ರಾಯಚೂರಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಭಿಕ್ಷಾಟನೆಗೆ ಬ್ರೇಕ್; ಬದುಕಲು ಬಿಡಿ ಎಂದು ಮನವಿ ಮಾಡಿದ ಸಮುದಾಯ!
ಲೈಂಗಿಕ ಅಲ್ಪಸಂಖ್ಯಾತರು ಅಂದರೆ, ಸಮಾಜದಿಂದ ದೂರವಿರುವವರು. ಬದುಕು ಕಟ್ಟಿಕೊಳ್ಳೋಕು ಹೆಣಗಾಡಬೇಕಿರುವ ಸ್ಥಿತಿ ಹೊಂದಿದ ಈ ಸಮುದಾಯಕ್ಕೆ ಭಿಕ್ಷಾಟನೆಯೇ ಹೊಟ್ಟೆ ತುಂಬಿಸುತ್ತಿದೆ. ಆದ್ರೆ, ಈ ಸಮುದಾಯದ ಮೇಲೆ ಸುಳ್ಳು ಆರೋಪ ಹೊರಿಸಿ ಭಿಕ್ಷಾಟನೆ ಬಂದ್ ಮಾಡಿರುವುದುಕ್ಕೆ ಆ ಸಮುದಾಯದವರೆಲ್ಲ ಈಗ ಕಂಗೆಟ್ಟಿದ್ದಾರೆ.
ರಾಯಚೂರು, ಅ.04: ಲೈಂಗಿಕ ಅಲ್ಪಸಂಖ್ಯಾತ ಸಮುದಾಯ(A Sexual Minority Community) ಇಡೀ ಸಮಾಜದಿಂದ ತಳ್ಳಲ್ಪಟ್ಟಿದೆ. ಮಂಗಳಮುಖಿ ಸಮುದಾಯವನ್ನು ಸಾರ್ವಜನಿಕರು ಬಿಲ್ ಕುಲ್ ಒಪ್ಪಿಕೊಳ್ಳಲ್ಲ. ಹೀಗಾಗಿಯೇ ಈ ಸಮುದಾಯ ಬದುಕು ಕಟ್ಟಿಕೊಳ್ಳಲು ಪರಿತಪಿಸುತ್ತಿರುತ್ತದೆ. ಇನ್ನು ಇವರಿಗೆ ಸದ್ಯ ಹೊಟ್ಟೆ ತುಂಬಿಸುತ್ತಿರುವುದು ಭಿಕ್ಷಾಟನೆ. ಆದ್ರೆ, ಇದೀಗ ಬಿಸಿಲುನಾಡು ರಾಯಚೂರಿ(Raichur)ನಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಭಿಕ್ಷಾಟನೆಗೆ ಸಮಾಜ ಕಲ್ಯಾಣ ಇಲಾಖೆ ಬ್ರೇಕ್ ಹಾಕಿರುವ ಆರೋಪ ಕೇಳಿ ಬಂದಿದೆ.
ಹೌದು, ಇತ್ತೀಚೆಗೆ ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಈ ಸಮುದಾಯದ ಕೆಲವರನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪೊಲೀಸರ ಸಹಾಯದೊಂದಿಗೆ ಕರೆದೊಯ್ದಿದ್ದ ಆರೋಪ ಕೇಳಿಬಂದಿದೆ. ನಾವು ಬಲವಂತವಾಗಿ, ದೌರ್ಜನ್ಯದಿಂದ ಭಿಕ್ಷಾಟನೆ ಮಾಡುತ್ತಿಲ್ಲ. ಆದ್ರೆ, ಭಿಕ್ಷಾಟನೆಗೆ ಅವಕಾಶ ಕೊಡದೇ ಸಮುದಾಯದವರನ್ನ ಕರೆದೊಯ್ಯಲಾಗಿದ್ದು, ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಈ ಸಮುದಾಯದ ಪ್ರಮುಖರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ:ರಾಯಚೂರಿನಲ್ಲಿ ಮಂಗಳಮುಖಿ ಸಮುದಾಯದಿಂದ ಪ್ರಜಾಪ್ರಭುತ್ವ ದಿನಾಚರಣೆ; ಇಲ್ಲಿದೆ ವಿಡಿಯೋ
ಇತ್ತ ಈ ಸಮುದಾಯದವರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸರ್ಕಾರ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕ ಶೇಕಡಾ 1 ರಷ್ಟು ಮೀಸಲಾತಿ ನೀಡಿದೆ. ಆದ್ರೆ, ಓದಿದವ್ರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ. ಉಳಿದವರು ಅನಕ್ಷರಸ್ಥರೇ ಹೆಚ್ಚು, ಹೀಗಾಗಿ ಈ ಸಮುದಾಯದ ಕೆಲವರು ವಿವಿಧ ಸಂಘ-ಸಂಸ್ಥೆಗಳಿಗೆ ಸಹಾಯ ಧನ ಪಡೆದು ವಿವಿಧ ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ. ಆದ್ರೆ, ಬಹುತೇಕರು ಹೊಟ್ಟೆ ಪಾಡಿಗೆ ಭಿಕ್ಷಾಟನೆ ಮಾಡೋ ಅನಿವಾರ್ಯತೆ ಇದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯಿಂದ 30 ಸಾವಿರ ಧನಸಹಾಯ ಮಾಡಲಾಗುತ್ತೆ. ಇಷ್ಟು ಕಡಿಮೆ ಹಣದಲ್ಲಿ ಉದ್ಯೋಗ ಸೃಷ್ಟಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ತಮ್ಮ ಸಮುದಾಯಕ್ಕೆ ಪ್ರತ್ಯೇಕ ಯೋಜನೆ ಮೂಲಕ ಸಾಲ ಸೌಲಭ್ಯ ನೀಡಬೇಕು ಎಂದು ಲೈಂಗಿಕ ಅಲ್ಪ ಸಂಖ್ಯಾತ ಸಮುದಾಯ ಮನವಿ ಮಾಡುತ್ತಿದೆ.
ಅದೇನೆ ಇರಲಿ ಕೆಲವರು ಮಾಡೋ ತಪ್ಪುಗಳನ್ನ, ಸಮುದಾಯ ಪ್ರಮುಖರಿಗೆ ತಿಳಿಸಿ ಮನವರಿಕೆ ಮಾಡಿಕೊಡಬೇಕಿದೆ. ಇಲ್ಲದಿದ್ರೆ ಯಾರೋ ಮಾಡುವ ತಪ್ಪುಗಳಿಂದ ಇಡೀ ಸಮುದಾಯಕ್ಕೆ ಕಪ್ಪು ಚುಕ್ಕೆಯಾಗುತ್ತದೆ. ಭಿಕ್ಷಾಟನೆಯನ್ನೇ ನಂಬಿಕೊಂಡಿರುವ ಈ ಸಮುದಾಯಕ್ಕೆ ಸರ್ಕಾರ ವಿವಿಧ ಹೊಸ ಯೋಜನೆಗಳ ಮೂಲಕ ಬದುಕು ಕಟ್ಟಿಕೊಡುವ ಕೆಲಸ ಮಾಡಿಕೊಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ