ಇಂದು ಮಧ್ಯರಾತ್ರಿ ಬೆಂಗಳೂರಿಗೆ ಪ್ರಜ್ವಲ್? ಬರುತ್ತಿದ್ದಂತೆ ಬಂಧನ, ನಾಳೆ ಜಾಮೀನು ಅರ್ಜಿ ವಿಚಾರಣೆ
Prajwal Revanna; ಅತ್ಯಾಚಾರ, ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ನಿಗದಿಯಂತೆ ಇಂದು ಬೆಂಗಳೂರಿಗೆ ಬರಬೇಕಿದೆ. ಆದರೆ, ಮತ್ತೆ ಅವರು ಎಸ್ಐಟಿಗೆ ಚಳ್ಳೆಹಣ್ಣು ತಿನ್ನಿಸಲಿದ್ದಾರೆಯೇ? ಇಂಥದ್ದೊಂದು ಅನುಮಾನ ಇದೀಗ ವ್ಯಕ್ತವಾಗಿದೆ. ಇದಕ್ಕೆ ಹಲವಾರು ಕಾರಣಗಳೂ ಇವೆ. ಆ ಕಾರಣಗಳು ಇಲ್ಲಿವೆ.
ಬೆಂಗಳೂರು, ಮೇ 30: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣರ (Prajwal Revanna) 33 ದಿನಗಳ ಕಣ್ಣಾಮುಚ್ಚಾಲೆ ಆಟ ಇವತ್ತಿಗೆ ಅಂತ್ಯವಾಗುವ ಸಾಧ್ಯತೆ ಇದೆ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ಇವತ್ತು ರಾತ್ರಿ ಬೆಂಗಳೂರಿಗೆ (Bengaluru) ಬರುವ ಸಾಧ್ಯತೆ ಇದೆ. ಪ್ರಜ್ವಲ್ ರೇವಣ್ಣ ವಿಮಾನದ ಟಿಕೆಟ್ ಈಗಾಗಲೇ ಬುಕ್ ಆಗಿದೆ. ಮಧ್ಯಾಹ್ನ 3.30ಕ್ಕೆ ಲುಫ್ತಾನ್ಸಾ ಏರ್‌ಲೈನ್ಸ್‌ನ ವಿಮಾನ ಟೇಕಾಫ್ ಆಗಲಿದೆ. ಎಲ್ಲವೂ ಈ ಟಿಕೆಟ್ ಪ್ರಕಾರವೇ ನಡೆದರೆ ಇಂದು ಮಧ್ಯರಾತ್ರಿ 12 ಗಂಟೆ ನಂತರ ಪ್ರಜ್ವಲ್ ಬೆಂಗಳೂರಿಗೆ ಬಂದಿಳಿಯಬೇಕು. ಆದರೆ, ಈ ಟಿಕೆಟ್‌ನಲ್ಲಿ ಪ್ರಜ್ವಲ್ ಮೊಬೈಲ್ ನಂಬರ್ ಮತ್ತು ಇ-ಮೇಲ್ ಅಡ್ರೆಸ್ಸೇ ನಮೂದಿಸಿಲ್ಲ. ಇದು ಮತ್ತೊಂದು ಅನುಮಾನಕ್ಕೆ ಕಾರಣವಾಗಿದೆ.
ಬರುತ್ತಿದ್ದಂತೆ ಬಂಧನ ಫಿಕ್ಸ್
ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಬಂಧಿಸೋದು ಬಹುತೇಕ ಖಚಿತವಾಗಿದೆ. ಪ್ರಜ್ವಲ್ ವಿರುದ್ಧ ಅತ್ಯಾಚಾರ ಸೇರಿದಂತೆ ಒಟ್ಟು ಮೂರು ಗಂಭೀರ ಕೇಸ್‌ಗಳು ದಾಖಲಾಗಿವೆ. ಹೀಗಾಗಿ, ನಿನ್ನೆಯೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿ ತುರ್ತು ವಿಚಾರಣೆಗೆ ಪ್ರಜ್ವಲ್ ಪರ ವಕೀಲರು ಮನವಿ ಮಾಡಿದ್ದರು. ಆದರೆ, ನ್ಯಾಯಾಧೀಶರು ತುರ್ತು ವಿಚಾರಣೆಗೆ ನಿರಾಕರಿಸಿದ್ದು, ನಾಳೆ ಬೆಳಗ್ಗೆ ಜಾಮೀನು ಅರ್ಜಿ ವಿಚಾರಣೆ ನಡೆಸಲಿದ್ದಾರೆ. ಹೀಗಾಗಿ, ಇಂದು ಮಧ್ಯರಾತ್ರಿ ಪ್ರಜ್ವಲ್ ಬಂದ ತಕ್ಷಣ ಎಸ್ಐಟಿ ಅಧಿಕಾರಿಗಳು ಬಂಧಿಸಲಿದ್ದಾರೆ.
ದಾರಿ ತಪ್ಪಿಸುವ ಪ್ಲ್ಯಾನ್ ಹಾಕಿದ್ದಾರಾ ಪ್ರಜ್ವಲ್?
ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ಕುಳಿತು ಪ್ರಳಯಾಂತಕ ಆಟವನ್ನೇ ಆಡ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಬಂಧನ ಭೀತಿಯಲ್ಲಿರುವ ಪ್ರಜ್ವಲ್ ಕಳೆದ ಬಾರಿ ಫ್ಲೈಟ್ ಟಿಕೆಟ್ ಬುಕ್ ಮಾಡಿ ವಿಮಾನವನ್ನು ಏರಲೇ ಇಲ್ಲ. ಅದಕ್ಕೂ ಮುನ್ನ ಫ್ಲೈಟ್ ಟಿಕೆಟ್ ಬುಕ್ ಮಾಡಿ ರದ್ದು ಮಾಡಿದ್ದರು. ಈ ಬಾರಿಯೂ ಇಂಥದ್ದೇ ಆಟ ಆಡಿದರೂ ಅಚ್ಚರಿ ಇಲ್ಲ ಎಂಬುದು ಎಸ್ಐಟಿ ಅಧಿಕಾರಿಗಳ ಲೆಕ್ಕಾಚಾರ. ಹೀಗಾಗಿ, ಪ್ರಜ್ವಲ್ ವಿಡಿಯೋ ಕಳಿಸಿದ ಲೊಕೇಷನ್ ಪತ್ತೆ ಹಚ್ಚಿದ್ದಾರೆ. ಆದ್ರೆ, ಆ ಐಪಿ ಅಡ್ರೆಸ್ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಲೊಕೇಟ್ ಆಗಿದೆ. ಇಷ್ಟೇ ಅಲ್ಲ, ವಿಡಿಯೋ ಎರಡು ದಿನ ಮೊದಲೇ ರೆಕಾರ್ಡ್ ಮಾಡಿ ಆ ಬಳಿಕ ಬಿಡುಗಡೆ ಮಾಡಿರುವುದು ಕೂಡ ಬಯಲಾಗಿದೆ.
ಪ್ರಜ್ವಲ್ ದುಬೈನಲ್ಲಿರುವ ಮಾಹಿತಿ!
ಪ್ರಜ್ವಲ್ ನಿಜವಾಗಲೂ ಜರ್ಮನಿಯಲ್ಲೇ ಇದ್ದಾನಾ ಅನ್ನೋ ಅನುಮಾನ ಎಸ್ಐಟಿ ಅಧಿಕಾರಿಗಳಿಗೆ ಶುರುವಾಗಿದೆ. ಯಾಕೆಂದ್ರೆ ಟಿಕೆಟ್ ಬುಕ್ ಆಗಿರುವುದು ಮ್ಯೂನಿಕ್‌ನಿಂದ. ಆದರೆ, ಹಂಗೇರಿಯ ಬುಡಾಪೆಸ್ಟ್‌ನಲ್ಲಿ ವಿಡಿಯೋ ಐಪಿ ಅಡ್ರೆಸ್ ಟ್ರೇಸ್ ಆಗಿದೆ. ಈ ಎರಡೂ ಕಡೆ ಪ್ರಜ್ವಲ್ ಇಲ್ಲ. ದುಬೈನ ಅಪಾರ್ಟ್ಮೆಂಟ್ ಒಂದರಲ್ಲಿದ್ದಾರೆ ಅನ್ನೋ ಮಾಹಿತಿಯನ್ನು ಸರ್ಕಾರದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬಂಧನದಿಂದ ಪಾರಾಗಲು ಪ್ರಜ್ವಲ್ ಮಾಡಿದ್ದ ಪ್ಲಾನ್ ಫೇಲ್: ಮೇ 31 ತಾಯಿ-ಮಗನಿಗೆ ಮಹತ್ವದ ದಿನ
ಒಂದು ವೇಳೆ ಇವತ್ತು ಪ್ರಜ್ವಲ್ ಮ್ಯೂನಿಕ್ ಏರ್‌ಪೋರ್ಟ್‌ನಲ್ಲಿ ಬೋರ್ಡಿಂಗ್ ಆಗದಿದ್ರೆ, ಬೇರೆ ಸ್ಥಳದಿಂದ ಬರಬಹುದು ಅಂತಾ ಅಂದಾಜಿಸಬಹುದು. ಅಥವಾ ಮತ್ತದೇ ಹಳೇ ಕ್ಯಾನ್ಸಲ್ ಆಟವನ್ನೇ ಪ್ರಜ್ವಲ್ ಆಡಬಹುದು ಅನ್ನೋ ಚರ್ಚೆಯೂ ನಡೀತಿದೆ. ಇದಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಆಗಿರೋದು ಕೂಡ ಇಂಬು ಕೊಟ್ಟಿದೆ. ಹೀಗಾಗಿ, ಇಂದು ಮ್ಯೂನಿಕ್‌ನಿಂದ ಹೊರಡುವ ವಿಮಾನದ ಮೇಲೆ ಎಸ್ಐಟಿ ಸೇರಿದಂತೆ ಎಲ್ಲರ ಕಣ್ಣು ಬಿದ್ದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ