Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಚಮಸಾಲಿ ಮೀಸಲಾತಿ ಹೋರಾಟ; ಸಮುದಾಯದ ಅಧ್ಯಯನಕ್ಕೆ ಮುಂದಾದ ಹಿಂದುಳಿದ ವರ್ಗಗಳ ಆಯೋಗ?

ಸಮುದಾಯದ ಜನರಿರುವ ಕಡೆಗಳಿಗೆ ಆಯೋಗದ ಸದಸ್ಯರು ಭೇಟಿ ನೀಡಿ, ಅಧ್ಯಯನ ನಡೆಸಲು ಆಯೋಗ ತೀರ್ಮಾನ ಮಾಡಿದೆ. ಈ ಸಂಪೂರ್ಣ ಪ್ರಕ್ರಿಯೆಗೆ ಯಾವುದೇ ಸಮಯದ ಮಿತಿ ಇರುವುದಿಲ್ಲ ಎಂದೂ ಮೂಲಗಳಿಂದ ತಿಳಿದುಬಂದಿದೆ.

ಪಂಚಮಸಾಲಿ ಮೀಸಲಾತಿ ಹೋರಾಟ; ಸಮುದಾಯದ ಅಧ್ಯಯನಕ್ಕೆ ಮುಂದಾದ ಹಿಂದುಳಿದ ವರ್ಗಗಳ ಆಯೋಗ?
ಮುರುಗೇಶ್ ನಿರಾಣಿ
Follow us
TV9 Web
| Updated By: ganapathi bhat

Updated on:Apr 06, 2022 | 6:51 PM

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ರಾಜ್ಯದ ವಿವಿಧೆಡೆ ಇರುವ ಪಂಚಮಸಾಲಿ ಸಮುದಾಯದ ಜನರನ್ನು ಭೇಟಿ ಮಾಡಿ, ಅವರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ ಮಾಡಲಿದೆ. ಈ ಪ್ರಕ್ರಿಯೆಯ ಬಳಿಕ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕೋ ಬೇಡವೋ ಎಂಬ ಬಗ್ಗೆ ತೀರ್ಮಾನವಾಗಲಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇಂದು (ಮಾರ್ಚ್ 22) ಬೆಳಗ್ಗೆಯಿಂದ ಸಂಜೆಯವರೆಗೆ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ಹಿಂದುಳಿದ ವರ್ಗಗಳ ಆಯೋಗವು ಮುಕ್ತ ವಿಚಾರಣೆ (Open Hearing) ನಡೆಸಿತು. ಪಂಚಮಸಾಲಿ ಲಿಂಗಾಯತರ 2A ಮೀಸಲಾತಿ ಬೇಡಿಕೆಯ ಬಗ್ಗೆ ಚರ್ಚೆ ನಡೆಸಲಾಗಿತ್ತು. ಸೂಕ್ತ ದಾಖಲೆಯ ಜೊತೆಗೆ ಸಮುದಾಯದ ಮೀಸಲಾತಿ ಕುರಿತು ಮಾತುಕತೆ ನಡೆಸಲಾಗಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ.

ಸಮುದಾಯದ ಜನರಿರುವ ಸ್ಥಳಗಳಿಗೆ ಆಯೋಗದ ಸದಸ್ಯರು ಭೇಟಿ ನೀಡಿ, ಅಧ್ಯಯನ ನಡೆಸಲು ಆಯೋಗ ತೀರ್ಮಾನ ಮಾಡಿದೆ. ಈ ಸಂಪೂರ್ಣ ಪ್ರಕ್ರಿಯೆಗೆ ಯಾವುದೇ ಸಮಯದ ಮಿತಿ ಇರುವುದಿಲ್ಲ ಎಂದೂ ಮೂಲಗಳಿಂದ ತಿಳಿದುಬಂದಿದೆ. ಆಯೋಗದ ಸಭೆ ಬಳಿಕ, ಪಂಚಮಸಾಲಿ ಸಮುದಾಯಕ್ಕೆ ಸೇರಿರುವ ಸಚಿವ ಮುರುಗೇಶ್ ನಿರಾಣಿ ಮಾತನಾಡಿದ್ದಾರೆ. ಸಮಸ್ತ ವೀರಶೈವ-ಲಿಂಗಾಯತದ ಸಣ್ಣಸಣ್ಣ ಸಮುದಾಯಗಳಿಗೂ ಮೀಸಲಾತಿ ಸೌಲಭ್ಯ ಸಿಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಮಸ್ತ ವೀರಶೈವ -ಲಿಂಗಾಯತ ಸಮುದಾಯದಲ್ಲಿರುವ ಸಣ್ಣ ಸಣ್ಣ ಉಪಪಂಗಡಗಳನ್ನು ಗುರುತಿಸಿ 2ಎಗೆ ಸೇರ್ಪಡೆ ಮಾಡಿ ಸಾಮಾಜಿಕ ನ್ಯಾಯ ಒದಗಿಸಲು ಹಿಂದುಳಿದ ವರ್ಗಗಳ ಆಯೋಗ ಮುಂದಾಗಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಮನವಿ ಮಾಡಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಬಹಿರಂಗ ವಿಚಾರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ- ಲಿಂಗಾಯತ ಸಮುದಾಯದಲ್ಲಿ ಅನೇಕ ಉಪಪಂಗಡಗಳಿದ್ದು, ಇವುಗಳನ್ನು ಆಯೋಗ ಗುರುತಿಸಿ ಮೀಸಲಾತಿ ಸೌಲಭ್ಯ ಒದಗಿಸುವ ಮೂಲಕ ಸಾಮಾಜಿಕ ನ್ಯಾಯ ಕೊಡಬೇಕೆಂದು ಅವರು ಸಲಹೆ ನೀಡಿದ್ದಾರೆ.

ಪಂಚಮಸಾಲಿ ಸಮುದಾಯವು ಮೂಲತಃ ಕೃಷಿ ಅವಲಂಬಿತವಾಗಿದೆ. ಈಗಲೂ ನಮ್ಮಲ್ಲಿ ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದವರ ಸಂಖ್ಯೆ ಸೀಮಿತವಾಗಿದೆ. ಹೀಗಾಗಿ ನಮ್ಮ ಸಮುದಾಯದವನ್ನು 2 ಗೆ ಸೇರ್ಪಡೆ ಮಾಡಬೇಕು ಎಂದು ಹೇಳಿದ್ದಾರೆ. ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಕುಲಶಾಸ್ತ್ರ ಅಧ್ಯಯನ ನಡೆಸುತ್ತಿದೆ. ಸಮುದಾಯಕ್ಕೆ ಸೇರಿದ ಮಠಾಧೀಶರು ಹಾಗೂ ಮುಖಂಡರಿಂದಲೂ ಅಭಿಪ್ರಾಯವನ್ನು ಪಡೆಯುತ್ತಿದ್ದಾರೆ. ಆಯೋಗದಿಂದ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಆಯೋಗವು ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಎಲ್ಲವನ್ನೂ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದೆ. ನಂತರ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರು ಸಂಪುಟದಲ್ಲಿ ಚರ್ಚಿಸಿ ಸೂಕ್ತವಾದ ತೀರ್ಮಾವನ್ನು ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕೆಂಬುದು ದಶಕಗಳ ಬೇಡಿಕೆಯಾಗಿದೆ. ಇದಕ್ಕಾಗಿ ಅನೇಕರು ಹೋರಾಟ ನಡೆಸಿದ್ದಾರೆ. ಸರ್ಕಾರ ಸೂಕ್ತವಾದ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ 1871ರಲ್ಲಿ ಮಿಲ್ಲರ್ ಸಮಿತಿಯು ಹಿಂದುಳಿದ ವರ್ಗಗಳ ಸಮಿತಿ ಮತ್ತು ಮುಂದುವರೆದ ಜಾತಿ ಎಂಬ ವರದಿಯನ್ನು ನೀಡಿತ್ತು. ಇಲ್ಲಿಯೂ ಕೂಡ ಪಂಚಮಸಾಲಿ ಸಮುದಾಯ ಹಿಂದುಳಿದಿದೆ ಎಂದು ಉಲ್ಲೇಖಿಸಿದೆ ಎಂದು ಹೇಳಿದ್ದಾರೆ.

ಯತ್ನಾಳ್, ಕಾಶಪ್ಪನವರ್​ಗೆ ಪರೋಕ್ಷ ತಿರುಗೇಟು ನೀಡಿದ ನಿರಾಣಿ ಸಮುದಾಯಕ್ಕೆ ಮೀಸಲಾತಿ ಸಿಗಬೇಕೆಂದು ಕೂಡಲಸಂಗಮ ಮಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರದ ಮಠದ ವಚನಾನಂದ ಸ್ವಾಮೀಜಿ, ಮುಖಂಡರು, ಜನಪ್ರತಿನಿಧಿಗಳು ಸೇರಿದಂತೆ ಅನೇಕರು ಹೋರಾಟ ನಡೆಸಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಮಾರು 10 ಲಕ್ಷ ಜನ ಸೇರಿದ್ದರ ಹಿಂದೆ ಎಲ್ಲರ ಪರಿಶ್ರಮವಿದೆ. ಇದರಲ್ಲಿ ಯಾರೊ ಒಂದಿಬ್ಬರ ಪ್ರಯತ್ನ ಇಲ್ಲ ಎಂದು ಪರೋಕ್ಷವಾಗಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ವಿಜಯಾನಂದ ಕಾಶಪ್ಪನವರ್ ಅವರ ಹೆಸರು ಹೇಳದೆ ಸಚಿವ ನಿರಾಣಿ ತಿರುಗೇಟು ನೀಡಿದ್ದಾರೆ.

ನಾನು ಎಲ್ಲಿಗೆ ಬರಬೇಕು? ಎಲ್ಲಿಗೆ ಹೋಗಬಾರದು ಎಂಬ ಸಾಮಾನ್ಯ ಜ್ಞಾನವಿದೆ. ನಾನು ಬೇರೆಯವರಿಂದ ಕಲಿಯಬೇಕಾದ ಅಗತ್ಯವಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ. ಈ ಹಿಂದೆ 2010ರಲ್ಲೇ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಲಿಂಗಾಯತ ಪಂಚಮಸಾಲಿ ಸಮುದಾಯವನ್ನು 2ಎ ಸೇರ್ಪಡೆಯಾಗುವ ಕುರಿತು ಸಮಿತಿ ರಚಿಸಿದ್ದರು. ನಾನೂ ಆ ಸಮಿತಿಯ ಸದಸ್ಯನಾಗಿದ್ದೆ. ನಮ್ಮ ಸಮುದಾಯದ ಬಗ್ಗೆ ಸಿಎಂ ಅಪಾರ ಕಾಳಜಿ ಇಟ್ಟುಕೊಂಡಿದ್ದಾರೆ. ಸಮುದಾಯಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ. ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಏಕೈಕ ನಾಯಕ. ಅವರ ನಾಯಕತ್ವದಲ್ಲೇ 2ಎ ಸೇರ್ಪಡೆ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶೇಂಗಾ ಹೋಳಿಗೆ ತಿಂದು ಮೀಸಲಾತಿ ಹೋರಾಟ ನಿಲ್ಲಿಸಿದ ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಶ್ರೀ

ಪಂಚಮಸಾಲಿ ಮೀಸಲಾತಿ ನೀಡಲು ಪೂರಕ ದಾಖಲೆ ಸಲ್ಲಿಸಬೇಕು: ಹಿಂದುಳಿದ ವರ್ಗಗಳ ಆಯೋಗದಿಂದ ಸ್ವಾಮೀಜಿಗೆ ನೋಟಿಸ್

Published On - 10:04 pm, Mon, 22 March 21