ಸರ್ಕಾರ ಕಟ್ಟಿಸಿದ ಕೋಳಿ ಗೂಡಿನಂತಿರುವ ಮನೆಗಳಲ್ಲಿ ನೆಲೆಸಲು ಕೃಷ್ಣಾ ನದಿ ಪಾತ್ರದ ಜನರ ಹಿಂದೇಟು; ಕೋಟ್ಯಾಂತರ ರೂಪಾಯಿ ವ್ಯರ್ಥ
ಪ್ರತಿ ಬಾರಿ ಪ್ರವಾಹ ಬಂದಾಗಲೆಲ್ಲಾ ಕೃಷ್ಣಾ ನದಿ ಪಾತ್ರದ ಆ ಜನ ಸತ್ತು ಬದುಕುತ್ತಾರೆ. ಆದರೆ ಜನರನ್ನು ಬೇರೊಂದು ಸ್ಥಳಕ್ಕೆ ಸ್ಥಳಾಂತರಿಸುವ ತರಾತುರಿಯಲ್ಲಿ ಸರ್ಕಾರ ಎಡವಟ್ಟೊಂದನ್ನು ಮಾಡಿದೆ. ಇದರ ಪರಿಣಾಮವಾಗಿ ಕೋಟಿ ಕೋಟಿ ಹಣ ವ್ಯರ್ಥವಾಗುವಂತೆ ಆಗಿದೆ.
ರಾಯಚೂರು: ಪ್ರತಿವರ್ಷ ಕೃಷ್ಣ ನದಿ ಪ್ರವಾಹಕ್ಕೆ ತಾಲ್ಲೂಕಿನ ಗುರ್ಜಾಪುರ ಗ್ರಾಮ ಜಲಾವೃತಗೊಳ್ಳುತ್ತದೆ. ಗ್ರಾಮದ ಪಕ್ಕ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗಿದೆ. ಈ ಬ್ರಿಡ್ಜ್ ಅನ್ನು ರಾಯಚೂರಿನ ವಿದ್ಯುತ್ ಉತ್ಪಾದನಾ ಘಟಕಗಳಾದ ಆರ್ಟಿಪಿಎಸ್ ಹಾಗೂ ವೈಟಿಪಿಎಸ್ನಿಂದ ನಿರ್ಮಿಸಲಾಗಿದೆ. ಬೇಸಿಗೆಯಲ್ಲಿ ಈ ಶಾಖೋತ್ಪನ್ನ ಕೇಂದ್ರಗಳಿಗೆ ಹೆಚ್ಚಿನ ನೀರು ಅವಶ್ಯಕತೆ ಇರುವುದರಿಂದ ಈ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗಿದೆ. ನಾರಾಯಣಪುರ ಡ್ಯಾಂನಿಂದ ಹೊರಗೆ ಬಿಡುಗಡೆಯಾಗುವ ಕೃಷ್ಣಾ ನದಿ ನೀರನ್ನ ಇದೇ ಬ್ರಿಡ್ಜ್ ಮೂಲಕ ಹಿಡಿದಿಡಲಾಗುತ್ತದೆ. ಹೀಗೆ ಹಿನ್ನೀರಿನ ಪ್ರಮಾಣ ಹೆಚ್ಚಾಗಲಿ ಅಥವಾದ ನಾರಾಯಣಪುರ ಡ್ಯಾಂನಿಂದ ಹೆಚ್ಚುವರಿ ನೀರನ್ನ ಬಿಟ್ಟರೆ ಗುರ್ಜಾಪುರ, ಕಾಡ್ಲೂರು, ಅರಸಣಗಿ ಸೇರಿ ನಾಲ್ಕೈದು ಗ್ರಾಮಗಳು ಸಂಪೂರ್ಣವಾಗಿ ಮುಳುಗುತ್ತವೆ. ಆದರೆ ಗುರ್ಜಾಪುರ ಗ್ರಾಮ ಮಾತ್ರ ಹೆಚ್ಚಾಗಿ ಹಾನಿಗೊಳಗಾಗುತ್ತದೆ.
ಈ ಹಿಂದೆ 2009 ಹಾಗೂ 2019 ರಲ್ಲಿ ಗುರ್ಜಾಪುರ ಗ್ರಾಮ ಸಂಪೂರ್ಣವಾಗಿ ಮುಳುಗಡೆಯಾಗಿ ಇಲ್ಲಿನ ಗ್ರಾಮಸ್ಥರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದರು. ಆದೆರೆ 2009 ರಲ್ಲೇ ಭೀಕರ ಪ್ರವಾಹವಾಗಿದ್ದರಿಂದ ಸರ್ಕಾರ ಗುರ್ಜಾಪುರ ಗ್ರಾಮವನ್ನೇ ಬೇರೆಡೆ ಶಿಫ್ಟ್ ಮಾಡಲು ಮುಂದಾಗಿತ್ತು. ಗುರ್ಜಾಪುರದಿಂದ ಮೂರು ಕಿಮಿ ದೂರದ ಪ್ರದೇಶದಲ್ಲಿ ಸರ್ಕಾರ ಕೋಟಿ-ಕೋಟಿ ಖರ್ಚು ಮಾಡಿ ಸುಮಾರು 80-100 ಮನೆಗಳ ನಿರ್ಮಿಸಿತ್ತು. ಆದರೆ ಅಂದು ಮನೆಗಳ ಸ್ಥಿತಿ ನೋಡಿ ಜನ ಮೂಗು ಮುರಿಯಲು ಆರಂಭಿಸಿದ್ದರು.
ಕಟ್ಟಡಕ್ಕೆ ಸರಿಯಾಗಿ ಕ್ಯೂರಿಂಗ್ ಆಗಿರಲಿಲ್ಲ. ಕೋಳಿ ಗೂಡಿನಂತಿರುವ ಮನೆಗಳನ್ನ ಸರ್ಕಾರ ನಿರ್ಮಿಸಿ ನೆಲೆಸಲು ಸೂಚಿಸಿದ್ದನ್ನ ಗುರ್ಜಾಪುರ ಗ್ರಾಮಸ್ಥರು ಖಂಡಿಸಿದ್ದರು. ನೀರಿನ ವ್ಯವಸ್ಥೆ ಸೇರಿ ಮೂಲಭೂತ ಸೌಕರ್ಯಗಳೇ ಅಲ್ಲಿಲ್ಲ ಅಂತ ಹೊಸ ಮನೆಗಳಿಗೆ ಇಲ್ಲಿನ ಜನ ಶಿಫ್ಟ್ ಆಗಿರಲಿಲ್ಲ. ಆದರೆ ಈಗ ಗ್ರಾಮಸ್ಥರು ಹೇಳಿದಂತೇ ಕೇವಲ 20 ವರ್ಷಗಳಲ್ಲಿ ಆ ಕಟ್ಟಡಗಳು ಎಲ್ಲೆಂದರಲ್ಲಿ ಕುಸಿಯುತ್ತಿವೆ. ಮೇಲ್ಚಾವಣಿಯಂತು ಸಣ್ಣ ಮಳೆಯಾದರೂ ಸೋರಲು ಆರಂಭವಾಗುತ್ತದೆ. ಇಂಥಹ ಮನೆಗಳಿಗೆ ಹೋಗಲು ಆಗ ಹಿಂದೇಟು ಹಾಕಿದ್ದೇ ಒಳ್ಳೆಯದ್ದಾಯ್ತು, ಇಲ್ಲದಿದ್ದರೆ ಮನೆಗಳು ಕುಸಿದು ಅನಾಹಯತ ಆಗಲುಬಹುದಿತ್ತು ಎಂದು ಜನರು ಹೇಳಿಕೊಳ್ಳಿತ್ತಿದ್ದಾರೆ. ಅಲ್ಲದೆ ಸಚಿವ ಶ್ರೀರಾಮುಲು, ಸ್ಥಳೀಯ ಶಾಸಕರು ಬಂದು ವಾಪಸ್ ಹೋಗಿದ್ದಾರೆ. ಆದರೆ ಈವರಗೆ ಯಾವ ಕೆಲಸನೂ ಮಾಡಿಸಿ ಕೊಡಲಿಲ್ಲ ಎಂದು ಗುರ್ಜಾಪುರ ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.
ಜನರು ನೆಲೆಸಲು ಯೋಗ್ಯವಲ್ಲದ ರೀತಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿ ಸರ್ಕಾರ ಕೋಟಿ-ಕೋಟಿ ಹಣವಮ್ನ ವ್ಯರ್ಥ ಮಾಡಿದೆ. ಸದ್ಯ ಈ ಮನೆಗಳಲ್ಲಿ ಹಾಗೂ ಸುತ್ತಲಿನ ಗಿಡ ಗಂಟೆಗಳು ಬೆಳೆದಿದ್ದು, ಥೇಟ್ ಸ್ಮಶಾನದ ಸ್ಥಿತಿಯಂತಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಇಲ್ಲಿನ ಗ್ರಾಮಸ್ಥರನ್ನು ಸುಸಜ್ಜಿತವಾದ ಜಾಗಕ್ಕೆ ಸ್ಥಳಕ್ಕೆ ಸ್ಥಳಾಂತರಿಸಬೇಕಿದೆ.
ವರದಿ: ಭೀಮೇಶ್ ಪೂಜಾರ್, ಟಿವಿ9 ರಾಯಚೂರು
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:54 am, Mon, 31 October 22