ಯದುವೀರ್ – ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದ ಕಡೆಗೆ!
ಮೈಸೂರು ಲೋಕಸಭಾ ಕ್ಷೇತ್ರ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಕೀಯಕ್ಕೆ ಆಗಮಿಸಿದ್ದು ಹೇಗೆ? ಅವರು ಸಂಸದರಾಗಲು ಕಾರಣ ಯಾರು? ಬಿಜೆಪಿ ಟಿಕೆಟ್ ನೀಡಿದ್ದು ಯಾಕೆ? ಅವರ ಹಿನ್ನಲೆ ಏನು? ಇಲ್ಲಿದೆ ಓದಿ..
ಮೈಸೂರು, ಜೂನ್ 07: ಲೋಕಸಭಾ ಚುನಾವಣೆ (Lok Sabha Election) ಮುಗಿದಿದೆ ಎಲ್ಲ ರಾಜಕೀಯ ಪಕ್ಷಗಳು ಮಾತ್ರವಲ್ಲ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗದ ಅಧಿಕಾರಿಗಳು ಪುಲ್ ಖುಷಿಯಾಗಿದ್ದಾರೆ. 10 ವರ್ಷದ ಆಡಳಿತದ ನಂತರ ಆಡಳಿತ ವಿರೋಧಿ ಅಲೆಯ ನಡುವೆಯೂ 240 ಸೀಟು ಪಡೆದು ಬಿಜೆಪಿ ತೃಪ್ತಿಪಟ್ಟಿಕೊಂಡಿದೆ. ಎನ್ಡಿಎ ಮಿತ್ರ ಪಕ್ಷಗಳು ಹ್ಯಾಟ್ರಿಕ್ ಸಾಧನೆಯ ಸಂಭ್ರಮದಲ್ಲಿವೆ. 47 ರಿಂದ 99 ಸ್ಥಾನಕ್ಕೆ ಷೇರು ಮಾರುಕಟ್ಟೆಯ ಗೂಳಿಯಂತೆ ಜಿಗಿದು ವಿಪಕ್ಷ ಸ್ಥಾನಕ್ಕೆ ಎಲಿಜಿಬಲ್ ಆದ ಖುಷಿಯಲ್ಲಿ ಕಾಂಗ್ರೆಸ್ (Congress) ಪಾಳಯವಿದೆ. ಇನ್ನು ಮನೆಯೊಂದು ನೂರು ಬಾಗಿಲಂತಿದ್ದರು ಐಎನ್ಡಿಐಎ ಮಿತ್ರ ಪಕ್ಷಗಳು 200 ಗಡಿ ದಾಟಿದ್ದು ಮಿತ್ರ ಪಕ್ಷಗಳು ದೊಡ್ಡ ನಿಟ್ಟುಸಿರು ಬಿಟ್ಟಿವೆ. ಇನ್ನು ಇದೆಲ್ಲಕ್ಕಿಂತ ಬಹಳ ಮುಖ್ಯವಾಗಿ ಈ ಬಾರಿ ಚುನಾವಣಾ ಆಯೋಗದ ಅಧಿಕಾರಿಗಳ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಯಾಕಂದರೆ ಬಹುಶಃ ಇತ್ತೀಚಿನ ದಿನಗಳಲ್ಲಿ ಇವಿಎಂ ಬಗ್ಗೆ ದೂರದ ಮೊದಲ ಚುನಾವಣೆ ಇದಾಗಿದೆ. ಯಾವ ಪಕ್ಷದವರು ಸಹ ಚುನಾವಣೆ ಬಗ್ಗೆಯಾಗಲಿ ಚುನಾವಣಾ ಫಲಿತಾಂಶದ ಬಗ್ಗೆಯಾಗಲಿ ಅಥವಾ ಇವಿಎಂ ಹ್ಯಾಕಿಂಗ್ ಬಗ್ಗೆ ತುಟಿ ಬಿಚ್ಚಿಲ್ಲ. ಇನ್ನು ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಈ ಬಾರಿ ಚುನಾವಣೆ ನೂರಾರು ವಿಶೇಷತೆಗೆ ಸಾಕ್ಷಿಭೂತವಾಯಿತು. ಅದರಲ್ಲಿ ಒಂದು ಸಾಂಸ್ಕೃತಿಕ ನಗರಿ ಮೈಸೂರು, ಕಾಫಿನಾಡು ಕೊಡಗಿನ ಸಂಸದರಾಗಿ ಆಯ್ಕೆಯಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್(Yaduveer Krishnadatta Chamaraja Wodeyar).
ರಾಜ ವಂಶಸ್ಥನಿಂದ – ರಾಜತ್ವ
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಹೆಸರು ಕೇಳುತ್ತಿದ್ದಂತೆ ನನ್ನ ಮೈಸೂರಿಗರಲ್ಲಿ ಒಂದು ರೀತಿಯ ಗೌರವ, ಪೂಜ್ಯ ಹಾಗೂ ಕೃತಜ್ಞತಾಭಾವ ಮೂಡುತ್ತದೆ. ಇದಕ್ಕೆ ಕಾರಣ ಆ ಹೆಸರು ನೆನಪಿಸುವ ಯದುವಂಶದ ದಿಗ್ಗಜರ ಹೆಸರುಗಳು. ಹೌದು, ಈ ಹೆಸರಿನಲ್ಲಿ ಯದುವೀರ್ ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯ್ ಚಾಮರಾಜ ಒಡೆಯರ್ ಹಾಗೂ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರ ಹೆಸರುಗಳು ಕಲೆತುಕೊಂಡಿವೆ. ಯದುವಂಶದ ಈ ಅರಸರ ಕೊಡುಗೆ ನಮ್ಮ ಹೆಮ್ಮೆ. ಈ ಹೆಸರಿನ್ನು ಆಯ್ಕೆ ಮಾಡಿದವರು ಹಾಗೂ ಯದುವಂಶದ ಪರಂಪರೆ ಸಂಸ್ಕೃತಿ ಮುಂದುವರಿಯಲು ಕಾರಣೀಭೂತರಾದವರು ಶ್ರೀಮತಿ ಪ್ರಮೋದದೇವಿ ಒಡೆಯರ್. ಅವರೇ ಈ ಹೆಸರನ್ನು ಆಯ್ಕೆ ಮಾಡಿದ್ದು. ಇನ್ನು ಯದುವೀರ್ ಅವರು ಇಂದು ಸಂಸದರಾಗಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಪ್ರಮೋದದೇವಿ ಒಡೆಯರ್ ಅದರಲ್ಲಿ ಎರಡು ಮಾತಿಲ್ಲ. ಇದರ ಜೊತೆಗೆ ಯದುವಂಶದ ಪರಂಪರೆ ಮುಂದುವರಿದಿರುವುದು ಪ್ರಮೋದದೇವಿ ಒಡೆಯರ್ ಅವರಿಂದಲೇ. ಅದು 2013 ಡಿಸೆಂಬರ್ 10 ಯದುವಂಶದ ಮಹಾರಾಜರಾಗಿದ್ದ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ದಿಢೀರ್ ಕೊನೆಯುಸಿರೆಳೆದಿದ್ದರು.
ಆಗಷ್ಟೇ ರಾಜಪರಂಪರೆಯ ದಸರಾ ಮುಗಿಸಿದ್ದ ಒಡಯರ್ ಸಾವು ಅರಮನೆಗೆ ಆಘಾತ ತಂದಿತ್ತು. ಇದು ವಾರಸುದಾರರಿಲ್ಲದ ಯದುವಂಶದ ಅಂತ್ಯ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಪ್ರಮೋದದೇವಿ ಒಡೆಯರ್ ಅದಕ್ಕೆ ಅವಕಾಶ ಕೊಡಲಿಲ್ಲ. ಈ ಹಿಂದೆ ಯದುವಂಶಕ್ಕೆ ಕಂಟಕ ಎದುರಾದಾಗ ಅದರ ರಕ್ಷಣೆ ಮಾಡಿದ್ದವರು ಯದುವಂಶದ ದಿಟ್ಟ ಮಹಿಳೆಯರಾದ ರಾಣಿ ಲಕ್ಷ್ಮಮ್ಮಣ್ಣಿ, ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಸೇರಿದಂತೆ ಹಲವರು. ಇದೇ ಸಾಲಿಗೆ ರಾಣಿ ಪ್ರಮೋದದೇವಿ ಒಡೆಯರ್ ಸಹ ಸೇರಿಕೊಂಡರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿಧಿವಶರಾದಾಗ ಪ್ರಮೋದದೇವಿ ಒಡೆಯರ್ ಮುಂದೆ ಹತ್ತು ಹಲವು ಸವಾಲುಗಳಿದ್ದವು. ಒಂದು ಕಡೆ ಪತಿಯ ಅಗಲಿಕೆ, ಆಸ್ತಿ ವಿಚಾರದ ಕಾನೂನು ಸಮರಗಳು, ಕುಟುಂಬದಲ್ಲಿನ ಗೊಂದಲ ಮತ್ತೊಂದು ಕಡೆ ಪರಂಪರೆ ಮುಂದುವರಿಸುವ ಜವಾಬ್ದಾರಿ. ಬಹುಶಃ ಬೇರೆ ಯಾರೇ ಆಗಿದ್ದರು ಕೈ ಚೆಲ್ಲಿ ಬಿಡುತ್ತಿದ್ದರೇನೋ ಆದರೆ ಬೆಟ್ಟದ ಕೋಟೆ ಮನೆತನದ ದಿಟ್ಟ ಮಹಿಳೆ ಪ್ರಮೋದದೇವಿ ಒಡೆಯರ್ ಎದೆಗುಂದಲಿಲ್ಲ. ಮೇಲೆ ಹೇಳಿದ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದರು.
ಯದುವೀರ್ ಈ ಸ್ಥಾನಕ್ಕೆ ಬರಲು ಕಾರಣ ಪ್ರಮೋದದೇವಿ ಒಡೆಯರ್. ಸಾಕಷ್ಟು ಸಂದಿಗ್ಧ ಪರಿಸ್ಥಿತಿ ಸವಾಲುಗಳನ್ನು ಎದುರಿಸಿ ಪ್ರಮೋದದೇವಿ ಒಡೆಯರ್ ಯದುವೀರ್ ಅವರನ್ನು ದತ್ತು ಸ್ವೀಕಾರ ಮಾಡಿದರು. ಪ್ರಮೋದದೇವಿ ಒಡೆಯರ್ ಮನಸು ಮಾಡಿದ್ದರೆ ಯಾರನ್ನು ಬೇಕಾದರೂ ಆ ಸ್ಥಾನಕ್ಕೆ ಕೂರಿಸಬಹುದಾಗಿತ್ತು ಅಥವಾ ಯಾರನ್ನು ಕೂರಿಸದೇ ಇರಬಹುದಾಗಿತ್ತು. ಯಾಕಂದರೆ ಪರಂಪರೆಯ ವಿಚಾರಕ್ಕೆ ಬಂದರೆ ಪಟ್ಟದ ಕತ್ತಿಯಲ್ಲೇ ಒಂದು ವರ್ಷ ದಸರಾ ಪರಂಪರೆ ಮುಂದುವರಿಸಲಾಗಿತ್ತು. ಜೊತೆಗೆ ತಮ್ಮ ಕುಟುಂಬದ ಆಪ್ತರಿಗೆ ಅವಕಾಶ ಕೊಡಬಹುದಿತ್ತು. ಆದರೆ ನಿಸ್ವಾರ್ಥವಾಗಿ ಯೋಚನೆ ಮಾಡಿದ ಪ್ರಮೋದದೇವಿ ಒಡೆಯರ್ ಯದುವಂಶದ ಭವಿಷ್ಯದ ಹಿತದೃಷ್ಟಿಯಿಂದ ಅಳೆದು ತೂಗಿ ಆಯ್ಕೆ ಮಾಡಿದ್ದು ತಮ್ಮ ಪತಿಯ ಸಂಬಂಧದ ಯದುವೀರ್ ಅವರನ್ನು. ಅದಕ್ಕೆ ನಾನು ಹೇಳಿದ್ದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದು ಸಂಸದರಾಗಲು ಮೂಲ ಕಾರಣ ಪ್ರಮೋದದೇವಿ ಒಡೆಯರ್ ಅಂತ.
ಯದುವೀರ ರಾಜವಂಶಸ್ಥರಾದರೂ ಪ್ರಮೋದದೇವಿ ಒಡೆಯರ್ ದತ್ತು ಸ್ವೀಕಾರ ಮಾಡುವವರೆಗೂ ಯಾರಿಗೂ ಪರಿಚಯವಿರಲಿಲ್ಲ. ಮೂಲತಃ ಮೈಸೂರಿನವರಾದರೂ ಯದುವೀರ್ ಶಿಕ್ಷಣ ಪೂರೈಸಿದ್ದು ಬೆಂಗಳೂರು ಹಾಗೂ ಅಮೆರಿಕಾದಲ್ಲಿ. ಆದರೆ ಯದುವೀರ ಬಾಲಕನಿದ್ದಾಗಿನಿಂದಲೂ ದಸರೆಗೆ ಮೈಸೂರಿಗೆ ಬರುತ್ತಿದ್ದರು. ದಸರಾ ಸಂಭ್ರಮದಲ್ಲಿ ರಾಜ ಮನೆತನದವರಾಗಿ ಭಾಗಿಯಾಗುತ್ತಿದ್ದರು. ಅಷ್ಟೇ ಅಲ್ಲ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನೆಚ್ಚಿನ ನೀಲಿಗಣ್ಣಿನ ಹುಡುಗನಾಗಿದ್ದರು.
ಸರಳತೆಗೆ ಒಲಿದ ಜನಪ್ರಿಯತೆ – ಸಾಮಾಜಿಕ ಕಳಕಳಿಗೆ ಸಿಕ್ಕಿದ ಪಟ್ಟ
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮೈಸೂರು ಕೊಡಗು ಕ್ಷೇತ್ರದ ಬಿಜೆಪಿ ಟಿಕೆಟ್ ಸುಲಭವಾಗಿ ಸಿಕ್ಕಿತು. ಆದರೆ ಗೆಲವು ಮಾತ್ರ ಸುಲಭವಾಗಿ ದಕ್ಕಲಿಲ್ಲ. ಆ ಗೆಲುವಿನ ಹಿಂದೆ ಸಾಕಷ್ಟು ಶ್ರಮ ಇದೆ, ಬದ್ದತೆಯಿದೆ, ತ್ಯಾಗ ಇದೆ ಎಲ್ಲಕ್ಕಿಂತ ಹೆಚ್ಚಾಗಿ ತಾಳ್ಮೆಯಿದೆ. ಹೌದು, ಹಾಲಿ ಸಂಸದರಿಗೆ ಟಿಕೆಟ್ ನಿರಾಕರಣೆ ಮಾಡಿದ ಬಿಜೆಪಿಗೆ ಸುಲಭ ಆಯ್ಕೆಯಾಗಿದ್ದು ಯದುವಂಶದ ಕೃಷ್ಣದತ್ತ ಚಾಮರಾಜ ಒಡೆಯರ್. ಬಿಜೆಪಿ ಆಯ್ಕೆಗೆ ಕಾರಣ ಮೈಸೂರು ಕೊಡಗು ಭಾಗದಲ್ಲಿ ಮೈಸೂರು ಅರಸರ ಬಗ್ಗೆ ಇರುವ ಗೌರವ. ಯದುವೀರ್ ಅವರ ಸಾಮಾಜಿಕ ಕಳಕಳಿ, ನಡೆ, ನುಡಿ, ಆಚಾರ, ವಿಚಾರ ಸರಳತೆ ಹಾಗೂ ಅವರು ಎಲೆ ಮರೆಯ ಕಾಯಿಯಂತೆ ಮಾಡಿದ್ದ ಸಮಾಜಮುಖಿ ಕೆಲಸಗಳು. ಹೌದು, ಯದುವೀರ್ ರಾಜಪರಂಪರೆಯ ಜೊತೆಗೆ ಹತ್ತು ಹಲವು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಲಿಸು ಫೌಂಡೇಶನ್ ಜೊತೆ ಸೇರಿ ಸರ್ಕಾರಿ ಶಾಲೆಗಳಿಗೆ ಹೋಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ದೇವರಾಜ ಮಾರುಕಟ್ಟೆಗೆ ತೆರಳಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಸ್ವಚ್ಚತೆಯ ರಾಯಭಾರಿಯಾಗಿದ್ದರು. ಜನರನ್ನು ಕಾಡುತ್ತಿರುವ ಸೈಬರ್ ಕ್ರೈಂ ವಿರುದ್ಧ ಸಮರ ಸಾರಿ ಹಲವು ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ರೀತಿ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಯದುವೀರ್ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಆದರೆ ನಿಮಗೆ ಗೊತ್ತಿರಲಿ ಇದ್ಯಾವುದಕ್ಕೂ ಅವರು ಪ್ರಚಾರ ಬಯಸಲಿಲ್ಲ. ಪ್ರಚಾರದಿಂದ ದೂರವೇ ಉಳಿದರು. ಈ ಎಲ್ಲ ಕಾರಣಗಳಿಂದ ಬಿಜೆಪಿ ಯದುವೀರ್ ಅವರಿಗೆ ಟಿಕೆಟ್ ನೀಡಿತು. ಟಿಕೆಟ್ ಸಿಕ್ಕಿದ್ದು ಸ್ವತಃ ಯದುವೀರ್ ಅವರಿಗೆ ಶಾಕ್ ನೀಡಿತ್ತು. ಅವರು ಅದನ್ನು ನಿರೀಕ್ಷೆಯೂ ಮಾಡಿರಲಿಲ್ಲ. ಇನ್ನು ಟಿಕೆಟ್ ಸಿಗಲು ಅವರ ಮಾವ ಡುಂಗರಾಪುರದ ಲಾಬಿ ಅದೆಲ್ಲವೂ ಸುಳ್ಳು. ಯದುವೀರ್ ಅವರಿಗೆ ಟಿಕೆಟ್ ಸಿಕ್ಕಿದ್ದು ಅವರ ಸಾಮರ್ಥ್ಯ ಅವರು ಹೊಂದಿದ್ದ ಸಮಾಜದ ಬಗ್ಗೆಯ ಕಳಕಳಿಯಿಂದಾಗಿ. ಟಿಕೆಟ್ ಸುಲಭವಾಗಿ ಸಿಕ್ಕಿತು. ಆದರೆ, ಗೆಲುವು ಅಷ್ಟು ಸುಲಭವಾಗಿರಲಿಲ್ಲ. 21 ಲಕ್ಷ ಮತದಾರರನ್ನು ಮುಟ್ಟಬೇಕಿತ್ತು ಮೈಸೂರು ಕೊಡಗು ಜಿಲ್ಲೆಯ 8 ಕ್ಷೇತ್ರಗಳನ್ನು ಸುತ್ತಬೇಕಿತ್ತು. ಅದಕ್ಕಿಂತ ಹೆಚ್ಚಾಗಿ ಯದುವೀರ್ ರಾಜಕಾರಣ ಮಾಡಬೇಕಿತ್ತು. ಮೊದಲ ಸವಾಲು ಹಾಲಿ ಸಂಸದರ ಜನಪ್ರಿಯತೆ ಹಾಗೂ ಅವರ ಅಭಿಮಾನಿಗಳನ್ನು ನಿಭಾಯಿಸಿ ಅವರ ವಿಶ್ವಾಸ ಗಳಿಸಬೇಕಿತ್ತು. ನಂತರ ಎದುರಾಳಿ ಕಡೆ ಗಮನಹರಿಸಬೇಕಿತ್ತು. ರಾಜ ಆನ್ನೋ ಹಣೆಪಟ್ಟಿಯನ್ನು ಕಳಚುವುದಕ್ಕಿಂತ ಅದರ ಜೊತೆಗೆ ತಾನು ಸಾಮಾನ್ಯ ಅನ್ನೋದನ್ನು ನಿರೂಪಿಸಬೇಕಿತ್ತು. ಎಲಾ ಕಣ್ಣುಗಳು ಯದುವೀರ್ ಕಡೆ ನೆಟ್ಟಿದ್ದವು. ಹೇಳಿ ಕೇಳಿ ಮೈಸೂರು ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ್ದರಿಂದ ಎಲ್ಲವೂ ಕಬ್ಬಿಣದ ಕಡಲೆಯಾಗಿತ್ತು. ಆದರೆ, ಯದುವೀರ್ ಇವೆಲ್ಲವನ್ನೂ ನಿಭಾಯಿಸಿದ ರೀತಿ ನಿಜಕ್ಕೂ ಅದ್ಭುತ. ಅವರ ಪ್ರತಿಯೊಂದು ನಡೆ ಅವರನ್ನು ಸಂಸದ ಸ್ಥಾನಕ್ಕೆ ಕರೆದುಕೊಂಡು ಹೋಗಿ ಕೂರಿಸಿತು. ಯದುವೀರ್ ಎಲ್ಲೂ ಎಲ್ಲೆ ಮೀರಲಿಲ್ಲ. ಅವಶ್ಯಕತೆ ಮೀರಿ ಅನಗತ್ಯವಾಗಿ ಮಾತನಾಡಲಿಲ್ಲ. ಯಾರನ್ನೂ ಟೀಕಿಸಲಿಲ್ಲ, ಯಾರನ್ನೂ ಹೀಯಾಳಿಸಲಿಲ್ಲ. ಟೀಕೆ ಟಿಪ್ಪಣಿಗಳಿಗೆ ಮಾತಿನಲ್ಲಿ ಉತ್ತರ ನೀಡುವ ಬದಲು ತಮ್ಮ ನಡೆಯಿಂದಲೇ ಉತ್ತರ ನೀಡಿದರು ಹಾಗೂ ಯಶಸ್ವಿಯಾದರು.
ಗೆಲುವು ಹೆಚ್ಚಿಸಿದ ಜವಾಬ್ದಾರಿ
ಯದುವೀರ್ ಅವರಿಗೆ ಗೆಲುವಿನ ಜೊತೆಗೆ ಜವಾಬ್ದಾರಿಯನ್ನು ದುಪ್ಪಟ್ಟುಗೊಳಿಸಿದೆ. ಜೊತೆಗೆ ಸವಾಲುಗಳು ಸಾವಿರದಷ್ಟಿವೆ. ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ ಚಾಕಚಕ್ಯತೆ ಯದುವೀರ್ ಅವರಿಗೆ ಖಂಡಿತಾ ಇದೆ. ರಾಜತ್ವ ಪ್ರಜಾಪ್ರಭುತ್ವದ ನಡುವೆ ಇರುವ ಸಣ್ಣ ಪದರಕ್ಕೆ ಎಳ್ಳಷ್ಟು ಧಕ್ಕೆಯಾಗದಂತೆ ಘಾಸಿಯಾಗದಂತೆ ಮುಂದೆ ಸಾಗಬೇಕಿದೆ. ಸಂಸದನಾಗಿ ಜನರ ಕೆಲಸ, ರಾಜನಾಗಿ ರಾಜ ಪರಂಪರೆಗೆ ಧಕ್ಕೆಯಾಗದಂತೆ ಮುಂದುವರಿಸಬೇಕಿದೆ. ಸದಾ ಕಾರ್ಯಕರ್ತರ ಜೊತೆಯಿರಬೇಕು. ಜನರ ಸಮಸ್ಯೆಗಳನ್ನು ಆಲಿಸಬೇಕು. ನಿರಂತರವಾಗಿ ಪ್ರವಾಸ ಮಾಡಬೇಕು. ಹಳ್ಳಿ ದಿಲ್ಲಿಯನ್ನು ಸುತ್ತಬೇಕು. ಹೀಗಾಗಿ ಯದುವೀರ್ ಜವಾಬ್ದಾರಿ ದುಪ್ಪಟ್ಟಾಗಿದೆ.
ಕೊನೆ ಮಾತು
ಯದುವೀರ್ ಹೊಸ ರಾಜಕಾರಣದ ಭಾಷ್ಯ ಬರೆಯುವ ಭರವಸೆ ಮೂಡಿಸಿದ್ದಾರೆ. ಹೊಸ ರೂಪದ ರಾಜಕಾರಣಿಯಾಗಿ ಕಾಣಿಸಿಕೊಳ್ಳುವ ವಿಶ್ವಾಸ ಮೂಡಿಸಿದ್ದಾರೆ. ಹೀಗಾಗಿ ಅವರು ದ್ವೇಷ ರಹಿತ ಸಮಾಜದ ನಿರ್ಮಾಣಕ್ಕೆ ಕಟಿಬದ್ದರಾಗಿರಲಿ. ಜಾತಿ, ಧರ್ಮ ಭೇದವ ತೋರದೆ ಕೆಲಸ ಮಾಡಲಿ. ಪಕ್ಷಾತೀತವಾಗಿ ಸಮಸ್ಯೆಗಳಿಗೆ ಸ್ಪಂದಿಸಲಿ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲಿ. ನೊಂದವರು, ಅನ್ಯಾಯಕ್ಕೊಳಗಾದವರ ಧ್ವನಿಯಿಲ್ಲದವರ ಧ್ವನಿಯಾಗಲಿ. ಟೀಕೆ ಟಿಪ್ಪಣಿಗಳಿಂದ ದೂರವಿರಲಿ. ಆರೋಪ ಪ್ರತ್ಯಾರೋಪಗಳನ್ನು ಬದಿಗಿಡಲಿ. ಕೇವಲ ಸಿನಿಮಾ ತಾರೆಯರು ಕ್ರಿಕೆಟ್ ಸ್ಟಾರ್‌ಗಳನ್ನು ರೋಲ್ ಮಾಡೆಲ್ ಮಾಡಿಕೊಳ್ಳುವ ಯುವಪೀಳಿಗೆ ರಾಜಕಾರಣಿಗಳನ್ನು ರೋಲ್ ಮಾಡೆಲ್ ಮಾಡಿಕೊಳ್ಳುವ ಹೊಸ ಪರಂಪರೆಗೆ ನಾಂದಿ ಹಾಡಲಿ. ಹೀಗಾಗಲೇ ಮೈಸೂರು ಕೊಡಗು ಜನರು ಯದುವೀರ್‌ಗೆ ಶಕ್ತಿ ನೀಡಿ ಅವರ ಬೆನ್ನಿಗೆ ನಿಂತಿದ್ದಾರೆ. ಅದನ್ನು ಉಳಿಸಿಕೊಂಡು ಮುಂದೆ ಸಾಗಲಿ. ನಾಡದೇವತೆ ತಾಯಿ ಚಾಮುಂಡೇಶ್ವರಿ ಆ ಶಕ್ತಿಯನ್ನು ನೀಡಲಿ. ಯದುವೀರ್‌ರಿಂದ ಯಾರಿಗೂ ತೊಂದರೆಯಾಗದಿರಲಿ. ಅವರಿಗೂ ಯಾರಿಂದಲೂ ತೊಂದರೆಯಾಗದಿರಲಿ. ಎಲ್ಲವೂ ಒಳ್ಳೆಯದಾಗಲಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ