
ಬೆಂಗಳೂರು/ದೆಹಲಿ, ಅಕ್ಟೋಬರ್ 23: ‘ನಮ್ಮ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ. ಅವರೊಂದಿಗೆ ಬಹಳಷ್ಟು ವಿಚಾರಗಳನ್ನ ಚರ್ಚಿಸಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯರ ವಿಚಾರ ಚರ್ಚೆ ಮಾಡಿದ್ದೀವಿ. ರಾಜ್ಯದಲ್ಲಿ ಡಿಕೆ ಶಿವಕುಮಾರ್ ಸರ್ಕಾರ ಇನ್ನೂ ಸಹ ಟೇಕಾಫ್ ಆಗಿಲ್ಲ, ಯಾವ ಅಭಿವೃದ್ಧಿ ಆಗಿಲ್ಲ ಅಂತ ರಿಪೋರ್ಟ್ ಒಪ್ಪಿಸಿದ್ದೀನಿ’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ದೆಹಲಿಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಮಹತ್ವದ ಚರ್ಚೆ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆರ್.ಅಶೋಕ್, ‘ಪ್ರತಿ 3 ತಿಂಗಳಿಗೊಮ್ಮೆ ವರದಿ ಕೊಡಿ ಅಂದಿದ್ರು ಕೊಟ್ಟಿದ್ದೇನೆ. ನನ್ನ ಭೇಟಿ ಫಲಪ್ರದವಾಗಿದೆ. ಬಿಜೆಪಿ ಕಳೆದ 6 ತಿಂಗಳಲ್ಲಿ ಕಾಂಗ್ರೆಸ್ಗೆ ದೊಡ್ಡ ಹೊಡೆತ ಕೊಟ್ಟಿದೆ’ ಎಂದು ಅವರು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿರುವ ಆರ್. ಅಶೋಕ್, ‘ಸಿದ್ದರಾಮಯ್ಯರ ವಿಚಾರ ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ಏನು ಅಂತಾ ಸಿದ್ದರಾಮಯ್ಯಗೆ ಈಗ ಗೊತ್ತಾಗ್ತಿದೆ. ಮೊದಲು ಕಾಂಗ್ರೆಸ್ ಬಗ್ಗೆ ಸಿದ್ದರಾಮಯ್ಯಗೆ ಅರ್ಥ ಆಗಿರಲಿಲ್ಲ, ಬಹಳ ಲೇಟಾಗಿ ಅರ್ಥವಾಗಿದೆ. ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯನವರಿಗೆ ಜೈ ಜೈ ಅಂತಿದ್ದರು. ಆದರೆ ಈಗ ಅವರು ಊಟದಲ್ಲಿನ ಕರಿಬೇವು ಆಗಿದ್ದಾರೆ. ಊಟದಿಂದ ಕರಿಬೇವು ಎತ್ತಿ ಹಾಕುವಂತಹ ಕೆಲಸ ನಡೆದಿದೆ. ಇವೆಲ್ಲಾ ವಿಚಾರಗಳನ್ನ ಅಮಿತ್ ಶಾ ಅವರಿಗೆ ತಿಳಿಸಿದ್ದೇನೆ’ ಎಂದರು.
‘ಸಿದ್ದರಾಮಯ್ಯನವರ ಸ್ಟೈಲೇ ಬೇರೆ. ಸೈಲೆಂಟ್ ಆಗಿದ್ದಾರಂದರೆ ವೈಲೆಂಟ್ ಆಗ್ತಾರೆ ಎಂದು ಅರ್ಥ. ಅವರು ಮುಂದೆ ಕಾಂಗ್ರೆಸ್ಗೆ ಒಂದು ಗತಿ ಕಾಣಿಸ್ತಾರೆ. ಸಿಎಂ ಡಿಕೆ ಶಿವಕುಮಾರ್ ಅವರದ್ದು ಎಲ್ಲದರಲ್ಲೂ ಆಡಂಬರ ಜಾಸ್ತಿ ಆಗಿದೆ. ಡಿಕೆ ಶಿವಕುಮಾರ್ ದಸರಾಗೆ ಸುಮ್ಮನೆ ನಟ-ನಟಿಯರನ್ನ, ಅಕ್ಕಪಕ್ಕದ ರಾಜ್ಯದ ಮುಖ್ಯಮಂತ್ರಿಗಳನ್ನ ಕರೆಸಿದ್ರು. ದಸರಾಗೆ ಎಲ್ಲಾ ಸಚಿವರನ್ನೂ ಹಾಕಿ ಅಪಮಾನ ಮಾಡಿದರು’ ಎಂದು ವಾಗ್ದಾಳಿ ಮಾಡಿದ್ದಾರೆ.
ಇನ್ನು ಸಚಿವ ಯತೀಂದ್ರ ವಿಚಾರವಾಗಿ ಮಾತನಾಡಿದ ಅಶೋಕ್, ‘ಘನತೆ ಗೌರವ ಇದ್ರೆ ಡಾ.ಯತೀಂದ್ರ ರಾಜೀನಾಮೆ ಕೊಡಲಿ. ರಾಜೀನಾಮೆ ಕೊಟ್ಟರೆ ನಿಮಗೂ ಮತ್ತು ನಿಮ್ಮ ಪಕ್ಷಕ್ಕೂ ಒಳ್ಳೆಯದು. ನಾವು ಸ್ಟಿಂಗ್ ಬಗ್ಗೆ ಕಾದು ನೋಡುವ ಪ್ರಯತ್ನ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಸಾಧನೆ ಹೊಳೆಯಲ್ಲಿ ಹುಣಸೆ ತೊಳೆದಂತಾಗಿದೆ. ಇದು ರಾಜಕೀಯಕ್ಕೆ ಹೊಲಸು, ಇದನ್ನು ನಾನು ಖಂಡಿಸುತ್ತೇನೆ. ನಮ್ಮ ಪಕ್ಷ ಈ ವಿಚಾರವಾಗಿ ಒಂದು ನಿಲುವು ತೆಗೆದುಕೊಳ್ಳುತ್ತೆ. ತನಿಖಾ ವರದಿ ಬಂದ್ಮೇಲೆ ನಾವು ಹೋರಾಟ ಶುರು ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:53 pm, Fri, 23 October 26