ರಾಯಚೂರು: ನರೇಗಾ ಕಾಮಗಾರಿಗಳಲ್ಲಿ 100 ಕೋಟಿಗೂ ಅಧಿಕ ಅವ್ಯವಹಾರ, ನಾಲ್ವರು ಪಿಡಿಓಗಳು ಅಮಾನತು
ದೇವದುರ್ಗ ತಾಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕಾಮಗಾರಿಗಳಲ್ಲಿ 100 ಕೋಟಿಗೂ ಅಧಿಕ ಹಣ ಭ್ರಷ್ಟಾಚಾರ ಪ್ರಕರಣ ಸಂಬಂಧ ದೇವದುರ್ಗ ತಾಲೂಕಿನ ನಾಲ್ವರು ಪಿಡಿಓಗಳನ್ನು ಅಮಾನತು ಮಾಡಲಾಗಿದೆ. ಇಲಾಖಾ ತನಿಖೆ, ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿ ರಾಯಚೂರು ಜಿಲ್ಲಾ.ಪಂ ಸಿಇಓ ಪಾಂಡ್ವೆ ರಾಹುಲ್ ತುಕಾರಾಮ್ ಆದೇಶ ಹೊರಡಿಸಿದ್ದಾರೆ.
ರಾಯಚೂರು, ಡಿ.11: ದೇವದುರ್ಗ ತಾಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕಾಮಗಾರಿಗಳಲ್ಲಿ (NREGA Yojana) 100 ಕೋಟಿಗೂ ಅಧಿಕ ಹಣ ಭ್ರಷ್ಟಾಚಾರ ಪ್ರಕರಣ ಸಂಬಂಧ ಇಬ್ಬರು ಗೆಜೆಟೆಡ್ ಅಧಿಕಾರಿಗಳ ವಿರುದ್ಧ ಎಫ್ಐಆರ್ (FIR) ದಾಖಲಾಗಿದ್ದು ದೇವದುರ್ಗ ತಾಲೂಕಿನ ನಾಲ್ವರು ಪಿಡಿಓಗಳನ್ನು ಅಮಾನತು ಮಾಡಲಾಗಿದೆ. ಜಾಲಹಳ್ಳಿ ಪಂ, ಪಿಡಿಓ ಪತ್ಯಪ್ಪ ರಾಠೋಡ್, ಶಾವಂತಗೆರಾ ಪಂ.ಪಿಡಿಓ ಗುರುಸ್ವಾಮಿ, ಕ್ಯಾದಿಗೇರಾ ಪಂ.ಪಿಡಿಓ ಸಿಬಿ ಪಾಟೀಲ್, ಗಾಣದಾಳ ಪಿಡಿಓ ಮಲ್ಲಪ್ಪ ಅವರನ್ನು ಅಮಾನತು ಮಾಡಲಾಗಿದೆ.
ಇಲಾಖಾ ತನಿಖೆ, ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿ ರಾಯಚೂರು ಜಿಲ್ಲಾ.ಪಂ ಸಿಇಓ ಪಾಂಡ್ವೆ ರಾಹುಲ್ ತುಕಾರಾಮ್ ಆದೇಶ ಹೊರಡಿಸಿದ್ದಾರೆ. ದೇವದುರ್ಗ ತಾಲ್ಲೂಕಿನ 33 ಗ್ರಾ.ಪಂ ವ್ಯಾಪ್ತಿ ನಡೆದಿದ್ದ ಅಕ್ರಮ ಪ್ರಕರಣದಲ್ಲಿ ಇನ್ನೂ ಕೆಲ ಪಿಡಿಓಗಳು, ಚುನಾಯಿತ ಪ್ರತಿನಿಧಿಗಳು ಭಾಗಿಯಾಗಿರುವ ಆರೋಪ ಕೇಳಿ ಬಂದಿದ್ದು ಅವರ ವಿರುದ್ಧವೂ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿರ್ದೇಶನದ ಮೇರೆಗೆ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಅಣ್ಣರಾವ್ ಅವರು ಅಕ್ರಮದ ಬಗ್ಗೆ ದೂರು ನೀಡಿದ್ದರು. ದೂರಿನಂತೆ ತಾಲ್ಲೂಕು ಪಂಚಾಯಿತಿಯ ಹಿಂದಿನ ಇಒ ಪಂಪಾಪತಿ ಹಿರೇಮಠ, ನಿರ್ಗಮಿತ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಬಸಣ್ಣ ನಾಯಕ ಹೇಮನೂರು ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 465, 409, 420, 34ರ ಅಡಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ರಾಯಚೂರು: ನರೇಗಾ ಅನುಷ್ಠಾನದಲ್ಲಿ ಭಾರಿ ಅವ್ಯವಹಾರ; ಸರ್ಕಾರದ ಬೊಕ್ಕಸಕ್ಕೆ ಕೋಟಿ ರೂ. ನಷ್ಟ
ನರೇಗಾ ಯೋಜನೆಯಡಿ 2020-21, 2021-22 ಹಾಗೂ 2022-23ರವರೆಗೆ ನಡೆದ ಕಾಮಗಾರಿ ಅನುಷ್ಠಾನಗೊಂಡ ಅಂದಾಜು ಮೊತ್ತಕ್ಕಿಂತ ಹೆಚ್ಚುವರಿಯಾಗಿ ₹11.64 ಕೋಟಿ ಮತ್ತು ಅನುಷ್ಠಾನಗೊಂಡ ಕಾಮಗಾರಿಗಳ ಕಡತಗಳನ್ನು ನಿರ್ವಹಿಸದೆ ₹32.51 ಕೋಟಿಯನ್ನು ಅಕ್ರಮವಾಗಿ ಪಾವತಿಸಲಾಗಿದೆ. ಈ ಎಲ್ಲ ಪ್ರಕರಣಗಳಲ್ಲಿ ₹102.32 ಕೋಟಿಯನ್ನು ಶ್ರೀ ಮಾರುತೇಶ್ವರ ಎಂಟರ್‌ಪ್ರೈಸಸ್‌ಗೆ ನಿಯಮ ಮೀರಿ ಪಾವತಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:49 am, Mon, 11 December 23