ಗದಗ, ಜೂನ್ 22: ಸಾಹಿತಿಗಳೂ ರಾಜಕಾರಣಿಗಳೇ ಎಂಬ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೆ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲದೆ ಪ್ರಗತಿಪರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ. ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಾಹಿತಿ ಬಸವರಾಜ್ ಸೂಳಿಭಾವಿ (Basavaraj sulibhavi), ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಡಿಕೆ ಶಿವಕುಮಾರ್ ಅವರಿಗೆ ಬುದ್ಧಿ ಹೇಳಲು ಕೇಳಿಕೊಂಡಿದ್ದೇವೆ ಎಂದರು.
ವಿಚಾರವಾದಿಗಳ, ಪ್ರಗತಿಪರರ ಆಶಯದಂತೆ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಬರಹಗಾರರನ್ನ, ಸಾಹಿತಿಗಳನ್ನ ಅವಮಾನಿಸುವ, ದರ್ಪತೋರುವ ಕೃತ್ಯ ದುರಂತ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ 60-70% ಕಮೀಷನ್ ನಡೆದಿದೆ: ಸಿಸಿ ಪಾಟೀಲ್ ಆರೋಪ
ಡಿಕೆ ಶಿವಕುಮಾರ್ ನಾನೇ ಸಭೆ ಕರೆದಿದ್ದೇನೆ ಅದರಲ್ಲಿ ತಪ್ಪೇನಿದೆ ಅಂತಾರೆ. ಆದರೆ ಸಾಹಿತಿಗಳೂ ರಾಜಕಾರಣಿಗಳು ಅಂತಾ ಹೇಳಿ ಸಾಂಸ್ಕೃತಿಕ ವಲಯವನ್ನ ಅವಮಾನಿಸಿದ್ದಾರೆ. ಇನ್ನು ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದ್ದು ತಪ್ಪೇನು ಎಂದು ಸಚಿವ ತಂಗಡಗಿ ಅಂತಾರೆ. ಅವರ ಹೇಳಿಕೆ ಕಾಂಗ್ರೆಸ್ ಪಕ್ಷದ ಸಂಸ್ಕೃತಿಕ ಅಧಃಪತನಕ್ಕೆ ಸಾಕ್ಷಿ ಎಂದು ಕಿಕಾರಿದ್ದಾರೆ.
ಪಕ್ಷದ ಸರ್ಕಾರ ಅನ್ನೋದಾದರೆ ಸಚಿವ ಸಂಪುಟ ಸಭೆಯನ್ನ ಪಕ್ಷದ ಕಚೇರಿಯಲ್ಲಿ ಕರೆಯಿರಿ. ಸಾಂಸ್ಕೃತಿಕ ರಂಗದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ಸರಿಯಲ್ಲ. ಸಂಪುಟದ ಸದಸ್ಯರಿಗೆ ತಿಳಿಹೇಳುವಂತೆ ಸಿಎಂಗೆ ಪತ್ರ ಬರೆದು ಕೇಳಿಕೊಂಡಿದ್ದೇವೆ. ಸಿಎಂ ಮಾತ್ನಾಡ್ತಿರೋದು ಅನುಮಾನ ಮೂಡಿಸಿದೆ ಎಂದಿದ್ದಾರೆ.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಒಂದಾಗಿ ಕಾಂಗ್ರೆಸ್ ಸೊಕ್ಕು ಮುರಿಯುತ್ತೇವೆ: ವಿಜಯೇಂದ್ರ
ಸಂಸ್ಕೃತಿಕ ಕ್ಷೇತ್ರಕ್ಕೆ ಸೇರಿದ ಅಕಾಡಮಿಗಳು ಸ್ವಾಯತ್ತವಾಗಿ ಕೆಲಸ ಮಾಡುತ್ತವೆ. ಅಕಾಡಮಿಗಳ ಅಧ್ಯಕ್ಷರನ್ನ ಪಕ್ಷದ ಕಚೇರಿಗೆ ಕರೆದು ಸಭೆ ಮಾಡಿದ್ದು ಸಂವಿಧಾನಾತ್ಮಕ ಕ್ರಮವಲ್ಲ. ಸಭೆಯಲ್ಲಿ ಪಕ್ಷದ ಪ್ರತಿನಿಧಿಯಾಗಿ ಕೆಲಸ ಮಾಡಲು ಹೇಳಿದ್ದಾರೆ.
ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಅಕಾಡಮಿಯಲ್ಲಿ ಅವಕಾಶ ಸಿಗದವರು ವಿರೋಧಿಸುತ್ತಿದ್ದಾರೆ ಅಂತಾರೆ. ಸಾಹಿತಿಗಳು ರಾಜಕಾರಣಿಗಳ ಹಿಂದೆ ಓಡಾಡುತ್ತಿದ್ದರು ಅಂತೆಯೂ ಹೇಳಿದ್ದಾರೆ. ಹಿಂದೆ ಓಡಾಡಿದ ಸಾಹಿತಿಗಳ ಬಗ್ಗೆ ದಾಖಲೆ ಸಮೇತ ರಮೇಶ್ ಬಾಬು ಮಾಹಿತಿ ನೀಡಲಿ. ಇಲ್ಲವಾದಲ್ಲಿ ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಸವಾಲ್ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷವನ್ನ ಜನರಿಂದ ದೂರ ತೆಗೆದುಕೊಂಡು ಹೋಗುವ ಕೆಲಸವನ್ನ ಡಿಕೆ ಶಿವಕುಮಾರ್, ಸಚಿವ ತಂಗಡಗಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:00 pm, Sat, 22 June 24