ಅಧಿಕಾರ ಹಂಚಿಕೆ ಬಿಕ್ಕಟ್ಟು: ಕಾಂಗ್ರೆಸ್​ನಲ್ಲಿ ರೂಪುಗೊಳ್ಳುತ್ತಿದೆಯಾ ಮತ್ತೊಂದು ಪವರ್ ಸೆಂಟರ್!

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಣಗಳ ನಡುವೆ ಅಧಿಕಾರ ಹಂಚಿಕೆ ಬಿಕ್ಕಟ್ಟು ಮುಂದುವರಿದಿರುವ ಮಧ್ಯೆಯೇ, ಸಚಿವ ಸತೀಶ್ ಜಾರಕಿಹೊಳಿ ಹೊಸ ಪವರ್ ಸೆಂಟರ್ ಆಗಿ ಹೊರಹೊಮ್ಮುವ ಸೂಚನೆಗಳು ಕಾಣಿಸಿವೆ. ಅವರು ಹೈಕಮಾಂಡ್ ಮಟ್ಟದಲ್ಲಿ ಪ್ರಬಲವಾಗಿ ಕಾಣಿಸಿಕೊಳ್ಳುತ್ತಿದ್ದು, ಇದು ಹೊಸ ಸಂದೇಶ ನೀಡುತ್ತಿದೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಅಧಿಕಾರ ಹಂಚಿಕೆ ಬಿಕ್ಕಟ್ಟು: ಕಾಂಗ್ರೆಸ್​ನಲ್ಲಿ ರೂಪುಗೊಳ್ಳುತ್ತಿದೆಯಾ ಮತ್ತೊಂದು ಪವರ್ ಸೆಂಟರ್!
ಕಾಂಗ್ರೆಸ್​ನಲ್ಲಿ ರೂಪುಗೊಳ್ಳುತ್ತಿದೆಯಾ ಮತ್ತೊಂದು ಪವರ್ ಸೆಂಟರ್!
Image Credit source: tv9
Edited By:

Updated on: Feb 23, 2026 | 10:54 AM

ಬೆಂಗಳೂರು, ಫೆಬ್ರವರಿ 23: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಸಿಎಂ ಸಿದ್ದರಾಮಯ್ಯ ಬಣ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಣಗಳ ನಡುವೆ ಅಧಿಕಾರ ಹಂಚಿಕೆ ಚರ್ಚೆ ಮತ್ತೆ ಜೋರಾಗಿರುವ ಸಂದರ್ಭದಲ್ಲೇ ಮತ್ತೊಂದು ಪವರ್ ಸೆಂಟರ್‌ ರೂಪುಗೊಳ್ಳುತ್ತಿದೆಯಾ ಎಂಬ ಅನುಮಾನ ಬಲವಾಗಿದೆ. ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮತ್ತೊಂದು ಪವರ್ ಸೆಂಟರ್ ರೂಪದಲ್ಲಿ ಮುನ್ನುಗ್ಗುತ್ತಿರುವ ಲಕ್ಷಣ ಕಾಣಿಸಿದೆ. ಹೈಕಮಾಂಡ್ ಮಟ್ಟದಲ್ಲೂ ಬಲ ಪ್ರದರ್ಶನ ಮಾಡಲು ಸತೀಶ್ ಜಾರಕಿಹೊಳಿ ಮುಂದಾಗಿರುವುದು ಇತ್ತೀಚಿನ ಬೆಳವಣಿಗೆಗಳಿಂದ ಸ್ಪಷ್ಟವಾಗಿದೆ.

ಅಂತಾರಾಜ್ಯ ಪ್ರವಾಸಕ್ಕೆ ಸತೀಶ್ ಜಾರಕಿಹೊಳಿ ಬೆಂಬಲಿಗರು ಸಜ್ಜು

ಆಪ್ತ ಶಾಸಕರು ಹಾಗೂ ಆಪ್ತ ಡಿಸಿಸಿ ಅಧ್ಯಕ್ಷರೊಂದಿಗೆ ದೆಹಲಿಗೆ ಎರಡು ಬಾರಿ ಭೇಟಿ ನೀಡಿರುವ ಅವರು, ಬಜೆಟ್ ಅಧಿವೇಶನದ ಆಸುಪಾಸಿನಲ್ಲಿ ಮತ್ತೊಮ್ಮೆ ದೆಹಲಿಗೆ ತೆರಳಿದ್ದಾರೆ. ಇದಲ್ಲದೆ, ಮತ್ತೊಂದು ಸುತ್ತಿನ ಅಂತಾರಾಜ್ಯ ಪ್ರವಾಸಕ್ಕೂ ಬೆಂಬಲಿಗರು ಸಜ್ಜಾಗಿದ್ದಾರೆ ಎನ್ನಲಾಗಿದೆ. ಈ ಪ್ರವಾಸಗಳ ಮೂಲಕ ಪರ್ಯಾಯ ನಾಯಕತ್ವದ ಸಂದೇಶ ರವಾನಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಕೇಳಿಬರುತ್ತಿವೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೂ ಕಣ್ಣು

ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರದಲ್ಲೂ ಸತೀಶ್ ಪ್ರಯತ್ನ ಆರಂಭಿಸಿರುವುದು ಕುತೂಹಲ ಹೆಚ್ಚಿಸಿದೆ. ಮೇ ತಿಂಗಳಲ್ಲಿ ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಲಿರುವ ಹಿನ್ನೆಲೆ, ರಾಜ್ಯ ರಾಜಕೀಯದಲ್ಲಿ ಸಹಜವಾಗಿ ಚುನಾವಣಾ ವಾತಾವರಣ ರೂಪುಗೊಳ್ಳುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಪರ್ಯಾಯ ನಾಯಕತ್ವದ ರೂಪರೇಖೆ ಸಿದ್ಧಪಡಿಸುವ ಯತ್ನವೇ ಈ ಚಟುವಟಿಕೆಗಳ ಹಿಂದೆ ಇದೆ ಎನ್ನಲಾಗುತ್ತಿದೆ.

ಇನ್ನೊಂದೆಡೆ, ನಾಯಕತ್ವ ಬದಲಾವಣೆ ಗೊಂದಲಗಳ ನಡುವೆ ಸಿಎಂ ಸಿದ್ದರಾಮಯ್ಯ ಬಜೆಟ್ ಪೂರ್ವಭಾವಿ ಸಭೆಗಳತ್ತ ಗಮನಹರಿಸಿದ್ದಾರೆ. ಸ್ವಲ್ಪ ವಿರಾಮದ ನಂತರ ಮತ್ತೆ ಮ್ಯಾರಥಾನ್‌ ಬಜೆಟ್ ಸಭೆಗಳನ್ನು ಆರಂಭಿಸಿರುವ ಅವರು, ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಆಡಳಿತ ಪಕ್ಷದ ಪರಿಶಿಷ್ಟ ಪಂಗಡ ಶಾಸಕರು ಮತ್ತು ಮುಖಂಡರು, ದಲಿತ ಸಂಘರ್ಷ ಸಮಿತಿಯ ನಾಯಕರು ಹಾಗೂ ಒಬಿಸಿ ಸಚಿವರು ಮತ್ತು ಮುಖಂಡರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ದಲಿತ ಸಿಎಂ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ: ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಬಾಣ!

ಗೃಹ ಕಚೇರಿ ಕೃಷ್ಣದಲ್ಲಿ ನಡೆಯುತ್ತಿರುವ ಈ ಸಭೆಗಳು ಮಾರ್ಚ್ 6ರಂದು ಮಂಡಿಸಲಿರುವ ಐತಿಹಾಸಿಕ ಬಜೆಟ್‌ಗೆ ಪೂರ್ವಭಾವಿ ಸಿದ್ಧತೆ ಎಂದು ತಿಳಿದುಬಂದಿದೆ. ಪಕ್ಷದ ಒಳರಾಜಕೀಯ ಚರ್ಚೆಗಳು ಒಂದೆಡೆ ನಡೆಯುತ್ತಿದ್ದರೆ, ಆಡಳಿತ ಕಾರ್ಯಚಟುವಟಿಕೆಗಳತ್ತ ಸಿಎಂ ಗಮನ ಹರಿಸಿರುವುದು ಮತ್ತೊಂದು ರಾಜಕೀಯ ಸಂದೇಶವನ್ನೇ ನೀಡುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ