ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ನಾಯಕರ ಬೃಹತ್ ಹೋರಾಟ: ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ಪ್ರತಿಭಟನೆ

ವಾಲ್ಮೀಕಿ ನಿಗಮ ಹಗರಣ, ಮುಡಾ ಸೈಟ್ ಹಂಚಿಕೆ ಹಗರಣ, ದಲಿತರ ದುಡ್ಡು ಗ್ಯಾರಂಟಿ ಯೋಜನೆಗಳಿಗೆ ಬಳಕೆ, ಈ ಮೂರು ವಿಚಾರಗಳೇ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಗೆ ಪ್ರಮುಖ ಅಸ್ತ್ರವಾಗಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಸರಿ ಕಲಿಗಳು ಮುಗಿಬಿದ್ದರು. ಸದನದ ಹೊರಗೆ ಆಕ್ರೋಶ, ಸದನದೊಳಗೆ ರೋಷಾವೇಷ ವ್ಯಕ್ತವಾಯಿತು.

ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ನಾಯಕರ ಬೃಹತ್ ಹೋರಾಟ: ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ಪ್ರತಿಭಟನೆ
ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು, ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
Follow us
| Updated By: ಗಣಪತಿ ಶರ್ಮ

Updated on: Jul 18, 2024 | 1:26 PM

ಬೆಂಗಳೂರು, ಜುಲೈ 18: ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿವಿಧ ಹಗರಣಗಳ ವಿರುದ್ಧ ರೊಚ್ಚಿಗೆದ್ದಿರುವ ಬಿಜೆಪಿ ನಾಯಕರು ಬೆಂಗಳೂರಿನ ಪ್ರೀಡಂಪಾರ್ಕ್‌ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದ್ದಾರೆ. ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಖಂಡಿಸಿ ಬಿಜೆಪಿ ಶಾಸಕರು, ಮಾಜಿ ಶಾಸಕರು, ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಅತ್ತ ಬಿಜೆಪಿ ಪ್ರತಿಭಟನೆ ಮಾಡುತ್ತಿದ್ದರೆ, ಇತ್ತ ಸುದ್ದಿಗೋಷ್ಠಿ ನಡೆಸಿದ ಸಚಿವರಾದ ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಬಿಜೆಪಿಗೆ ತಿರುಗೇಟು ಕೊಟ್ಟರು. ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

‘ಸಿಎಂ-ಡಿಸಿಎಂ ಹೆಸರು ಹೇಳುವಂತೆ ಇಡಿ ಅಧಿಕಾರಿಗಳಿಂದ ಒತ್ತಡ’

ಸುದ್ದಿಗೋಷ್ಠಿಯಲ್ಲಿ ಹೊಸ ಬಾಂಬ್ ಸಿಡಿಸಿದ ಸಚಿವ ಪ್ರಿಯಾಂಕ್ ಖರ್ಗೆ, ವಾಲ್ಮೀಕಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಸಿಎಂ, ಡಿಸಿಎಂ ಹೆಸರು ಹೇಳುವಂತೆ ಇಡಿ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಸದನದೊಳಗೂ ವಾಲ್ಮೀಕಿ ನಿಗಮ ಹಗರಣ ಗದ್ದಲ

BJP Protest against Congress govt scams in Bengaluru Freedom park and Assembly session, Karnataka news in Kannada

ವಿಧಾನಸಭೆ ಕಲಾಪದಲ್ಲಿಯೂ ವಾಲ್ಮೀಕಿ ನಿಗಮದ ಚರ್ಚೆ ಮುಂದುವರೆಸಿದ ವಿಪಕ್ಷ ಉಪ ನಾಯಕ ಅರವಿಂದ್ ಬೆಲ್ಲದ್, ದಲಿತ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಳ್ಳದಿದ್ರೆ ಈ ಪ್ರಕರಣ ಬಯಲಾಗ್ತಿರಲಿಲ್ಲ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಎಂ, ದಲಿತ ಅಲ್ಲ, ಪರಿಶಿಷ್ಟರು ಅಂತಾ ಹೇಳ್ಬೇಕು ಎಂದರು. ಈ ವೇಳೆ ಸಿಡಿದೆದ್ದ ಬಿಜೆಪಿ ಸದಸ್ಯರು, ನೀವೇ ಅಹಿಂದ ಶುರು ಮಾಡಿದ್ದು ಎಂದರು.

ಇದನ್ನೂ ಓದಿ: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ಯು ಟರ್ನ್ ಸರ್ಕಾರ ಎಂದು ಗುಡುಗಿದ ವಿಜಯೇಂದ್ರ

ಮಾತು ಮುಂದುವರಿದು ಬಿಜೆಪಿಯವರು, ಪರಿಶಿಷ್ಟರ ಪರವಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು. ಈ ವೇಳೆ ಅಶ್ವತ್ಥ್ ನಾರಾಯಣ ಮತ್ತು ಸಿಎಂ ನಡುವೆ ಏಕವಚನದಲ್ಲೇ ಮಾತಿನ ಸಮರ ನಡೆಯಿತು.

ಒಟ್ಟಿನಲ್ಲಿ, ಸದನದ ಹೊರಗೆ ಮತ್ತು ಒಳಗೆ ವಾಲ್ಮೀಕಿ ನಿಗಮ ಸಂಬಂಧ ಆರೋಪ ಪ್ರತ್ಯಾರೋಪದ ವಾಕ್ಸಮರ ನಡೆಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ