ವಕ್ಫ್ ಆಸ್ತಿ ವಿವಾದ: ನ.7ಕ್ಕೆ ಕರ್ನಾಟಕಕ್ಕೆ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಭೇಟಿ!
ರೈತರಿಗೆ ವಕ್ಫ್ ನೋಟಿಸ್ ವಿವಾದ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗುತ್ತಿದೆ. ಈ ಸಂಬಂಧ ಬಿಜೆಪಿ ನಾಯಕರು ಬರೆದಿದ್ದ ಪತ್ರಕ್ಕೆ ವಕ್ಫ್ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಸ್ಪಂದಿಸಿದ್ದು, ನವೆಂಬರ್ 7ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ.
ಬೆಂಗಳೂರು, (ನವೆಂಬರ್ 05): ವಕ್ಫ್ ಆಸ್ತಿ ಎಂದು ರೈತರಿಗೆ ನೋಟಿಸ್ ಕೊಟ್ಟ ಹಿನ್ನೆಲೆಯಲ್ಲಿ ಜಂಟಿ ಸದನ ಸಮಿತಿ (ಜೆಪಿಸಿ ) ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ನವೆಂಬರ್ 7 ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ವಿಜಯಪುರ ಹಾಗೂ ಹುಬ್ಬಳ್ಳಿಗೆ ಭೇಟಿ ನೀಡಲಿರುವ ಅವರು, ರೈತರ ಆಹವಾಲುಗಳನ್ನು ಆಲಿಸಲಿದ್ದಾರೆ. ಈ ಬಗ್ಗೆ ಜಂಟಿ ಸದಸನ ಸಮಿತಿ ಸದಸ್ಯರೂ ಆಗಿರುವ ಸಂಸದ ತೇಜಸ್ವಿ ಸೂರ್ಯ ಮಾಹಿತಿ ಹಂಚಿಕೊಂಡಿದ್ದು, ರೈತರು ತಮ್ಮ ಅಹವಾಲು ಹೇಳಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ರೈತರ ಆಹವಾಲುಗಳನ್ನು ಸ್ವೀಕಾರ ಮಾಡುವುದರ ಜೊತೆಗೆ ನೋಟಿಸ್ ಜಾರಿಯಾದ ರೈತರ ಜೊತೆಗೆ ಅವರು ಸಂವಾದವನ್ನು ನಡೆಸಲಿದ್ದಾರೆ. ರೈತ ಸಂಘಟನೆಗಳ ಪ್ರಮುಖರು ಹಾಗೂ ಹೋರಾಟಗಾರರ ಜೊತೆಗೂ ಅವರು ಸಂವಾದ ನಡೆಸಲಿದ್ದಾರೆ.
ಇದನ್ನೂ ಓದಿ: ವಕ್ಫ್ ಮಂಡಳಿ ನೋಟಿಸ್: ಕರ್ನಾಟಕ ರೈತರ ಅಹವಾಲು ಆಲಿಸಲು ಜಂಟಿ ಸಂಸದೀಯ ಸಮಿತಿಗೆ ತೇಜಸ್ವಿ ಸೂರ್ಯ ಪತ್ರ
ವಿಜಯಪುರ, ಬಾಗಲಕೋಟೆ ಹಾಗೂ ಇತರ ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್ ರೈತರಿಗೆ ನೋಟಿಸ್ ಜಾರಿಗೊಳಿಸಿತ್ತು. ಈ ನೋಟಿಸ್‌ನಲ್ಲಿ ರೈತರಿಗೆ ಸೇರಿರುವ ಜಮೀನು ವಕ್ಫ್‌ಗೆ ಸೇರಿದ್ದು, ಎಂದು ಉಲ್ಲೇಖಿಸಿತ್ತು. ಹಾಗೂ ದಾಖಲೆಗಳನ್ನು ನೀಡುವಂತೆಯೂ ಸೂಚನೆ ನೀಡಿತ್ತು. ಅಷ್ಟೇ ಅಲ್ಲದೆ, ರೈತರ ಪಹಣಿಯಲ್ಲೂ ವಕ್ಫ್ ಜಮೀನು ಎಂದು ಬದಲಾವಣೆ ಮಾಡಲಾಗಿತ್ತು. ಇದು ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ವಿರೋಧಕ್ಕೆ ಕಾರಣವಾಗಿತ್ತು. ಈ ನಡುವೆ ರೈತರ ಸಮಸ್ಯೆಗಳನ್ನು ಆಲಿಸಿ ವರದಿ ಸಲ್ಲಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿದ್ದರು.
ಇನ್ನು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವಕ್ಫ್ ಗುಮ್ಮ ಸಂಬಂಧ ಸಂಸದ ತೇಜಸ್ವಿ ಸೂರ್ಯ ಅವರು ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ವಕ್ಫ್ ಬೋರ್ಡ್ ಯಾವ ರೀತಿಯಲ್ಲಿ ನಡೆದುಕೊಂಡಿದೆ. ಇದರಿಂದ ರೈತರು ಯಾವ ರೀತಿಯಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ ಎಂಬುವುದನ್ನು ವಿವರಿಸಿದ್ದರು.
ಕರ್ನಾಟಕ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ