ಬಿಆರ್‌ಟಿ ಸಂರಕ್ಷಿತಾರಣ್ಯದಲ್ಲಿ ಹುಲಿ ಸಂತತಿ ಹೆಚ್ಚಳಕ್ಕೆ ಸೋಲಿಗರ ಶ್ಲಾಘಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಕರ್ನಾಟಕದ ಬಿಆರ್‌ಟಿ ಹುಲಿ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಸೋಲಿಗ ಬುಡಕಟ್ಟು ಜನಾಂಗದವರ ಕೊಡುಗೆಯನ್ನು ಮೆಚ್ಚಿಕೊಂಡಿದ್ದಾರೆ. ಸೋಲಿಗರು ಹುಲಿಯನ್ನು ಪೂಜಿಸುವುದರಿಂದ ಇದು ಸಾಧ್ಯವಾಗಿದೆ. ಇದರಿಂದಾಗಿ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ.

ನವದೆಹಲಿ, ಫೆಬ್ರವರಿ 24: ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ ಹುಲಿ ಅಭಯಾರಣ್ಯದಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗಲು ಸೋಲಿಗ ಬುಡಕಟ್ಟು ಜನಾಂಗದವರ ಕೊಡುಗೆ ಗಣನೀಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ತಿಂಗಳ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಮುಂದಿನ ತಿಂಗಳ ಆರಂಭದಲ್ಲಿ ವಿಶ್ವ ವನ್ಯಜೀವಿ ದಿನವನ್ನು ಆಚರಿಸಲು ಕರೆ ನೀಡಿದ್ದಾರೆ.
‘‘ವನ್ಯಜೀವಿ ರಕ್ಷಣೆಗೆ ಸಂಬಂಧಿಸಿದ ಕೆಲಸಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ನನ್ನ ಬುಡಕಟ್ಟು ಸಹೋದರ ಸಹೋದರಿಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಕರ್ನಾಟಕದ ಬಿಆರ್‌ಟಿ ಹುಲಿ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದರ ಹಿಂದೆ ಸೋಲಿಗ ಜನಾಂಗದ ಸಹೋದರರ ಕೊಡುಗೆ ಇದೆ’’ ಎಂದು ಪ್ರಧಾನಿ ಹೇಳಿದ್ದಾರೆ.
ಹುಲಿಯ ಸಂತತಿ ಹೆಚ್ಚಳಕ್ಕೆ ಸೋಲಿಗ ಜನಾಂಗದವರ ಕೊಡುಗೆಗೆ ಮನ್ನಣೆ ಸಲ್ಲಬೇಕು. ಅವರು ಹುಲಿಯನ್ನು ಪೂಜಿಸುವ ಜನಾಂಗದವರಾಗಿದ್ದಾರೆ. ಅವರ ಕಾರಣದಿಂದಾಗಿ, ಆ ಪ್ರದೇಶದಲ್ಲಿ ಬಹುತೇಕ ಮನುಷ್ಯ-ಪ್ರಾಣಿ ಸಂಘರ್ಷವಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.
ಎಲ್ಲೆಲ್ಲಿದೆ ಸೋಲಿ ಬುಡಕಟ್ಟು ಜನಾಂಗದವರ ನೆಲೆ?
570 ಚದರ ಕಿ.ಮೀ ಅರಣ್ಯ ಪ್ರದೇಶದಲ್ಲಿ ಹರಡಿರುವ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ (BRT) ಹುಲಿ ಅಭಯಾರಣ್ಯ ಪ್ರದೇಶವು 40 ಕ್ಕೂ ಹೆಚ್ಚು ಹುಲಿಗಳು ಮತ್ತು 280 ಕ್ಕೂ ಹೆಚ್ಚು ಜಾತಿಯ ಅಪರೂಪದ ಪಕ್ಷಿಗಳಿಗೆ ನೆಲೆಯಾಗಿದೆ. ಸೋಲಿಗ ಬುಡಕಟ್ಟು ಕರ್ನಾಟಕದ ಚಾಮರಾಜನಗರದ ಬಿಳಿಗಿರಿ ರಂಗನ ಬೆಟ್ಟಗಳಲ್ಲಿ ಮತ್ತು ತಮಿಳುನಾಡಿನ ಈರೋಡ್ ಜಿಲ್ಲೆಯ ಕೆಲವು ಭಾಗಗಳಲ್ಲಿ ವಾಸಿಸುವ ಸ್ಥಳೀಯ ಬುಡಕಟ್ಟು ಜನಾಂಗವಾಗಿದೆ.
ಕಾಡು ಪ್ರಾಣಿಗಳಿಗೆ ನಮ್ಮ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಸ್ಥಾನವಿದೆ. ಅನೇಕ ಪ್ರಾಣಿಗಳನ್ನು ನಮ್ಮ ದೇವರು ಮತ್ತು ದೇವತೆಗಳ ವಾಹನಗಳಾಗಿಯೂ ಗಮನಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.
ಹುಲಿ ಕುಣಿತ ವೇಷದ ಬಗ್ಗೆಯೂ ಮೋದಿ ಮೆಚ್ಚುಗೆ
ಕರ್ನಾಟಕದ ಹುಲಿ ವೇಷ ಕುಣಿತ, ತಮಿಳುನಾಡಿನ ಪೂಲಿ ಮತ್ತು ಕೇರಳದ ಪುಲಿಕಲಿಯಂತಹ ಅನೇಕ ಸಾಂಸ್ಕೃತಿಕ ನೃತ್ಯಗಳು ನಮ್ಮಲ್ಲಿವೆ. ಇವು ಪ್ರಕೃತಿ ಮತ್ತು ವನ್ಯಜೀವಿಗಳೊಂದಿಗೆ ಸಂಬಂಧ ಹೊಂದಿವೆ. ವನ್ಯಜೀವಿ ರಕ್ಷಣೆಗೆ ಸಂಬಂಧಿಸಿದ ಕೆಲಸಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದಕ್ಕಾಗಿ ನನ್ನ ಬುಡಕಟ್ಟು ಸಹೋದರ ಸಹೋದರಿಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಬುಡಕಟ್ಟು ಜನಾಂಗದವರ ಬಗ್ಗೆ ಮೋದಿ ಮಾತು
ಮಧ್ಯ ಭಾರತದ ಅನೇಕ ಬುಡಕಟ್ಟು ಜನಾಂಗದವರು ಬಾಗೇಶ್ವರನನ್ನು ಪೂಜಿಸುತ್ತಾರೆ. ಮಹಾರಾಷ್ಟ್ರದಲ್ಲಿ ವಾಘೋಬಾನನ್ನು ಪೂಜಿಸುವ ಸಂಪ್ರದಾಯವಿದೆ. ಅಯ್ಯಪ್ಪ ಸ್ವಾಮಿಗೂ ಹುಲಿಯೊಂದಿಗೆ ಸಂಬಂಧವಿದೆ. ಹುಲಿಯ ವಾಹನವಾಗಿರುವ ಬೊನ್ಬೀಬಿಯನ್ನು ಸುಂದರಬನದಲ್ಲಿ ಪೂಜಿಸಲಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಹುಲಿ ವೇಷ ಕುಣಿತ ಹಾಡಿ ಹೊಗಳಿದ ಪ್ರಧಾನಿ ಮೋದಿ
ಏಷ್ಯಾಟಿಕ್ ಸಿಂಹ, ಹಂಗುಲ್, ಪಿಗ್ಮಿ ಹಾಗ್ ಮತ್ತು ಸಿಂಹ ಬಾಲದ ಮಕಾಕ್ ನಡುವಿನ ಹೋಲಿಕೆಯ ಬಗ್ಗೆ ಮೋದಿ ಉಲ್ಲೇಖಿಸಿದ್ದಾರೆ.
ಇವೆಲ್ಲವೂ ಜಗತ್ತಿನ ಬೇರೆಲ್ಲಿಯೂ ಕಂಡುಬರುವುದಿಲ್ಲ. ಅವು ನಮ್ಮ ದೇಶದಲ್ಲಿ ಮಾತ್ರ ಕಂಡುಬರುತ್ತವೆ. ನಿಜಕ್ಕೂ, ನಮ್ಮಲ್ಲಿ ಸಸ್ಯ ಮತ್ತು ಪ್ರಾಣಿಗಳ ಅತ್ಯಂತ ರೋಮಾಂಚಕ ಪರಿಸರ ವ್ಯವಸ್ಥೆ ಇದೆ ಎಂದು ಅವರು ಹೇಳಿದ್ದಾರೆ.