ವಿಶ್ವವಿಖ್ಯಾತ ಮೈಸೂರು ದಸರಾ ಇಂದಿನಿಂದ ಶುರು: ಸಂಭ್ರಮದಲ್ಲಿ ಸಾಂಸ್ಕೃತಿಕ ನಗರಿ

Mysore Dasara Inauguration: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ನಾಡ ದೇವತೆ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಇಂದು 2025ರ ದಸರಾ ಮಹೋತ್ಸವಕ್ಕೆ ಚಾಲನೆ ದೊರಕುತ್ತಿದೆ. ಅರಮನೆಯಲ್ಲಿ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ನಡೆಯಲಿದೆ. ಇಂದಿನಿಂದ 11 ದಿನಗಳ ಕಾಲ ದಸರಾ ಮಹೋತ್ಸವ ನೆರವೇರಲಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಇಂದಿನಿಂದ ಶುರು: ಸಂಭ್ರಮದಲ್ಲಿ ಸಾಂಸ್ಕೃತಿಕ ನಗರಿ
ವಿಶ್ವವಿಖ್ಯಾತ ಮೈಸೂರು ದಸರಾ ಇಂದಿನಿಂದ ಶುರು
Edited By:

Updated on: Sep 22, 2025 | 8:43 AM

ಮೈಸೂರು, ಸೆಪ್ಟೆಂಬರ್ 22: ವಿಶ್ವವಿಖ್ಯಾತ ಮೈಸೂರು ದಸರಾ (Dasara) ಮಹೋತ್ಸವಕ್ಕೆ ಇಂದು ವೃಶ್ಚಿಕ ಲಗ್ನದಲ್ಲಿ ನಾಡ ದೇವಿ ಚಾಮುಂಡೇಶ್ವರಿ (Chamundeshwari) ಸನ್ನಿಧಿಯಲ್ಲಿ ವಿಧ್ಯುಕ್ತವಾಗಿ ಚಾಲನೆ ದೊರೆಯಲಿದೆ. ಈ ಬಾರಿಯ ದಸರಾ ಉತ್ಸವವು ಸಾಂಪ್ರದಾಯಿಕ ವೈಭವದ ಜೊತೆಗೆ ಆಧುನಿಕ ಸೌಲಭ್ಯಗಳನ್ನೂ ಒಳಗೊಂಡಿದ್ದು, ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಭರದ ಸಿದ್ಧತೆಗಳು ನಡೆದಿವೆ. ಈ ಕಾರ್ಯಕ್ರಮದಲ್ಲಿ ಸಾಹಿತಿ ಭಾನು ಮುಷ್ತಾಕ್ ಅವರು ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಚಾಮುಂಡೇಶ್ವರಿ ದೇವಾಲಯದಲ್ಲಿ ದಸರಾ ಉತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಶುಚಿಗೊಳಿಸಿ, ಹಸಿರು ಸೀರೆಯಿಂದ ಅಲಂಕರಿಸಲಾಗಿದೆ. ಬೆಳಿಗ್ಗೆ 10:10 ರಿಂದ 10:40 ರ ಒಳಗಿನ ಶುಭ ವೃಶ್ಚಿಕ ಲಗ್ನದಲ್ಲಿ ವಿವಿಧ ಅಭಿಷೇಕ ಮತ್ತು ಪೂಜಾಕೈಂಕರ್ಯಗಳು ನಡೆಯಲಿವೆ. ಬಳಿಕ, ಬೆಳ್ಳಿ ರಥದಲ್ಲಿ ಉತ್ಸವ ಮೂರ್ತಿಯನ್ನು ವೇದಿಕೆಗೆ ತರಲಾಗುತ್ತದೆ. ಸಾಹಿತಿ ಭಾನು ಮುಷ್ತಾಕ್ ಅವರು ಮಹಿಷಾಸುರ ಮರ್ಧಿನಿ ಉತ್ಸವಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ. ಆ ಉತ್ಸವಮೂರ್ತಿ ಅತ್ಯಂತ ವಿಶೇಷದ್ದಾಗಿದೆ.

ಹಸಿರು ಸೀರೆಯಿಂದ ಅಲಂಕರಿಸಲಾಗಿರುವ ಚಾಮುಂಡೇಶ್ವರಿ ಉತ್ಸವ ಮೂರ್ತಿ

ದೇವಾಲಯದ ಆವರಣದಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದ್ದು, 1,000 ಆಸನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮಳೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿ, ವಿಐಪಿ, ಮತ್ತು ಪಾಸ್ ಹೊಂದಿದವರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಒದಗಿಸಲಾಗಿದೆ. ಬೆಟ್ಟದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್

ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾದರೆ, ಇತ್ತ ಅರಮನೆಯಲ್ಲಿ ಯದುವೀರ್ ಒಡೆಯರ್ 11ನೇ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಬೆಳಿಗ್ಗೆ ಸಿಂಹಾಸನಕ್ಕೆ ಸಿಂಹದ ಮುಖವನ್ನು ಜೋಡಣೆ ಮಾಡಲಾಗಿದೆ. ಚಾಮುಂಡಿ ತೊಟ್ಟಿಯ ವಾಣಿವಿಲಾಸ ದೇವರ ಮನೆಯಲ್ಲಿ ಯದುವೀರ್​ಗೆ ತ್ರಿಶಿಕಾ ಕುಮಾರಿ ಕಂಕಣ ಕಟ್ಟಲಿದ್ದಾರೆ. ಕೊಡಿ ಸೋಮೇಶ್ವರ ದೇವಸ್ಥಾನದ ಬಳಿ ಪಟ್ಟದ ಆನೆ, ಕುದುರೆ, ಹಸು ಸೇರಿ ಮಹಿಳೆಯರು ಕಳಶ ಹೊತ್ತು ಬರಲಿದ್ದಾರೆ. 12.42ರಿಂದ 12.58ರ ಒಳಗೆ ರತ್ನ ಖಚಿತ ಸಿಂಹಾಸನ ಅಲಂಕರಿಸಿ ಯದುವೀರ್ ದರ್ಬಾರ್ ನಡೆಸಲಿದ್ದಾರೆ.

ಇದನ್ನೂ ಓದಿ: ನವರಾತ್ರಿಯ ಮೊದಲ ದಿನ ‘ಶೈಲಪುತ್ರಿ’ಯ ಆರಾಧನೆ; ದೇವಿಯ ಪುರಾಣ ಕಥೆ ಹಾಗೂ ಪೂಜಾ ವಿಧಾನ ಇಲ್ಲಿದೆ

ಒಟ್ಟಾರೆ, ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲು ಕೆಲವೇ ಕ್ಷಣಗಳಷ್ಟೇ ಬಾಕಿ ಉಳಿದಿವೆ. ಇನ್ನು 11 ದಿನಗಳ‌ ಕಾಲ ಸಾಂಸ್ಕೃತಿಕ ನಗರಿಯಲ್ಲಿ ದಸರಾ ವೈಭವ ರಾಜ್ಯವಲ್ಲದೇ ದೇಶ-ವಿದೇಶದ ಜನರನ್ನು ಸೆಳೆಯಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:02 am, Mon, 22 September 25