ಕರ್ನಾಟಕದಲ್ಲಿ ಮಾರಾಟವಾಗುತ್ತಿದೆ ಕಳಪೆ ಉಪ್ಪು: ಗೋಬಿ, ಕಾಟನ್ ಕ್ಯಾಂಡಿ ಆಯ್ತು ಈಗ ಉಪ್ಪಿನ ಸರದಿ

ಪಾನಿಪುರಿ, ಗೋಬಿ ಮಂಚೂರಿ, ಕಬಾಬ್ ನಿಷೇಧದ ನಂತರ ಇದೀಗ ಉಪ್ಪಿನ ಸರದಿ. ನಾವು ದಿನನಿತ್ಯ ಬಳಸುವ ಉಪ್ಪು ಕೂಡ ಸುರಕ್ಷಿತವಲ್ಲ ಎನ್ನುವ ಆಘಾತಕಾರಿ ಮಾಹಿತಿ ಈಗ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಖುದ್ದು ಆಹಾರ ಮತ್ತು ಸುರಕ್ಷತಾ ಇಲಾಖೆಯೇ ಬಹಿರಂಗಪಡಿಸಿದೆ.

ಕರ್ನಾಟಕದಲ್ಲಿ ಮಾರಾಟವಾಗುತ್ತಿದೆ ಕಳಪೆ ಉಪ್ಪು: ಗೋಬಿ, ಕಾಟನ್ ಕ್ಯಾಂಡಿ ಆಯ್ತು ಈಗ ಉಪ್ಪಿನ ಸರದಿ
ಉಪ್ಪು (ಸಾಂದರ್ಭಿಕ ಚಿತ್ರ)
Edited By:

Updated on: Dec 06, 2024 | 7:30 AM

ಬೆಂಗಳೂರು, ಡಿಸೆಂಬರ್ 6: ಉಪ್ಪಿಗಿಂತ ಬೇರೆ ರುಚಿ ಇಲ್ಲ ಎಂಬ ಮಾತಿದೆ. ಯಾವುದೇ ಅಡುಗೆ ಇರಲಿ ಉಪ್ಪಿಲ್ಲದೇ ರುಚಿಸುವುದೇ ಇಲ್ಲ. ಸಿಹಿ ತಿಂಡಿಗಳಿಗೂ ಒಂದು ಚಿಟಿಕೆ ಉಪ್ಪು ಬಿದ್ದರೇನೇ ರುಚಿ ಹೆಚ್ಚು. ಆದರೆ ಅಡುಗೆಗೆ ಬಳಸುವ ಉಪ್ಪಿನಲ್ಲಿ ಕೂಡ ಈಗ ಕಲಬೆರೆಕೆ ಆಗುತ್ತಿದೆ ಎಂಬುದು ಗೊತ್ತಾಗಿದೆ. ಈ ಆಘಾತಕಾರಿ ವಿಚಾರವನ್ನು ಖುದ್ದು ಆಹಾರ ಮತ್ತು ಸುರಕ್ಷತಾ ಇಲಾಖೆ ಬಹಿರಂಗಪಡಿಸಿದೆ.

ಆಹಾರ ಮತ್ತು ಸುರಕ್ಷತೆ ಇಲಾಖೆಯ ಗುಣಮಟ್ಟ ಸಮರ ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣ ಬಳಕೆ ನಿಷೇಧದಿಂದ ತೊಡಗಿ ಪಾನಿಪುರಿ ತನಕ ಬಂದು ನಿಂತಿದೆ. ‘ಈಟ್ ರೈಟ್’ ಎಂಬ ಅಭಿಯಾನ ಆರಂಭಿಸಿರುವ ಆಹಾರ ಮತ್ತು ಸುರಕ್ಷತಾ ಇಲಾಖೆ, ರಾಜ್ಯದಲ್ಲಿ ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷೆ ನಡೆಸುತ್ತಿದೆ. ಕಾಟನ್ ಕ್ಯಾಂಡಿಯಲ್ಲಿ ಬಳಸುವ ಕೃತಕ ಬಣ್ಣದಲ್ಲಿ ರೋಡಮೈನ್ ಬಿ ಅಂಶ ಇರುವುದು ಪತ್ತೆಯಾಗಿತ್ತು. ಇದು ಕ್ಯಾನ್ಸರ್​​​ಕಾರಕ ಎಂದು ತಿಳಿದು, ಬಣ್ಣ ಬಳಕೆಗೆ ಕಡಿವಾಣ ಹಾಕಲಾಯಿತು. ನಂತರ ಗೋಬಿ ಮಂಚೂರಿ, ಕಬಾಬ್​ಗೆ ಕೃತಕ ಬಣ್ಣ ಬಳಸಿದರೆ, 10 ಲಕ್ಷ ರೂ. ದಂಡ ವಿಧಿಸುವ ಆದೇಶವೂ ಹೊರಬಿತ್ತು. ಪಾನಿಪುರಿಗೆ ಬಳಸುವ ಪಾನಿ ಕೂಡ ಸುರಕ್ಷಿತವಲ್ಲ ಎಂಬುದು ಲ್ಯಾಬ್ ಟೆಸ್ಟ್ ವರದಿಯಲ್ಲಿ ತಿಳಿಯಿತು. ಇಲ್ಲಿಗೆ ಸಮರ ನಿಲ್ಲಿಸದ ಆಹಾರ ಮತ್ತು ಸುರಕ್ಷತಾ ಇಲಾಖೆ ಉಪ್ಪಿನ ಪರೀಕ್ಷೆಗೆ ಇಳಿಯಿತು. ಮುಖ್ಯವಾಗಿ ರಾಜಧಾನಿಯ ಹಾಸ್ಟೆಲ್ ಹಾಗೂ ಪಿಜಿಗಳಿಗೆ ಭೇಟಿ ನೀಡಿ ಉಪ್ಪಿನ ಮಾದರಿ ಪಡೆಯಲಾಯಿತು. 2,300 ಮಾದರಿಗಳ ಪರೀಕ್ಷೆಯಿಂದ ಉಪ್ಪು ಕೂಡ ಕಳಪೆ ಎಂಬ ವಿಚಾರ ಬಯಲಾಗಿದೆ.

ಉಪ್ಪಿನಲ್ಲಿ ಅಯೋಡಿನ್ ಕೊರತೆ, ಸೀಮೆಸುಣ್ಣ, ಸಿಂಥೆಟಿಕ್ ಪೊಟ್ಯಾಸಿಯಮ್ ಕ್ಲೋರೈಡ್‌ ಪತ್ತೆ

ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಉಪ್ಪಿನ ಮಾದರಿಗಳನ್ನು ಸಂಗ್ರಹಿಸಲು ಮುಂದಾದ ಆಹಾರ ಮತ್ತು ಸುರಕ್ಷತಾ ಇಲಾಖೆಗೆ, ಉಪ್ಪಿನಲ್ಲಿ ಅಯೋಡಿನ್ ಕೊರತೆ ಇರುವುದು ಲ್ಯಾಬ್ ಟೆಸ್ಟ್​ಗಳಲ್ಲಿ ಪತ್ತೆಯಾಗಿದೆ. ಅಷ್ಟೆ ಅಲ್ಲ, ಈ ಉಪ್ಪಿನಲ್ಲಿ ಸೀಮೆಸುಣ್ಣ, ಸಿಂಥೆಟಿಕ್ ಪೊಟ್ಯಾಸಿಯಮ್ ಕ್ಲೋರೈಡ್‌ನಂತಹ ರಾಸಾಯನಿಕಗಳ ಅಂಶ ಇರುವುದು ತಿಳಿದು ಬಂದಿದೆ. ಅಯೋಡಿನ್ ಮಾನವ ದೇಹಕ್ಕೆ ಅತ್ಯಂತ ಮುಖ್ಯವಾದ ಖನಿಜವಾಗಿದೆ. ಅದರ ಕೊರತೆಯು ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು. ದೇಹದಲ್ಲಿ ಅಯೋಡಿನ್ ಪ್ರಮಾಣವು ಕಡಿಮೆಯಾಗಿ ಅನೇಕ ಖಾಯಿಲೆಗಳು ಕಾಣಿಸಿಕೊಳ್ಳಬಹುದು. ಆರೋಗ್ಯವಂತ ಮಕ್ಕಳು ಅನಾರೋಗಕ್ಕೀಡಾಗಬಹುದು. ಇದೀಗ ಉಪ್ಪಿನಲ್ಲಿ ಅಯೋಡಿನ್ ಕೊರತೆ, ಇತರ ರಾಸಾಯನಿಗಳು ಇರುವುದು ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನೂ ನಿಂತಿಲ್ಲ ಔಷಧ ಸಮಸ್ಯೆ: ಬೆಂಗಳೂರಿನ ಅನೇಕ ಆಸ್ಪತ್ರೆಗಳಲ್ಲಿ ಮೆಡಿಸಿನ್ ನೋ ಸ್ಟಾಕ್

ಒಟ್ಟಿನಲ್ಲಿ ತಿನ್ನುವ ಉಪ್ಪು ಕೂಡ ಕಳಪೆ ಎಂಬುದು ಗೊತ್ತಾಗಿದ್ದು, ಅಧಿಕಾರಿಗಳನ್ನು ದಂಗು ಬಡಿಸಿದೆ. ಇದರ ಬೆನ್ನಲ್ಲೇ, ಕಳಪೆ ಆಹಾರ ವಿರುದ್ಧದ ಸಮರ ತೀವ್ರಗೊಳಿಸಲು ಇಲಾಖೆ ನಿರ್ಧರಿಸಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ