ಕೊಪ್ಪಳ, ಜುಲೈ 08: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಪೂಜೆ ವಿವಾದಕ್ಕೆ (Nava Brindavana pooja controversy) ಸಂಬಂಧಿಸಿದಂತೆ ಪೂಜಾ ಸಲ್ಲಿಸಲು ಮಂತ್ರಾಲಯ ಮಠದ ಪರ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ನೀಡಿದೆ. ಆ ಮೂಲಕ ಸುಬುಧೇಂದ್ರ ತೀರ್ಥರು ನವವೃಂದಾವನಗಡ್ಡೆ ಪ್ರವೇಶ ಮಾಡಿದ್ದಾರೆ. ಹೀಗಾಗಿ ಮಂತ್ರಾಲಯದ ಮಠದ ಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಪರಸ್ಪರ ಬಣ್ಣ ಎರಚಾಡಿ, ಪಟಾಕಿ ಸಿಡಿಸಿ, ನೃತ್ಯ ಮಾಡಿ ರಾಯರ ಮಠದ ಭಕ್ತರು ಸಂಭ್ರಮಿಸಿದ್ದಾರೆ. ಈ ವಿಜಯೋತ್ಸವದಲ್ಲಿ ನೂರಾರು ರಾಯರ ಮಠದ ಭಕ್ತರು ಭಾಗಿ ಆಗಿದ್ದರು.
ಆನೆಗುಂದಿಯ ನವಬೃಂದಾವನದಲ್ಲಿ ಶ್ರೀ ರಾಘವೇಂದ್ರಸ್ವಾಮಿ ಮಠದವರಿಗೆ ಅಷ್ಟೋತ್ತರ ಪೂಜಾ ಕಾರ್ಯಕ್ಕೆ ನಿರ್ಬಂಧ ವಿಧಿಸುವಂತೆ ಉತ್ತಾರಾಧಿಮಠ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿತ್ತು. ಉತ್ತಾರಾಧಿಮಠ ಅರ್ಜಿ ವಿಚಾರಣೆ ನಡೆಸಿದ್ದ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠ, ಉತ್ತಾರಾಧಿಮಠ ಅರ್ಜಿಯನ್ನು ಪುರಸ್ಕರಿಸಿ ಅಷ್ಟೋತ್ತರ ಪೂಜಾ ಕಾರ್ಯಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿತ್ತು. ಬಳಿಕ ಶ್ರೀ ರಾಘವೇಂದ್ರಸ್ವಾಮಿ ಮಠವು ಧಾರವಾಡ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಮಂತ್ರಾಲಯ ರಾಯರ ಮಠದ ಸುಬುಧೇಂದ್ರತೀರ್ಥ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ ಮಠದ ಪರವಾಗಿ ಬಂದಿದೆ. ಮೂವರ ಯತಿಗಳ ಪೂಜೆಗೆ ಕೋರ್ಟ್ ಅವಕಾಶ ನೀಡಿದೆ. ಹೀಗಾಗಿ ಪೂರ್ವ ಪದ್ಮನಾಭ ತೀರ್ಥರು ಸೇರಿದಂತೆ ಮೂವರು ಯತಿವರ್ಯರಾದ ಕವೀಂದ್ರತೀರ್ಥ, ವಾಗೀಶತೀರ್ಥ, ಪದ್ಮನಾಭ ತೀರ್ಥರ ವೃಂದಾವನಗಳಿಗೆ ಇಂದು ಪೂಜೆ ನಡೆಯುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆನೆಗುಂದಿಯ ನವಬೃಂದಾವನದಲ್ಲಿ ಅಷ್ಟೋತ್ತರ ಪೂಜಾ ಕಾರ್ಯಕ್ಕೆ ಹೈಕೋರ್ಟ್ ಅಸ್ತು: ಭಕ್ತರಲ್ಲಿ ಸಂಭ್ರಮ
ನವವೃಂದಾವನದಲ್ಲಿ ನಮ್ಮ ಪೂರ್ವರ ವೃಂದಾವನಗಳಿವೆ. ಆದರೆ ಇನ್ನೊಂದು ಮಠದವರು ವಿನಾಕಾರಣ ದೂರನ್ನು ನೀಡಿದ್ದರು. ಮಂತ್ರಾಲಯ ಮಠದವರಿಗೆ ಪೂಜೆಗೆ ಅವಕಾಶ ನೀಡಬಾರದು ಅಂತ ದಾವೆ ಸಲ್ಲಿಸಿದ್ದರು. ನವವೃಂದಾವನದಲ್ಲಿರುವ ಯತಿವರ್ಯರ ಪೂಜೆ ಮಾಡಬಾರದು ಅಂತ ದಾವೆ ಸಲ್ಲಿಸಿದ್ದರು. ಮಂತ್ರಾಲಯ ರಾಘವೇಂದ್ರ ಮಠ ಇನ್ನುಳಿದ ಮಠದ ಮೇಲೆ ಯಾವುದೇ ದ್ವೇಷ ಹೊಂದಿಲ್ಲ. ಇನ್ನೊಂದು ಮಠದವರು ನಮ್ಮ ಮೇಲೆ ಕೇಸ್ ಹಾಕಿದ್ದರು. ನಾವು ಯಾರ ಮೇಲೂ ಕೇಸ್ ಹಾಕಿರಲಿಲ್ಲ. ಇದೀಗ ನಮಗೆ ಸತ್ಯಕ್ಕೆ ಜಯ ಸಿಕ್ಕಿದೆ ಎಂದಿದ್ದಾರೆ.
ನವವೃಂದಾವನ ಗಡ್ಡೆಯಲ್ಲಿ ನಾವು ಆರಾಧನೆ ಮಾಡಬಾರದು ಎಂದು ದಾವೆ ಹೂಡಿದ್ದರು. ಇದಕ್ಕೆ ಯಾವುದೇ ದಾಖಲಾತಿ ಒದಗಿಸಲಿಲ್ಲ. ಹೀಗಾಗಿ ದಾವೆಯಲ್ಲಿ ಅವರು ವಿಫಲವಾಗಿದ್ದಾರೆ. ಕೆಳಗಿನ ಕೋರ್ಟ್ ನಮ್ಮ ದಾಖಲಾತಿ ಒಪ್ಪಿ ನಮ್ಮ ಪರವಾಗಿ ತೀರ್ಪು ನೀಡಿತ್ತು. ಬಳಿಕ ಹೈಕೋರ್ಟ್ ಮೊರೆ ಹೋಗಲಾಗಿತ್ತು. ಎರಡನೇ ಅಪೀಲಿನಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ. ನಮ್ಮ ಮಠಕ್ಕೆ ಪೂಜೆ ಮಾಡುವ ಅವಕಾಶ ನೀಡಿದೆ. ನಿಷೇಧ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಪದ್ಮನಾಭ, ಕವೀಂದ್ರ, ವಾಗೀಶ ತೀರ್ಥರ ಆರಾಧನೆಯ ಸುದೀರ್ಘ ವಿವಾದವನ್ನು ಹೈಕೋರ್ಟ್ ಇತ್ಯರ್ಥಗೊಳಿಸಿದೆ. ಈ ವಿವಾದವನ್ನು ಮುಂದುವರೆಸುತ್ತಾರಾ ಎನ್ನುವುದಕ್ಕೆ ಇನ್ನೊಂದು ಮಠದವರು ಉತ್ತರ ನೀಡಬೇಕು. ನಮ್ಮ ಮಠ ಸೌಹಾರ್ದಕ್ಕೆ ತೆರೆದ ಬಾಗಿಲು. ಎಲ್ಲರೂ ಸೇರೋಣ ಸೌಹಾರ್ದಯುತವಾಗಿ ಪರಿಷ್ಕರಿಸೋಣ. ಇಬ್ಬರೂ ಸೇರಿ ಸಂತೋಷದಿಂದ ಪೂಜೆ ಮಾಡೋಣ. ಸಂಧಾನದ ಹಸ್ತ ನಮ್ಮ ಕೈ ಯಾವಾಗಲೂ ಚಾಚಿರುತ್ತೇವೆ. ಯಾವುದೇ ವಿಚಾರಗಳಲ್ಲಿ ರಾಯರ ಮಠ ವಿವಾದ ಮಾಡಿಲ್ಲ. ಇನ್ನೊಂದು ಮಠದವರು ನಮ್ಮ ಮಠದ ಮೇಲೆ ಕೇಸ್ ಹಾಕಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೊಸ ವರ್ಷದ ಮೊದಲ ದಿನವೇ ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆಯಲು ಹಿಂಡುಹಿಂಡು ಭಕ್ತರು
ಜಯತೀರ್ಥರ ವೃಂದಾವನ ವಿವಾದ ವಿಚಾರವಾಗಿ ಮಾತನಾಡಿದ್ದು, ಈ ವಿಚಾರದಲ್ಲಿ ಹೈಕೋರ್ಟ್ ನಮ್ಮ ಮೇಲೆ ನಿಷೇಧ ಹೇರಿದೆ. ಹೀಗಾಗಿ ಈ ಬಗ್ಗೆ ಮಾತನಾಡಲು ಇಚ್ಚೆ ಪಡುವುದಿಲ್ಲ. ಮೇಲ್ಮನೆ ದಾಖಲು ಮಾಡಿದ್ದೇವೆ. ಅದು ಸದ್ಯದಲ್ಲಿಯೇ ವಿಚಾರಣೆಗೆ ಬರಲಿದೆ. ಬಳಿಕ ಎಲ್ಲವನ್ನೂ ಹೇಳುತ್ತೇವೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.