ಕಟ್ಟಡಗಳ ಎನ್ಒಸಿ ಶುಲ್ಕ ಏರಿಕೆ: ಕರ್ನಾಟಕ ಸರ್ಕಾರದ ವಿರುದ್ಧ ಆರ್ ಅಶೋಕ್ ಆಕ್ರೋಶ
ಆಸ್ತಿ ತೆರಿಗೆ, ಮುದ್ರಾಂಕ ದರ, ನೀರು, ಕರೆಂಟು ದರ ಏರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ವಸತಿ, ವಾಣಿಜ್ಯ ಹಾಗೂ ಬಹುಪಯೋಗಿ ಕಟ್ಟಡಗಳ ನಿರ್ಮಾಣಕ್ಕಾಗಿ ಪಡೆಯುವ ನಿರಾಕ್ಷೇಪಣಾ ಪತ್ರದ ಶುಲ್ಕವನ್ನು ಏರಿಕೆ ಮಾಡಿದ ಕರ್ನಾಟಕ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.
ಬೆಂಗಳೂರು, ಜುಲೈ 22: ವಸತಿ, ವಾಣಿಜ್ಯ ಹಾಗೂ ಬಹುಪಯೋಗಿ ಕಟ್ಟಡಗಳ ನಿರ್ಮಾಣಕ್ಕಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಕಡ್ಡಾಯವಾಗಿ ಪಡೆದುಕೊಳ್ಳಬೇಕಾದ ನಿರಾಕ್ಷೇಪಣಾ ಪತ್ರದ (ಎನ್ಒಸಿ) ಶುಲ್ಕವನ್ನು ಏರಿಕೆ ಮಾಡಿದ ಕರ್ನಾಟಕ ಸರ್ಕಾರದ (Karnataka Government) ಕ್ರಮವಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ (R. Ashok) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎನ್ಒಸಿ ಶುಲ್ಕ ಏರಿಕೆ ಸುದ್ದಿಯನ್ನು ಲಗ್ಗತ್ತಿಸಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಟ್ವೀಟ್ ಮಾಡಿದ ಅಶೋಕ್ ಅವರು “ಆಸ್ತಿ ತೆರಿಗೆ, ಮುದ್ರಾಂಕ ದರ, ನೀರು, ಕರೆಂಟು ದರ ಹೆಚ್ಚು ಮಾಡಿದ್ದಾಯ್ತು. ಈಗ ಸದ್ದಿಲ್ಲದೆ ವಸತಿ ಮತ್ತು ವಾಣಿಜ್ಯ ಕಟ್ಟಡಗಳ ಎನ್ಒಸಿ ಶುಲ್ಕ ದುಬಾರಿ ಮಾಡಿದೆ ಈ ದರಿದ್ರ ಕಾಂಗ್ರೆಸ್ ಸರ್ಕಾರ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೇ, ದಿನಬೆಳಗಾದರೆ ಒಂದಲ್ಲ ಒಂದು ಬೆಲೆ ಏರಿಕೆ ಮಾಡಿ ಕನ್ನಡಿಗರ ರಕ್ತ ಹೀರುತ್ತಿದ್ದೀರಲ್ಲ ನಿಮ್ಮ ಸರ್ಕಾರದ ಬಕಾಸುರ ಹೊಟ್ಟೆ ತುಂಬಿಸಲು ಕನ್ನಡಿಗರು ಇನ್ನೆಷ್ಟು ತೆರಿಗೆ, ಶುಲ್ಕ ತೆತ್ತಬೇಕು? ಎಂದು ಪ್ರಶ್ನಿಸಿದರು.
ಎಷ್ಟಿತ್ತು?
ವಸತಿ, ವಾಣಿಜ್ಯ ಹಾಗೂ ಬಹುಪಯೋಗಿ ಕಟ್ಟಡಕ್ಕೆ ಪ್ರಸ್ತುತ ಪ್ರತಿ ನಿರ್ಮಿತ ಪ್ರದೇಶದ (ಸೂಪರ್ ಬಿಲ್ಟ್ ಅಪ್ ಏರಿಯಾ) ಚದರ ಮೀಟರ್ಗೆ 60 ರೂ. ಅಥವಾ 5 ಲಕ್ಷ ರೂ. (ಯಾವುದು ಹೆಚ್ಚಿರುವುದೋ ಅದು ಅನ್ವಯ) ಇತ್ತು.
ಇದನ್ನೂ ಓದಿ: ಅಬಕಾರಿ ಉಪ ಆಯುಕ್ತರ ಹುದ್ದೆಗೆ 3.5 ಕೋಟಿ ರೂ! ವರ್ಗಾವಣೆ ದಂಧೆಗೆ ರೇಟ್ ಫಿಕ್ಸ್ ಎಂದ ಅಶೋಕ್
ಎಷ್ಟು ಏರಿಕೆ?
ಚದರ ಮೀಟರ್ಗೆ 80 ರೂ. ಅಥವಾ 6 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಶೇ.33 ರಷ್ಟು ಏರಿಕೆಯಾಗಿದೆ.
ಯಾವ ಕಟ್ಟಡಗಳಿಗೆ ಅನ್ವಯ?
ಬಹುಮಹಡಿ ವಸತಿ ಕಟ್ಟಡ, ಬಹುಮಡಿ ವಾಣಿಜ್ಯ ಕಟ್ಟಡ ಹಾಗೂ ಬಹುಪಯೋಗಿ ಕಟ್ಟಡಗಳು. ನಗರ ಮತ್ತು ಪ್ರದೇಶದಲ್ಲಿರುವ ಎಲ್ಲ ಶಾಲಾ-ಕಾಲೇಜು ಹಾಗೂ ಶೈಕ್ಷಣಿಕ ಕಟ್ಟಡಗಳು. ಹೋಟೆಲ್, ಆಸ್ಪತ್ರೆ, ಕಚೇರಿಗಳು, ಕೈಗಾರಿಕಾ ಕಟ್ಟಡಗಳು ಸೇರಿದಂತೆ ಇನ್ನಿತರ ಕಟ್ಟಡಗಳಿಗೆ ಅನ್ವಯವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ