ಹೊಸ ಸಂಘರ್ಷಕ್ಕೆ ಕಾರಣವಾಯ್ತು ಮಕ್ಕಳ 1ನೇ ಕ್ಲಾಸ್ ಪ್ರವೇಶ ವಯೋಮಿತಿ ಸಡಿಲಿಕೆ

ಮಕ್ಕಳ ಒಂದನೇ ತರಗತಿ ದಾಖಲಾತಿಗೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ಆದೇಶ ಸಂಘರ್ಷಕ್ಕೆ ಕಾರಣವಾಗಿತ್ತು. ಇದೀಗ ಪೋಷಕರ ವಿರೋಧ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ 60 ದಿನಗಳು ಅಂದರೆ ಎರಡು ತಿಂಗಳು ವಿನಾಯಿತಿಯನ್ನ ನೀಡಿದೆ. ಆದ್ರೆ ಈ ವಿನಾಯತಿ ಈಗ ಮತ್ತೊಂದು ಹೊಸ ಸಂಘರ್ಷಕ್ಕೆ ಕಾರಣವಾಗಿದೆ. ಇದೇನಿದು ವಿನಾಯಿತು ನೀಡಿದರೂ ಹೊಸ ಸಂಘರ್ಷ ಶುರುವಾಗಿದ್ಯಾಕೆ ಅಂತೀರಾ? ಈ ಸ್ಟೋರಿ ಓದಿ.

ಹೊಸ ಸಂಘರ್ಷಕ್ಕೆ  ಕಾರಣವಾಯ್ತು ಮಕ್ಕಳ 1ನೇ ಕ್ಲಾಸ್ ಪ್ರವೇಶ ವಯೋಮಿತಿ ಸಡಿಲಿಕೆ
ಪ್ರಾತಿನಿಧಿಕ ಚಿತ್ರ
Edited By:

Updated on: Mar 29, 2026 | 9:03 PM

ಬೆಂಗಳೂರು, (ಮಾರ್ಚ್ 29): ಒಂದನೇ ತರಗತಿ (1st standard) ದಾಖಲಾತಿಗೆ ಜೂನ್ 1ಕ್ಕೆ 6 ವರ್ಷ ತುಂಬಿರಬೇಕು ಎಂಬ ನಿಯಮಕ್ಕೆ ಸಾಕಷ್ಟು ಪೋಷಕರು ಈ ವರ್ಷವೂ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು (Madhu bangarappa) ಮೊನ್ನೆ ಸುದ್ದಿಗೋಷ್ಠಿ ನಡೆಸಿ 2026-27 ನೇ ಸಾಲಿಗೆ ವಯೋಮಿತಿ ಸಡಲಿಕೆ ಮಾಡಿ ಘೋಷಣೆ ಮಾಡಿದ್ದರು. 1ನೇ ತರಗತಿ ದಾಖಲಾತಿಗೆ ಎರಡು ತಿಂಗಳ ವಿನಾಯಿತಿ ನೀಡಲಾಗಿದ್ದು, ಒಂದನೇ ಕ್ಲಾಸ್​ಗೆ ಅಡ್ಮಿಷನ್ ಮಾಡಿಸಲು ಮಕ್ಕಳಿಗೆ 5.8 ವರ್ಷ ಆಗಿದ್ದರೆ ಸಾಕು. ಜೊತೆಗೆ ಯುಕೆಜಿ ವಯೋಮಿತಿಗೂ ಸಡಲಿಕೆ ಅವಕಾಶ ನೀಡಿದ್ದಾರೆ. ಆದ್ರೆ ಈ ವಯೋಮಿತಿ ಸಡಲಿಕೆ ಈಗ ಪೋಷಕರ ವಿರೋಧಕ್ಕೆ ಕಾರಣವಾಗಿದೆ. ಎರಡು ತಿಂಗಳ ಸಡಲಿಕೆ ಬೇಡ ಕಳೆದ ವರ್ಷದಂತೆ 5.5 ವರ್ಷಕ್ಕೆ 1ನೇ ತರಗತಿ ದಾಖಲಾತಿಗೆ ಅವಕಾಶ ನೀಡುವಂತೆ ಹೋರಾಟ ಶುರು ಮಾಡಿದ್ದಾರೆ.

ಹೌದು… ಸರ್ಕಾರ 2 ತಿಂಗಳ ವಯೋಮಿತಿ ಸಡಲಿಕೆ ಮಾಡಿದೆ. ಆದರೆ ಅರ್ಧಕರ್ಧ ಪೋಷಕರಿಗೆ ನಿಲ್ಲದ ಕಳವಳ ಶುರುವಾಗಿದೆ. 60 ದಿನ ಬೇಡ ಕಳೆದ ವರ್ಷದಂತೆ 5.5 ವರ್ಷಕ್ಕೆ ದಾಖಲಾತಿ ನೀಡಿ ವಯೋಮಿತಿ ಸಡಲಿಕೆಗೆ ಪೋಷಕರ ಒತ್ತಾಯ ಶುರು ಮಾಡಿದ್ದಾರೆ. 5.5 ವಯೋಮಿತಿ ಸಡಲಿಕೆಗೆ ವಯೋಮಿತಿ ಸಡಲಿಕೆ ಹೋರಾಟ ವೇದಿಕೆ ಮಾಡಿಕೊಂಡ ಪೋಷಕರು, ಸಿಎಂಗೂ ಮನವಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಶಾಲಾ ಪ್ರವೇಶಕ್ಕೆ ಕಡ್ಡಾಯ ವಯೋಮಿತಿ ವಿಚಾರ ಮತ್ತೊಂದು ಹೊಸ ಸಂಘರ್ಷಕ್ಕೆ ಕಾರಣವಾಗಿದೆ.

ಇದನ್ನೂ ನೋಡಿ: 1ನೇ ತರಗತಿ ಪ್ರವೇಶ: ವಯಸ್ಸಿನ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ರಾಜ್ಯ ಸರ್ಕಾರ

ಪೋಷಕರ ಒತ್ತಾಯದ ಬಳಿಕ ಮಕ್ಕಳ ಹಿತದೃಷ್ಟಿಯಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ವರ್ಷ ವಯೋಮಿತಿ ಸಡಲಿಕೆ ಏನೋ ನೀಡಿದ್ದಾರೆ. ಆದ್ರೆ ಇದರಿಂದ ಈಗ ಮತಷ್ಟು ಪೋಷಕರು ಎರಡು ತಿಂಗಳು ಸಾಲದು ಆರು ತಿಂಗಳವರೆಗೂ ಅವಕಾಶ ನೀಡಿ ಎಂದು ಹೋರಾಟ ಶುರು ಮಾಡಿದ್ದಾರೆ.

ಮೇ, ಆಗಸ್ಟ್ ತಿಂಗಳಲ್ಲಿ ಹುಟ್ಟಿದ ಮಕ್ಕಳಿಗೆ ಸಡಲಿಕೆ ಭಾಗ್ಯ ಇಲ್ಲ. ಹೀಗಾಗಿ ಸರ್ಕಾರದ ನಿರ್ಧಾರ ಅರ್ಧ ಖುಷಿ ಕೊಟ್ಟಿದೆ ಎಂದು ಪೋಷಕರು ಬೇಸರ ಹೊರ ಹಾಕಿದ್ದಾರೆ . ಸರ್ಕಾರದ ಸಡಲಿಕೆ ನಿರ್ಧಾರದಿಂದ ಕೇವಲ 1.70 ಲಕ್ಷ ಮಕ್ಕಳಿಗೆ ಮಾತ್ರ ಅನುಕೂಲ. ಇನ್ನುಳಿದ 75 ಸಾವಿರ ಮಕ್ಕಳಿಗೆ ಸಮಸ್ಯೆ ಕಟ್ಟಿಟ್ಟಬುತ್ತಿ. ಹೀಗಾಗಿ ಮತ್ತೆ ಸರ್ಕಾರ, ಶಿಕ್ಷಣ ಸಚಿವರಿಗೆ ಮನವಿ ಮಾಡಲು ಮುಂದಾಗಿದ್ದು, 5.5 ವರೆಗೂ ಸಡಿಲಿಕೆ ಮಾಡಿ ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us