
ರಾಯಚೂರು, ನವೆಂಬರ್ 01: ರಾಜ್ಯದಲ್ಲಿ ಇಂದು ಎರಡು ಭೀಕರ ದುರಂತಗಳು ಸಂಭವಿಸಿದ್ದು, ಸಾರ್ವಜನಿಕರನ್ನು ಕಂಗೆಡಿಸಿವೆ. ರಾಯಚೂರಿನಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬೆಳಕಿಗೆ ಬಂದಿದ್ದರೆ, ಗೋಕರ್ಣದ ಕಡಲತೀರದಲ್ಲಿ ಈಜಲು ತೆರಳಿದ್ದ ಪ್ರವಾಸಿಗರ ಪೈಕಿ ಇಬ್ಬರು ಸಮುದ್ರದ ಅಲೆಗೆ ಬಲಿಯಾಗಿದ್ದು, ಮತ್ತೊಬ್ಬ ಯುವಕ ನಾಪತ್ತೆಯಾಗಿದ್ದಾನೆ.
ರಾಯಚೂರಿನ ಜಲಾಲನಗರದಲ್ಲಿ ನಡೆದಿರುವ ಒಂದೇ ಕುಟುಂಬದ ನಾಲ್ವರ ಸಾವು ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಪತಿಯೇ ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ತಾನೂ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅರುಣಾಂಗ್ಷು ಗಿರಿ ಮಾಹಿತಿ ನೀಡಿದ್ದಾರೆ.
ವಿಷ್ಣು (45) ಅವರಿಗೆ ವೈಯಕ್ತಿಕ ಬ್ಯುಸಿನೆಸ್‌ನಲ್ಲಿ ಭಾರಿ ನಷ್ಟ ಉಂಟಾಗಿತ್ತು. ಇದೇ ಕಾರಣಕ್ಕೆ ನಿನ್ನೆ ರಾತ್ರಿ ಮನೆಯವರು ಮಲಗಿದ್ದಾಗ ಪತ್ನಿ ಅರುಣಾ (36), ಮಗ ಶ್ಲೋಕ (10) ಹಾಗೂ ಮಗಳು ಖುಷಿ (7) ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಚಿಕ್ಕಸುಗೂರು ಗ್ರಾಮದ ಬಳಿ ತೆರಳಿ ರೈಲ್ವೆ ಹಳಿಗೆ ಬಿದ್ದು ವಿಷ್ಣು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ವಿಷ್ಣು ಅವರ ಹಿರಿಯ ಮಗ ಸುಹಾಸ್ ಪ್ರಾಣಾಪಾಯದಿಂದ ಪಾರಾಗಿದ್ದು, ಆತ ಹೇಗೆ ಬದುಕುಳಿದ ಎಂಬ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದೆಡೆ, ಬೆಂಗಳೂರಿನ ಬೆಳ್ಳಂದೂರಿನ ಆಲೋರಿಕಾ ಇಕೋಸ್ಪೇಸ್ ಕಂಪನಿಯ 16 ಉದ್ಯೋಗಿಗಳ ತಂಡ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣಕ್ಕೆ ಪ್ರವಾಸ ಬಂದಿತ್ತು. ದುಬ್ಬಣಶಶಿ ಬೀಚ್‌ನ ಕೋಜೆ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಈ ತಂಡ ಸಮುದ್ರಕ್ಕೆ ಇಳಿದಾಗ ಭಾರಿ ದುರಂತ ಸಂಭವಿಸಿದೆ. ಸಮುದ್ರದಲ್ಲಿ ಈಜುತ್ತಿದ್ದಾಗ ಭಾರಿ ಅಲೆಗೆ ಸಿಲುಕಿ ಐವರು ಕೊಚ್ಚಿ ಹೋಗಿದ್ದಾರೆ. ತಕ್ಷಣ ರಕ್ಷಣೆಗೆ ಧಾವಿಸಿದ ಜೀವರಕ್ಷಕ ಸಿಬ್ಬಂದಿ ಹಾಗೂ ಮೀನುಗಾರರು ನಾಲ್ವರನ್ನು ದಡಕ್ಕೆ ತಂದಿದ್ದಾರೆ.
ದಡಕ್ಕೆ ತಂದವರ ಪೈಕಿ ಜಾರ್ಖಂಡ್ ಮೂಲದ ಶೋಭಾ ದಾಸ್ (22) ಹಾಗೂ ಬೆಂಗಳೂರಿನ ಮಹಮದ್ ಅಕ್ರಮ್ ಮೃತಪಟ್ಟಿದ್ದಾರೆ. ಬೆಂಗಳೂರಿನ ವಿಶ್ವ ಎ.ಕೆ (24) ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಉಳಿದ ಇಬ್ಬರಾದ ನಿಶಾಂತ್ ಡಿ.ವಿ ಮತ್ತು ಮಹಮದ್ ಖಾಸಿಂ ಚೇತರಿಸಿಕೊಳ್ಳುತ್ತಿದ್ದಾರೆ. ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ