
ರಾಯಚೂರು, ಜೂನ್ 22: ಗಡಿ ಜಿಲ್ಲೆ ರಾಯಚೂರಿನಲ್ಲಿ (Raichuru) ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (AIIMS) ಸ್ಥಾಪನೆಗಾಗಿಯೇ ನಡೆಯುತ್ತಿರುವ ಬೃಹತ್ ಚಳುವಳಿ ಈಗ ಬರೋಬ್ಬರಿ 1,500 ದಿನಗಳನ್ನು ಪೂರೈಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಶತಾಯ ಗತಾಯ ರಾಯಚೂರಿಗೆ ಏಮ್ಸ್ ಮಂಜೂರಾಗಲೇಬೇಕು ಎಂದು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಹಾಗೂ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಈಗ ಮತ್ತಷ್ಟು ತೀವ್ರಗೊಂಡಿದೆ.
ಹಿಂದೆ ನಂಜುಂಡಪ್ಪ ವರದಿಯ ಆಧಾರದ ಮೇಲೆ ರಾಯಚೂರು ಜಿಲ್ಲೆಗೆ ಐಐಟಿ (IIT) ಮಂಜೂರಾಗಬೇಕಿತ್ತು. ಆದರೆ ರಾಜಕೀಯ ಹುನ್ನಾರ ಮತ್ತು ಪ್ರಭಾವಿ ನಾಯಕರ ಒತ್ತಡದಿಂದಾಗಿ ಅದು ಧಾರವಾಡದ ಪಾಲಾಯಿತು. ರಾಯಚೂರಿಗೆ ಆದ ಈ ಅನ್ಯಾಯಕ್ಕೆ ಪ್ರಾಯಶ್ಚಿತ್ತವಾಗಿ ಜಿಲ್ಲೆಯಲ್ಲಿ ‘ಏಮ್ಸ್’ ಆದರೂ ಸ್ಥಾಪನೆಯಾಗಲಿ ಎಂಬುದು ಇಡೀ ಜಿಲ್ಲೆಯ ಜನರ ಕರಳುಬಳ್ಳಿಯ ಕೂಗಾಗಿದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಕೇಂದ್ರ ಸರ್ಕಾರವೇ ‘ಮಹತ್ವಾಕಾಂಕ್ಷಿ ಜಿಲ್ಲೆಗಳು’ ಎಂದು ಗುರುತಿಸಿದ್ದರೂ, ಇಲ್ಲಿನ ಆರೋಗ್ಯ ರಂಗದ ಸುಧಾರಣೆಗೆ ಯಾವುದೇ ದೊಡ್ಡ ಯೋಜನೆಗಳು ಜಾರಿಯಾಗಿಲ್ಲ ಎಂಬುದು ಹೋರಾಟಗಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸ್ಯಾಂಡಲ್‌ವುಡ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಾಯಚೂರಿಗೆ ಭೇಟಿ ನೀಡಿ ಈ ಹೋರಾಟಕ್ಕೆ ಬಹಿರಂಗ ಬೆಂಬಲ ಘೋಷಿಸಿದ್ದರು. ಅಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಮಾತನಾಡುವ ಭರವಸೆಯನ್ನೂ ನೀಡಿದ್ದರು. ಇವರೊಂದಿಗೆ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಕೂಡ ಹೋರಾಟಕ್ಕೆ ಕೈಜೋಡಿಸಿದ್ದರು. ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಅಧಿಕೃತ ಪತ್ರ ಬರೆದಿದ್ದಾರೆ. ಆದರೆ, ಈವರೆಗೆ ಕೇಂದ್ರದಿಂದ ಯಾವುದೇ ಸ್ಪಷ್ಟ ನಿಲುವು ಬಾರದಿರುವುದು ದುರದೃಷ್ಟಕರ. ಸದ್ಯ ರಾಯಚೂರು ನಗರ ಸೇರಿದಂತೆ ಜಿಲ್ಲೆಯ ಲಿಂಗಸುಗೂರು, ಸಿಂಧನೂರು ಭಾಗಗಳಲ್ಲೂ ಹೋರಾಟದ ಕಿಚ್ಚು ಮತ್ತೆ ಜೋರಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ