AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​ನಲ್ಲಿ ಹೆಚ್ಚಾದ ಕೊರೊನಾ ಪ್ರಕರಣ: ಮಾಸ್ಕ್ ಧರಿಸದೆ ಜನರ ನಿರ್ಲಕ್ಷ್ಯ

ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಳೆದ ನಾಲ್ಕೈದು ತಿಂಗಳಿಂದ ಬಾರಿ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಇಡೀ ರಾಜ್ಯಕ್ಕೆ ಹೋಲಿಸಿದರೆ ಬೀದರ್ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಇರುವ ಸೋಂಕಿತರ ಸಂಖ್ಯೆ ಕಡಿಮೆಯಿತ್ತು. ಆದರೆ ಕಳೆದ ಎರಡು ವಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ.

ಬೀದರ್​ನಲ್ಲಿ ಹೆಚ್ಚಾದ ಕೊರೊನಾ ಪ್ರಕರಣ: ಮಾಸ್ಕ್ ಧರಿಸದೆ ಜನರ ನಿರ್ಲಕ್ಷ್ಯ
ಮಾಸ್ಕ್​ ಧರಿಸದೆ ಓಡಾಡುತ್ತಿರುವ ಜನರು
sandhya thejappa
|

Updated on: Mar 14, 2021 | 10:32 AM

Share

ಬೀದರ್: ಮಹಾಮಾರಿ ಕೊರೊನಾ ಸೋಂಕಿನಿಂದಾಗಿ ಜಿಲ್ಲೆಯಲ್ಲಿ ಪ್ರತಿದಿನ ಹತ್ತಾರು ಪ್ರಕರಣಗಳು ದಾಖಲಾಗುತ್ತಿವೆ. ಕಳೆದೆರಡು ವಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಕೊರೊನಾ ನಿಯಂತ್ರಿಸಲು ಅಧಿಕಾರಿ ವರ್ಗ ಹಗಲಿರುಳು ಶ್ರಮಸುತ್ತಿದೆ. ಮಕ್ಕಳು, ಬಾಣಂತಿ, ವಯೋವೃದ್ಧರಿಗೆ ವೈರಸ್ ಅಂಟಿಕೊಳ್ಳುತ್ತಿದೆ. ರಕ್ಕಸ ಸೋಂಕಿನಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಈವರೆಗೂ ನೂರಾರು ಜನ ಸಾವಿಗೀಡಾಗಿದ್ದಾರೆ. ಇಷ್ಟಾದರೂ ಜಿಲ್ಲೆಯ ಜನರಲ್ಲಿ ಭಯ ಎನ್ನುವುದು ಇಲ್ಲವಾಗಿದ್ದು, ಮಾಸ್ಕ್ ಹಾಕಿಕೊಳ್ಳದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಇದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಳೆದ ನಾಲ್ಕೈದು ತಿಂಗಳಿಂದ ಬಾರಿ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಇಡೀ ರಾಜ್ಯಕ್ಕೆ ಹೋಲಿಸಿದರೆ ಬೀದರ್ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಇರುವ ಸೋಂಕಿತರ ಸಂಖ್ಯೆ ಕಡಿಮೆಯಿತ್ತು. ಆದರೆ ಕಳೆದ ಎರಡು ವಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ. ಕಳೆದ ಎಂಟು ದಿನಗಳಲ್ಲೇ ಜಿಲ್ಲೆಯಲ್ಲಿ 109 ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಡೀ ರಾಜ್ಯದಲ್ಲೇ ಬೀದರ್ ರೆಡ್ ಝೋನ್ ತಲುಪಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತವು ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಿದ್ದು, ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಕೆಗೆ ಸೂಚಿಸಿದೆ.

ಒಟ್ಟು ಪ್ರಕರಣಗಳೆಷ್ಟು? ಸದ್ಯಕ್ಕೆ ಜಿಲ್ಲೆಯಲ್ಲಿ ಮಾರ್ಚ್ 13ರ ವರೆಗೆ 7,707 ಜನರಿಗೆ ಸೋಂಕು ತಗುಲಿದೆ. ಈ ಪೈಕಿ 7,431 ಜನರು ಕೋವಿಡ್ನಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ. ಜಿಲ್ಲೆಯಲ್ಲಿ 98 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಕೊರೊನಾದಿಂದ 174 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇದೀಗ 100 ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದರೆ ಇಬ್ಬರಿಗೆ ಸೋಂಕು ಇರುವುದು ಬೆಳಕಿಗೆ ಬರುತ್ತಿದೆ. ಈಗಾಗಲೇ ಕೋವಿಡ್ ವ್ಯಾಕ್ಸಿನ್ ಕೊಡಲಾಗುತ್ತಿದ್ದು, ಇದುವರೆಗೂ ಕೋವಿಡ್ ವ್ಯಾಕ್ಸಿನ್ ಪಡೆದವರ ಮಾಹಿತಿ ನೋಡುವುದಾದರೆ 12 ಸಾವಿರಕ್ಕೂ ಅಧಿಕ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ. ಅಲ್ಲದೇ ಮಾರ್ಚ್ 1 ರಿಂದ ಮೂರನೇ ಹಂತದ ವ್ಯಾಕ್ಸಿನ್ ಕೊಡಲಾಗುತ್ತಿದ್ದು, ಎಲ್ಲರೂ ಬಂದು ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಆರೋಗ್ಯ ಅಧಿಕಾರಿ ಜನರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

ಕೊರೊನ ಬಗ್ಗೆ ಭಯವಿಲ್ಲದೆ ಓಡಾಡುತ್ತಿರುವ ಜನರು

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಹಂಚಿಕೊಂಡಿರುವ ಮಹರಾಷ್ಟ್ರ ಗಡಿ ಭಾಗ, ತೆಲಂಗಾಣ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಇದರ ಜೊತೆಗೆ ಅಕ್ಕಪಕ್ಕದ ರಾಜ್ಯದಿಂದ ಜಿಲ್ಲೆಗೆ ಬರುವ ಜನರ ತಪಾಸಣೆ ಮಾಡಿ ಒಳಗಡೆಗೆ ಬಿಡಲಾಗುತ್ತಿದ್ದು, ಜಿಲ್ಲೆಯಲ್ಲಿ ಕೋವಿಡ್ ತಪಾಸಣೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಗಡಿ ಭಾಗದ ತಾಲೂಕುಗಳಾದ ಕಮಲನಗರ, ಔರಾದ್, ಭಾಲ್ಕಿನಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸುವಂತೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ನಿರ್ದೇಶನ ನೀಡಿದ್ದಾರೆ. ವಿಶೇಷವಾಗಿ ಭಾನುವಾರವೂ ಪರೀಕ್ಷೆ ನಡೆಸುವಂತೆ ಸೂಚಿಸಿದ್ದಾರೆ.

ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಿದ ಜಿಲ್ಲಾಡಳಿತ

ಯುವಕರೆ ಜಾಸ್ತಿ ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಭಯ ಇಲ್ಲದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಬಳಸದೆ ಓಡಾಡುತ್ತಿದ್ದಾರೆ. ಕೊರೊನಾ ಸಂಕಷ್ಟದಿಂದಾಗಿ ಕೆಲಸ ಕಳೆದುಕೊಂಡು ಒಂದು ಲಕ್ಷಕ್ಕೂ ಹೆಚ್ಚು ಜನರು ಜಿಲ್ಲೆಗೆ ಆಗಮಿಸಿದ್ದಾರೆ. ಅನ್ಯ ರಾಜ್ಯದಿಂದ ಬಂದಿರುವ ಅತೀ ಹೆಚ್ಚಿನ ಜನರು ಗ್ರಾಮೀಣ ಪ್ರದೇಶದವರಾಗಿದ್ದು, ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೆ ಆಗಿದ್ದಾರೆ. ಹೀಗಾಗಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ನಗರ ಪ್ರದೇಶಕ್ಕೆ ಬಂದು ಬೇಕಾದ ವಸ್ತುಗಳನ್ನ ಖರೀದಿ ಮಾಡಿಕೊಂಡು ಮರಳಿ ತನ್ನ ಊರುಗಳಿಗೆ ಹೋಗುತ್ತಿದ್ದಾರೆ. ಕೊರೊನಾ ಯಾರಿಗೆ ಯಾವರ ರೂಪದಲ್ಲಿ ವಕ್ಕರಿಸುತ್ತದೆ ಎನ್ನುವುದರ ಅರಿವಿದ್ದರೂ ಜನರು ಈ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಮಾಸ್ಕ್ ಹಾಕಿಕೊಳ್ಳದವರಿಗೆ ಪೊಲೀಸ್ ಇಲಾಖೆಯವರು ದಂಡ ಪ್ರಯೋಗ ಮಾಡುತ್ತಿದ್ದರೂ ಅದಕ್ಕೂ ಜನರು ಕ್ಯಾರೇ ಅನ್ನುತ್ತಿಲ್ಲ. ದಂಡ ಕಟ್ಟುತ್ತಿದ್ದಾರೆಯೇ ಹೊರತು ಮಾಸ್ಕ್ ಹಾಕಿಕೊಳ್ಳುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಹೀಗಾಗಿ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ಓಡಾಡಿ ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ

ಮಹಾರಾಷ್ಟ್ರದಲ್ಲಿ ಕೊರೊನಾ ಕೇಕೆ, ಗಡಿ ಜಿಲ್ಲೆಗೆ ಕಂಟಕ.. ಬಾವನಸೌಂದತ್ತಿ ಗ್ರಾಮ ಐದು ಜನಕ್ಕೆ ಸೋಂಕು

ಭಾರತದಲ್ಲಿ 6ಕ್ಕೂ ಹೆಚ್ಚು ಕೊರೊನಾ ಲಸಿಕೆಗಳು ತಯಾರಾಗಲಿವೆ: ಆರೋಗ್ಯ ಸಚಿವ ಹರ್ಷ ವರ್ಧನ್ ಘೋಷಣೆ