ಬೆಳಗಾವಿ ಹಳ್ಳಿಗಳಲ್ಲಿ ನೈಟ್ ಕ್ರಿಕೆಟ್ ಹವಾ: ಮುಗಿಬಿದ್ದ ಜನರು
ಆಟ ನಡೆಯುವ ಕಡೆ ಸುತ್ತಲು ಫೋಕಸ್ ಲೈಟ್ ಹಾಕಿದ್ದು, ಮೈದಾನ ಹೊರಗೆ ಬ್ಯಾರಿಕೇಡ್ ಹಾಕಿ ಪೆವಿಲಿಯನ್ ಕೂಡ ನಿರ್ಮಾಣ ಮಾಡಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಪಂದ್ಯಾವಳಿಗಳನ್ನ ಆಡಿಸುತ್ತಾರೊ ಅದೇ ಮಾದರಿಯಲ್ಲಿ ಮತ್ತು ಅದೇ ನಿಯಮಗಳನ್ನು ಅನುಸರಿಸಿ ಆಟ ಆಡವಾಡುತ್ತಿದ್ದಾರೆ

ಬೆಳಗಾವಿ: ಮುಂದಿನ ತಿಂಗಳು ಮತ್ತೆ ಐಪಿಎಲ್ ಕ್ರಿಕೆಟ್ ಆರಂಭವಾಗುತ್ತಿದ್ದು, ಈ ಬಾರಿ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಇದಕ್ಕೂ ಮುನ್ನ ಹಳ್ಳಿಗಳಲ್ಲಿ ರಾತ್ರಿ ಕ್ರಿಕೆಟ್ ಹವಾ ಜೋರಾಗಿದೆ. ಕಳೆದ ಒಂದು ತಿಂಗಳಿಂದ ಇಪ್ಪತ್ತು ಕಡೆಗಳಲ್ಲಿ ರಾತ್ರಿ ಕ್ರಿಕಟ್ ಆರಂಭವಾಗಿದ್ದು, ಯುವಕರಿಗೆ ಎಲ್ಲಿಲ್ಲದ ಸಂತಸ ಉಂಟುಮಾಡಿದೆ.
ಯುವಕರ ಉತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಇಪ್ಪತ್ತು ಗ್ರಾಮಗಳಲ್ಲಿ ಜೊಲ್ಲೆ ಪ್ರೀಮಿಯರ್ ಲೀಗ್ ಎಂದು ಮಾಡಲಾಗಿದ್ದು, ಕಳೆದ ಒಂದು ತಿಂಗಳಿಂದ ಈ ಪಂದ್ಯಾವಳಿ ಆರಂಭವಾಗಿದೆ. ಪ್ರತಿಯೊಂದು ಗ್ರಾಮದಿಂದ ಎರಡರಿಂದ ಮೂರು ಟೀಮ್ಗಳು ಬಂದಿದ್ದು, ಎಲ್ಲರಿಗೂ ಇಲ್ಲಿ ಆಡಲು ಅವಕಾಶ ನೀಡಲಾಗುತ್ತಿದೆ. ಸುಮಾರು 57 ಗ್ರಾಮದ ಇಪ್ಪತ್ತು ಕಡೆಗಳಲ್ಲಿ ಈ ಪಂದ್ಯವನ್ನ ನಡೆಸಲಾಗುತ್ತಿದ್ದು, ವಾರಕ್ಕೆ ಒಂದೊಂದು ಕಡೆ ಆಟ ನಡೆಯುತ್ತದೆ. ಐಪಿಎಲ್ ಮಾದರಿಯಲ್ಲಿ ಮೈದಾನ ಸಿದ್ಧಪಡಿಸಿ ಅದಕ್ಕೆ ಬೇಕಾದ ಸಿಸ್ಟಮ್ಸ್ ಹಾಗೂ ಲೈಟಿಂಗ್ ವ್ಯವಸ್ಥೆ ಕೂಡ ಇಲ್ಲಿ ಮಾಡಲಾಗಿದೆ.
ಆಟ ನಡೆಯುವ ಕಡೆ ಸುತ್ತಲು ಫೋಕಸ್ ಲೈಟ್ ಹಾಕಿದ್ದು, ಮೈದಾನ ಹೊರಗೆ ಬ್ಯಾರಿಕೇಡ್ ಹಾಕಿ ಪೆವಿಲಿಯನ್ ಕೂಡ ನಿರ್ಮಾಣ ಮಾಡಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಪಂದ್ಯಾವಳಿಗಳನ್ನ ಆಡಿಸುತ್ತಾರೊ ಅದೇ ಮಾದರಿಯಲ್ಲಿ ಮತ್ತು ಅದೇ ನಿಯಮಗಳನ್ನು ಅನುಸರಿಸಿ ಆಟ ಆಡವಾಡುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಯುವಕರಿಗೆ ಹೊಸದೊಂದು ಉತ್ಸಾಹ ಬಂದಂತಾಗಿದೆ.

ಕ್ರಿಕೆಟ್ ನೋಡಲು ಮುಗಿಬಿದ್ದ ಜನರು

ಗೆದ್ದ ತಂಡಕ್ಕೆ ಬಹುಮಾನ ವಿತರಣೆ
ಮೂರು ವರ್ಷದಿಂದ ನಡೆಯುತ್ತಿರುವ ಪಂದ್ಯಾವಳಿ ಕೊರೊನಾ ಲಾಕ್ಡೌನ್ ಹಿನ್ನೆಲೆ ಯಾವುದೇ ಚಟುವಟಿಕೆ ಮಾಡಲು ಆಗದೇ ಯುವಕರು ಕೂಡ ಮನೆಯಲ್ಲೇ ಕುಳಿತು ಕಾಲ ಕಳೆದಿದ್ದರು. ಆದರೆ ಇದೀಗ ಕೊರೊನಾ ನಿಯಮಗಳಲ್ಲಿ ಸಡಿಲಿಕೆಯಾಗಿದ್ದು, ಮನರಂಜನೆ ನೀಡುವ ಉದ್ದೇಶವಿಟ್ಟುಕೊಂಡು ಈ ಜೊಲ್ಲೆ ಪ್ರೀಮಿಯರ್ ಲೀಗ್ ಆಯೋಜನೆ ಮಾಡಲಾಗಿದೆ. ಪೈನಲ್ನಲ್ಲಿ ಗೆದ್ದ ಟೀಮ್ಗೆ 25 ಸಾವಿರ ಬಹುಮಾನ ಕೂಡ ನೀಡಿ ಗೌರವಿಸುವ ಕೆಲಸ ಕೂಡ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದ ಈ ರೀತಿ ಕ್ರಿಕೆಟ್ ಪಂದ್ಯಾವಳಿಯನ್ನ ಮಾಡಿಕೊಂಡು ಬರಲಾಗುತ್ತಿದ್ದು, ಕೊರೊನಾ ಹಿನ್ನೆಲೆ ಕಳೆದ ವರ್ಷ ಮಾತ್ರ ಪಂದ್ಯಾವಳಿ ನಡೆದಿರಲಿಲ್ಲ. ಈ ಎಲ್ಲಾ ಪಂದ್ಯಾವಳಿಯನ್ನ ಸಚಿವೆ ಶಶಿಕಲಾ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ, ಪುತ್ರ ಬಸವಪ್ರಸಾದ್ ಜೊಲ್ಲೆ ನೋಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಪಂದ್ಯಾವಳಿಯನ್ನ ನಡೆಸಿ ಯುವಕರಿಗೆ ಉತ್ತೇಜಿಸುವ ಕೆಲಸ ಮಾಡುತ್ತೇವೆ ಎಂದು ಬಸವಪ್ರದಾಸ್ ಜೊಲ್ಲೆ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಮಾದರಿಯಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ
ರಾತ್ರಿಯಾದರೆ ಸಾಕು ಯಾವುದೇ ಸದ್ದಿಲ್ಲದೇ ನಿಶಬ್ಧವಾಗಿ ಮಾರ್ಪಾಡಾಗುತ್ತಿದ್ದ ಹಳ್ಳಿಗಳಲ್ಲಿ ಇದೀಗ ಕ್ರಿಕೆಟ್ ಜ್ವರ ಶುರುವಾದಾಗಿನಿಂದ ಮಧ್ಯರಾತ್ರಿವರೆಗೂ ಆಟ ಆಡುವುದರಲ್ಲಿ ಯುವಕರು ಬಿಜಿಯಾಗಿದ್ದಾರೆ. ರಾತ್ರಿ ಕ್ರಿಕೆಟ್ ನೋಡುವುದೇ ಒಂದು ಖುಷಿ ಅಂತಾ ಜನರು ಮುಗಿ ಬೀಳುತ್ತಿದ್ದಾರೆ.
ಇದನ್ನೂ ಓದಿ
ತಾನು ಮಹಿಳಾ ಕ್ರಿಕೆಟ್ನ ಸಚಿನ್ ತೆಂಡೂಲ್ಕರ್ ಎನ್ನುವುದನ್ನು ಸಾಬೀತು ಮಾಡಿದ ಮಿಥಾಲಿ ರಾಜ್!