಲೇ ಲಾರಿ ನಿಲ್ಲಿಸಿ ಚಾಲಕ ಪರಾರಿ ಆಗಿದ್ದಾನೆ. ರಜೆ ಇದ್ದಿದ್ರಿಂದ ಬೈಕ್ನಲ್ಲಿ ಸಾಯಿಮೆನನ್ ಉಡುಪಿ ಪ್ರವಾಸಕ್ಕೆ ತೆರಳಿದ್ದ. ಇಂದು ಬೆಂಗಳೂರಿಗೆ ಹಿಂದಿರುಗುವಾಗ ನೈಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಸಾಯಿಮೆನನ್ ರೆಡಿಯೋ ಮಿರ್ಚಿ ಚಾನಲ್ನಲ್ಲಿ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:40 am, Mon, 29 January 24