
ಬೆಂಗಳೂರು/ನವದೆಹಲಿ, (ಡಿಸೆಂಬರ್ 05): ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National Herald Case) ದೆಹಲಿ ಪೊಲೀಸರು (Delhi Police) ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ (Rahul Gandhi) ವಿರುದ್ಧ ಹೊಸ ಎಫ್‌ಐಆರ್ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇಂದು (ಡಿಸೆಂಬರ್ 05) ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಗೂ ಸಹ ನೋಟಿಸ್ ಜಾರಿ ಮಾಡಿದ್ದು, ಡಿಸೆಂಬರ್ 19ರೊಳಗೆ ದೆಹಲಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಪ್ರಕರಣದ ಪ್ರಮುಖ ಮಾಹಿತಿ ಡಿಕೆಶಿ ಬಳಿ ಇದೆ ಎಂದು ದೆಹಲಿ ಪೊಲೀಸರು ನಂಬಿದ್ದಾರೆ. ಹೀಗಾಗಿ ಡಿಕೆಶಿಗೆ ನೊಟೀಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (EOW) ವಿವರವಾದ ಹಣಕಾಸು ಮತ್ತು ವಹಿವಾಟಿನ ಮಾಹಿತಿ ಕೋರಿ ಡಿ.ಕೆ. ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಅಕ್ಟೋಬರ್ 3 ರಂದು ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಪ್ರಮುಖ ಮಾಹಿತಿ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಡಿಕೆಶಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಯಂಗ್ ಇಂಡಿಯಾಗೆ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ವೈಯಕ್ತಿಕವಾಗಿ 2.5 ಕೋಟಿ ರೂ. ದೇಣಿಗೆ ನೀಡಿದ್ದರು. ಇಷ್ಟೇ ಅಲ್ಲದೇ ಡಿಕೆ ಅವರ ಟ್ರಸ್ಟ್‌ಗಳಿಂದ 2.5 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಹೀಗಾಗಿ ಈ ಹಿಂದೆ ಡಿಕೆ ಸಹೋದರರನ್ನು ಇಡಿ ವಿಚಾರಣೆ ನಡೆಸಿತ್ತು. ಇದೀಗ ಇದೇ ಪ್ರಕರಣ ಸಂಬಂಧ ಹಣಕಾಸು, ವಹಿವಾಟಿನ ವಿವರಗಳನ್ನು ಕೋರಿ ದೆಹಲಿ ಪೊಲೀಸ್, ವಿಚಾರಣೆಗೆ ಹಾಜರಾಗುವಂತೆ ಡಿಕೆ ಶಿವಕುಮಾರ್ಗೆ ನೋಟಿಸ್ ನೀಡಿದೆ.
ನ್ಯಾಷನಲ್ ಹೆರಾಲ್ಡ್ ಒಂದು ಇಂಗ್ಲಿಷ್ ದಿನಪತ್ರಿಕೆಯಾಗಿದೆ. ಇದನ್ನು 1938ರಲ್ಲಿ ಜವಾಹರಲಾಲ್ ನೆಹರು ಸ್ಥಾಪಿಸಿದ್ದು, ಇದನ್ನು AJL ಪ್ರಕಾಶಿಸುತ್ತಿತ್ತು, ಜೊತೆಗೆ ಕೌಮಿ ಆವಾಜ್ (ಉರ್ದು) ಮತ್ತು ನವಜೀವನ್ (ಹಿಂದಿ) ಪತ್ರಿಕೆಗಳನ್ನೂ ಪ್ರಕಾಶಿಸಿತು. 2008ರಲ್ಲಿ ಆರ್ಥಿಕ ತೊಂದರೆಯಿಂದಾಗಿ AJL ಪತ್ರಿಕೆಯನ್ನು ಸ್ಥಗಿತಗೊಳಿಸಿತು, ಆಗ 90.25 ಕೋಟಿ ರೂ. ಸಾಲವನ್ನು ಕಾಂಗ್ರೆಸ್ ಪಕ್ಷದಿಂದ ಪಡೆದಿತ್ತು. ಬಿಜೆಪಿ ಸುಬ್ರಮಣಿಯನ್ ಸ್ವಾಮಿ ಅವರು, ಕಾಂಗ್ರೆಸ್ ಪಕ್ಷವು AJLಗೆ ನೀಡಿದ 90.25 ಕೋಟಿ ಸಾಲವನ್ನು ಯಂಗ್ ಇಂಡಿಯಾ (YIL) ಕಂಪನಿಗೆ 50 ಲಕ್ಷಕ್ಕೆ ವರ್ಗಾಯಿಸಿತು ಎಂದು ಆರೋಪಿಸಿದ್ದರು. YILನಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿಯವರು ಶೇ.76ರಷ್ಟು ಷೇರುಗಳನ್ನು ಹೊಂದಿದ್ದಾರೆ. ಈ ವರ್ಗಾವಣೆಯ ಮೂಲಕ AJLನ 2,000 ಕೋಟಿಗಿಂತಲೂ ಹೆಚ್ಚು ಮೌಲ್ಯದ ಆಸ್ತಿಗಳನ್ನು YIL “ದುರುದ್ದೇಶದಿಂದ” ತನ್ನ ವಶಕ್ಕೆ ತೆಗೆದುಕೊಂಡಿತು ಎಂದು ಆರೋಪ. ಈ ವಹಿವಾಟು ವಂಚನೆ, ವಿಶ್ವಾಸ ದ್ರೋಹ, ಮತ್ತು ಹಣದ ಅಕ್ರಮ ವರ್ಗಾವಣೆ ಗೆ ಸಂಬಂಧಿಸಿದೆ ಎಂದು ದೂರಲಾಗಿದೆ.
2014ರಲ್ಲಿ ದೆಹಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗೋಮತಿ ಮನೋಚಾ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿದರು, YIL ಒಂದು “ನಕಲಿ” ಕಂಪನಿಯಾಗಿ ಸಾರ್ವಜನಿಕ ಹಣವನ್ನು ವೈಯಕ್ತಿಕ ಉಪಯೋಗಕ್ಕೆ ಬಳಸಲಾಗಿದೆ ಎಂದು ಆರೋಪ. 2015ರಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿಯವರಿಗೆ ಪಟಿಯಾಲಾ ಹೌಸ್ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತು. ಜಾರಿ ನಿರ್ದೇಶನಾಲಯ (ED) 2014ರಿಂದ ಈ ಕೇಸ್‌ನಲ್ಲಿ ಹಣದ ಅಕ್ರಮ ವರ್ಗಾವಣೆ ತನಿಖೆ ನಡೆಸುತ್ತಿದೆ. 2023ರಲ್ಲಿ 751.9 ಕೋಟಿ ಮೌಲ್ಯದ AJL ಆಸ್ತಿಗಳನ್ನು ಜಪ್ತಿ ಮಾಡಿದೆ.
2025ರ ಏಪ್ರಿಲ್‌ನಲ್ಲಿ ED ಸೋನಿಯಾ, ರಾಹುಲ್, ಮತ್ತು ಸ್ಯಾಮ್ ಪಿತ್ರೋಡಾ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿತು. ಕಾಂಗ್ರೆಸ್ ಪಕ್ಷವು ಈ ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ಕರೆದು, YIL ಒಂದು “ಲಾಭರಹಿತ” ಕಂಪನಿಯಾಗಿದ್ದು, ಯಾವುದೇ ಆರ್ಥಿಕ ಲಾಭವನ್ನು ಒದಗಿಸಿಲ್ಲ ಎಂದು ವಾದಿಸಿದೆ.
AJL ಆಸ್ತಿಗಳನ್ನು ವರ್ಗಾಯಿಸಲಾಗಿಲ್ಲ, ಮತ್ತು ಸಾಲವನ್ನು ಷೇರುಗಳಾಗಿ ಪರಿವರ್ತಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. 2025ರ ಮೇ 21ರಂದು, ED ದೆಹಲಿ ನ್ಯಾಯಾಲಯಕ್ಕೆ ಸೋನಿಯಾ ಮತ್ತು ರಾಹುಲ್ ಗಾಂಧಿಯವರು 142 ಕೋಟಿ ಅಪರಾಧ ಆದಾಯವನ್ನು ಪಡೆದಿದ್ದಾರೆ ಎಂದು ಆರೋಪಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.