ಬೂದಿ ಮುಚ್ಚಿದ ಕೆಂಡವಾದ ರಾಯರ ಜಪದ ಕಟ್ಟೆ ವಿವಾದ: ಅರ್ಚಕರ ಕುಟುಂಬದಿಂದ ಕಾನೂನು ಹೋರಾಟದ ಚಿಂತನೆ

ರಾಯಚೂರಿನ ಬಿಚ್ಚಾಲಿ ಗ್ರಾಮದಲ್ಲಿರುವ ಮಂತ್ರಾಲಯ ರಾಯರ ಜಪದ ಕಟ್ಟೆ ಸಮೀಪದ ಭೂ ವಿವಾದ ಸದ್ಯ ಬೂದಿ ಮುಚ್ಚಿದ ಕೆಂಡವಾಗಿದೆ. ವ್ಯಾಪಕ ವಿರೋಧ, ಹೈಡ್ರಾಮಾ ಮಧ್ಯೆ ಜಿಲ್ಲಾಡಳಿತ ವಿವಾದಿತ ಜಮೀನು ಸರ್ವೆ ಕಾರ್ಯ ಮಾಡಿ ಮುಗಿಸಿದೆ. ಸರ್ಕಾರ ಮಠಕ್ಕೆ ಜಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ, ಹೈಕೋರ್ಟ್ ಆದೇಶ ವಜಾಗೊಂಡಿದ್ದರೂ, ಅರ್ಚಕರ ಕುಟುಂಬ ಕಾನೂನು ಹೋರಾಟಕ್ಕೆ ಸಜ್ಜಾಗಿದೆ. ಸದ್ಯ ಪರಿಸ್ಥಿತಿ ಉದ್ವಿಗ್ನವಾಗಿದೆ.

ಬೂದಿ ಮುಚ್ಚಿದ ಕೆಂಡವಾದ ರಾಯರ ಜಪದ ಕಟ್ಟೆ ವಿವಾದ: ಅರ್ಚಕರ ಕುಟುಂಬದಿಂದ ಕಾನೂನು ಹೋರಾಟದ ಚಿಂತನೆ
ರಾಯರ ಜಪದ ಕಟ್ಟೆ ವಿವಾದ
Image Credit source: tv9 kannada
Edited By:

Updated on: Apr 14, 2026 | 7:45 PM

ರಾಯಚೂರು, ಏಪ್ರಿಲ್​ 14: ಮಂತ್ರಾಲಯ ರಾಯರು (Mantralaya Rayaru) ತಪಸ್ಸು ಮಾಡಿದ್ದ ಜಪದ ಕಟ್ಟೆ ಬಳಿಯ ಜಮೀನು ವಿವಾದ ಬೂದಿ ಮುಚ್ಚಿದ ಕೆಂಡದಂತಿದೆ. ವ್ಯಾಪಕ ವಿರೋಧದ ಮಧ್ಯೆಯೂ ಜಿಲ್ಲಾಡಳಿತ ಸರ್ವೆ ಕಾರ್ಯ ಮುಗಿಸಿದೆ. ತಳ್ಳಾಟ, ನೂಕಾಟದ ಮಧ್ಯೆ ಭಾರೀ ಹೈಡ್ರಾಮಾಗೆ ಸಾಕ್ಷಿಯಾಗಿದ್ದ ವಿವಾದ ಸಂಬಂಧ ಹೈಕೋರ್ಟ್​ ಆದೇಶ ಪ್ರಶ್ನಿಸಿ, ಅರ್ಚಕರ ಕುಟುಂಬ ಕಾನೂನು ಹೋರಾಟಕ್ಕೆ ಸಜ್ಜಾಗಿದೆ.

ಭಕ್ತರ ಆರಾಧ್ಯ ದೈವ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ತಪಸ್ಸು ಮಾಡಿರುವ ಜಪದ ಕಟ್ಟೆ ಸಮೀಪದ ಜಮೀನು ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ವಿವಾದ ಯಾವಾಗ ಬೇಕಾದರೂ ಮತ್ತೆ ಹೊಗೆಯಾಡುವ ಸಾಧ್ಯತೆ ಇದೆ. ರಾಯಚೂರು ತಾಲ್ಲೂಕಿನ ಬಿಚ್ಚಾಲಿ ಗ್ರಾಮದಲ್ಲಿ ರಾಯರ ಜಪದ ಕಟ್ಟೆ ಇದೆ. ಇದೇ ಜಪದ ಕಟ್ಟೆ ಪಕ್ಕದಲ್ಲೇ ತುಂಗಭದ್ರಾ ನದಿ ಕೂಡ ಹರಿಯುತ್ತೆ. ಬಿಚ್ಚಾಲಿ ಮೂಲದ ರಾಯರ ಶಿಷ್ಯ ಅಪ್ಪಣ್ಣಾಚಾರ್ಯರ ಜೊತೆ ರಾಯರು ಇದೇ ಜಪದ ಕಟ್ಟೆ ಸ್ಥಳದಲ್ಲಿ 13 ವರ್ಷ ತಪಸ್ಸು ಮಾಡಿದ್ರಂತೆ.

ಇದನ್ನೂ ಓದಿ: ಭುಗಿಲೆದ್ದ ಮಂತ್ರಾಲಯ ರಾಯರ ಜಪದ ಕಟ್ಟೆ ವಿವಾದ: ಸರ್ವೆ ವೇಳೆ ಹೈಡ್ರಾಮಾ, ರೈತರು ಪೊಲೀಸ್ ವಶಕ್ಕೆ

ಆ ಬಳಿಕ ನದಿ ದಾಟಿ ರಾಯರು ಮಂತ್ರಾಲಯಕ್ಕೆ ಹೋಗಿ ವೃಂದಾವನಸ್ಥರಾದರು. ಆ ಬಳಿಕ ರಾಯರು ಜ್ಯೋತಿ ರೂಪದಲ್ಲಿ ಅಪ್ಪಣ್ಣಾಚಾರ್ಯರಿಗೆ ದರ್ಶನ ನೀಡಿ, ನೀನು ನಿತ್ಯ ಮಂತ್ರಾಲಯಕ್ಕೆ ಬರಬೇಡ. ನಾನು ತಪಸ್ಸು ಮಾಡಿದ ಸ್ಥಳದಲ್ಲೇ ಬೃಂದಾವನ ನಿರ್ಮಿಸಿ ಅಲ್ಲೇ ಪೂಜೆ ಮಾಡು ಅಂತ ಹೇಳಿದ್ರಂತೆ. ಹಾಗಾಗಿ ಅದೇ ಸ್ಥಳದಲ್ಲಿ ರಾಯರ ಏಕಶಿಲಾ ಬೃಂದಾವನವನ್ನ ಅಪ್ಪಣ್ಣಾಚಾರ್ಯರು ನಿರ್ಮಿಸಿದ್ದರು. ಅದೇ ಅಪ್ಪಣ್ಣಾಚಾರ್ಯರ ವಂಶಸ್ಥರೇ ಇಲ್ಲಿ ಈಗ ಅರ್ಚಕರಾಗಿದ್ದಾರೆ.

ಜಪದ ಕಟ್ಟೆ ಪಕ್ಕದಲ್ಲಿರುವ ಸರ್ವೆ ನಂಬರ್ 35ರಲ್ಲಿ 1.2 ಎಕರೆ ಹಾಗೂ ಸರ್ವೆ ನಂಬರ್ 37ರಲ್ಲಿ 1.31 ಎಕರೆ ಸೇರಿ ಒಟ್ಟು 2 ಎಕರೆ 33 ಗುಂಟೆ ಜಮೀನನ್ನ ರಾಜ್ಯ ಸರ್ಕಾರ, ರಾಘವೇಂದ್ರ ಮಠ ನಂಜನಗೂಡು ಹಾಗೂ ಮಂತ್ರಾಲಯ ಕ್ಯಾಂಪ್ ಮಠಕ್ಕೆ ಮಂಜೂರು ಮಾಡಿ‌ ಆದೇಶಿಸಿತ್ತು. ರಾಘವೇಂದ್ರ ಸ್ವಾಮಿ ಚಾರಿತ್ರಿಕ ಸ್ಥಳಗಳನ್ನ ಅಭಿವೃದ್ಧಿ ಪಡಿಸಿ, ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನಾಗಿ ಅಭಿವೃದ್ಧಿ ಪಡೆಸುವ ಉದ್ದೇಶಕ್ಕೆ ಮಂಜೂರು ಮಾಡಲಾಗಿತ್ತು. ಆದರೆ ಸರ್ಕಾರದ ಆದೇಶವನ್ನ ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಅರ್ಚಕರ ಕುಟುಂಬಸ್ಥರಾದ ಪಾಡದ ರಾಘವೇಂದ್ರ ಆಚಾರ್ಯ ಹಾಗೂ ಇತರರು ರಿಟ್ ಅರ್ಜಿ ಹಾಕಿದ್ದರು.

ವಿರೋಧದ ಮಧ್ಯೆ ಸರ್ವೆ ಕಾರ್ಯ ಅಂತ್ಯ

ಕಳೆದ ವಾರ ರಿಟ್ ಅರ್ಜಿ ವಜಾ ಆದ ಹಿನ್ನೆಲೆ ನಿನ್ನೆ ಅಧಿಕಾರಿಗಳ ತಂಡ ಸೂಕ್ತ ಬಿಗಿ ಭದ್ರತೆಯಲ್ಲಿ ಜಮೀನಿನ ಗಡಿ ಗುರುತಿಸಿ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆಸಿದ್ದರು. ಆಗಲೇ ದೊಡ್ಡ ಹೈಡ್ರಾಮಾ ಕೂಡ ನಡೆದಿತ್ತು. ಸರ್ವೆ ಮಾಡಲು ಬಿಡಲ್ಲ ಅಂತ ಕೆಲ ಸಾಗುವಳಿದಾರರು ಕಿಡಿಕಾರಿದ್ದರು. ಆಗ ತಳ್ಳಾಟ, ನೂಕಾಟವಾಗಿ ರಂಪಾಟ ನಡೆದುಹೋಗಿದೆ. ಇದೇ ಕಾರಣಕ್ಕೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕೆಲವರನ್ನ ವಶಕ್ಕೂ ಪಡೆದಿದ್ದರು. ಸದ್ಯ ವಿರೋಧದ ಮಧ್ಯೆಯೂ ಸರ್ವೆ ಕಾರ್ಯ ಮುಗಿದಿದೆ.

ಇದನ್ನೂ ಓದಿ: ಮಂತ್ರಾಲಯದ ಕರ್ನಾಟಕ ಅತಿಥಿ ಗೃಹದಲ್ಲಿ ಭ್ರಷ್ಟಾಚಾರದ ಹೊಗೆ: ಅಸ್ವಚ್ಛತೆ, ದುರಾಡಳಿತ ವಿರುದ್ಧ ಉಪಲೋಕಾಯುಕ್ತರ ಗರಂ!

ಸರ್ವೆ ಕಾರ್ಯ ಮುಗಿಸಿ, ಪಂಚನಾಮೆ ಮಾಡಲಾಗಿದೆ. ಆದರೆ ಪಂಚನಾಮೆ ವೇಳೆ ಅರ್ಚಕರ ಕುಟುಂಬ ಸಹಿ ಹಾಕಲು ನಿರಾಕರಿಸಿ, ವಾಗ್ವಾದಕ್ಕೆ ಕಾರಣವಾಯ್ತು. ಕೂಡಲೇ ಸರ್ವೆಗೆ ಒಳಪಟ್ಟ ಕಟ್ಟಡಗಳನ್ನ ಖಾಲಿ ಮಾಡಲು ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ. ನೋಟಿಸ್ ನೀಡಿ ಅತಿಕ್ರಮಣ ಸ್ಥಳ ತೆರುವುಗೊಳಿಸಲು ಅಧಿಕಾರಿಗಳ ತಂಡ ಸಿದ್ಧತೆ ನಡೆಸಿದೆ.

ಮಂತ್ರಾಲಯ ಮಠದ ವಿರುದ್ಧ ಅರ್ಚಕರ ಕುಟುಂಬ ಕಿಡಿ: ಕಾನೂನು ಹೋರಾಟಕ್ಕೆ ಸಜ್ಜ

ಇತ್ತ ಇಷ್ಟಕ್ಕೆ ಸುಮ್ಮನಾಗದ ಜಪದ ಕಟ್ಟೆ ಅರ್ಚಕರ ಕುಟುಂಬ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದೆ. ನಾವು ಮಂತ್ರಾಲಯ ರಾಯರ ಭಕ್ತರು. ಆದರೆ ಮಠದ ಆಡಳಿತದವರು ಹೀಗೆ ಮಾಡೋದು ಎಷ್ಟು ಸರಿ ಅಂತ ಮಂತ್ರಾಲಯ ಮಠದ ವಿರುದ್ಧ ಕಿಡಿಕಾರಿದ್ದಾರೆ. ಈ ಹಿಂದೆ ಮಂತ್ರಾಲಯದಲ್ಲಿ ಮೂಲ ರಾಮದೇವರ ವಿಗ್ರಹ ಕಳೆದು ಹೋದಾಗ, ನಮ್ಮ ಹಿರಿಯರು ಅದನ್ನ ಹುಡುಕಿ ಕೊಟ್ಟಿದ್ದರು. ಆಗ ಇದೇ ಶ್ರೀಮಠದವರು ನಮ್ಮ ಕುಟುಂಬ ಬಾಡಿ ಹೋಗಬಾರ್ದು ಅಂತ ಬಾಡದ ಕುಟುಂಬ ಅಂತ ತಾಮ್ರದ ಪತ್ರದ ಮೂಲಕ ಬಿರುದು ಕೊಟ್ಟಿದ್ದಾರೆ. ಅದಕ್ಕೆ ಸಾಕ್ಷ ಇದೆ. ಆದರೆ ಈ ರೀತಿ ನಮ್ಮ ಕುಟುಂಬಕ್ಕೆ ಮಾಡೋದು ಸರಿಯಲ್ಲ ಅಂತ ಅರ್ಚಕರಾದ ಪವನ್ ಆಚಾರ್ಯ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಹೈಕೋರ್ಟ್ ಆದೇಶ ಪ್ರಶ್ನಿಸಿ ಕಾನೂನು ಹೋರಾಟಕ್ಕೆ ಜಪದ ಕಟ್ಟೆ ಅರ್ಚಕರ ಕಡೆಯವರು ಸಜ್ಜಾಗಿದ್ದಾರೆ.

ಸದ್ಯ ಭೂ ವಿವಾದ ಬೂದಿ ಮುಚ್ಚಿದ ಕೆಂಡವಾಗಿದ್ದು, ಇದು ಯಾವಾಗ ಬೇಕಾದ್ರೂ ಮತ್ತೆ ಕಿಡಿಹೊತ್ತುವ ಸಾಧ್ಯತೆ ಇದೆ. ಇತ್ತ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು ತೀವ್ರ ನಿಗಾವಹಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us