ಸದನದಲ್ಲಿ ಹಾಜರಿಲ್ಲದ ಸಿಎಂ ಮತ್ತು ಡಿಸಿಎಂ, ಕೆರಳಿ ಕೆಂಡವಾದ ವಿರೋಧ ಪಕ್ಷದ ನಾಯಕರು!
ಇದು ಅಕ್ಷಮ್ಯ ಮತ್ತು ಸಾಮಾನ್ಯ ಜನರ ಗ್ರಹಿಕೆಗೆ ಸಿಗದ ಸಂಗತಿ. ವಿರೋಧ ಪಕ್ಷದವರು ಯಾವುದೇ ಪ್ರಶ್ನೆ ಕೇಳಲಿಮ ಉತ್ತರಿಸಲು ತಯಾರಿದ್ದೇವೆ ಎಂದು ದೊಡ್ಡದಾಗಿ ಕೊಚ್ಚಿಕೊಂಡ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಇವತ್ತು ಸದನದಿಂದ ನಾಪತ್ತೆ! ವಿರೋಧ ಪಕ್ಷಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸೋರು ಯಾರು?
ಬೆಂಗಳೂರು: ಸದನ ಶುರುವಾಗಿ ಒಂದು ಗಂಟೆ ಕಳೆದರೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಹಲವಾರು ಮಂತ್ರಿಗಳು ಸದನದಲ್ಲಿ ಹಾಜರಿಲ್ಲದಿರುವುದು ವಿರೋಧ ಪಕ್ಷದ ನಾಯಕರನ್ನು ಕೆರಳಿಸಿತು. ವಿಪಕ್ಷ ನಾಯಕ ಅರ್ ಅಶೋಕ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದಾಗ ಸಭಾಪತಿ ಯುಟಿ ಖಾದರ್ ಸರ್ಕಾರದ ಚೀಫ್ ವ್ಹಿಪ್ ಅಶೋಕ ಪಟ್ಟಣ್ ಕಡೆ ನೋಡಿದರು. ಗೃಹ ಸಚಿವ ಮತ್ತು ಕಾನೂನು ಸಚಿವ ವಿಧಾನ ಪರಿಷತ್ ನಲ್ಲಿದ್ದಾರೆ, ಉಳಿದವರು ಬರ್ತಾ ಇದ್ದಾರೆ, ಎಲ್ಲರಿಗೂ ನಾನು ಫೋನ್ ಮಾಡ್ತಾನೇ ಇದ್ದೀನಿ ಎನ್ನುತ್ತಾರೆ. ಅವರ ಮಾತಿನಿಂದ ತೃಪ್ತರಾಗದ ಸ್ಪೀಕರ್ ಕತೆಗಳನ್ನೆಲ್ಲ ಕಟ್ಟಬೇಡಿ, ಎಲ್ಲರನ್ನೂ ಬೇಗ ಕರೆಸಿ ಅನ್ನುತ್ತಾರೆ. ಅಶೋಕ ಎದ್ದುನಿಂತು, ನೀವು ವ್ಹಿಪ್ ಸ್ಥಾನದಲ್ಲಿರೋದು ಬೇಡ ಸಚಿವನಾಗಲು ಲಾಯಕ್ಕೀದ್ದೀರಿ, ಮುಂದೆ ಬಂದು ಕೂತ್ಕೊಳ್ಳಿ ಅನ್ನುತ್ತಾರೆ. ಪಟ್ಟಣ್ ಪ್ಯಾಲಿ ನಗೆ ಬೀರುತ್ತಾ ಕೂರುತ್ತಾರೆ. ಬಸನಗೌಡ ಪಾಟೀಲ್ ಯತ್ನಾಳ್ ಎದ್ದು ನಿಂತು, ಈಡಿ ಬಿಡುಗಡೆ ಮಾಡಿರುವ ಪ್ರೆಸ್ ನೋಟ್ ನಲ್ಲಿ ₹187 ಕೋಟಿಯ ಹೆಚ್ಚಿನ ಭಾಗ ಸಾರಾಯಿ ಅಂಗಡಿಗಳಿಗೆ ಹೋಗಿದೆ ಅಂತ ಉಲ್ಲೇಖವಾಗಿದೆ. ಇದು ಬಹಳ ಗಂಭೀರವಾದ ವಿಷಯ, ಇದರ ಚರ್ಚೆ ನಡೆಯುವಾಗ ಮುಖ್ಯಮಂತ್ರಿ ಸದಸನದಲ್ಲಿರದಿದ್ದರೆ ಹೇಗೆ, ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡುವ ಜವಾಬ್ದಾರಿ ಅವರ ಮೇಲಿದೆ ಎನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಟಿಪ್ಪುವಿನ ಅವತಾರವೇ ಸಿದ್ದರಾಮಯ್ಯ: ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ