ರಾಯಚೂರು, ಅಕ್ಟೋಬರ್ 01: ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುವಾಗ ಮಹಿಳೆ ಕುಸಿದುಬಿದ್ದು ಮೃತಪಟ್ಟಿದ್ದರು. ಆ ಘಟನೆಯ ಕೂಡ ವಿಡಿಯೋ ವೈರಲ್ ಆಗಿತ್ತು. ಇದೀಗ ಗಣೇಶ ವಿಸರ್ಜನೆ ವೇಳೆ ಬಳಸಿದ್ದ ಡಿಜೆ ಶಬ್ದ (DJ sound) ದಿಂದ ಮಲಗಿದ್ದಲ್ಲೇ 19 ದಿನದ ಮಗು ಸಾವನ್ನಪ್ಪಿರುವ ಶಂಕೆ ಉಂಟಾಗಿದೆ. ರಾಯಚೂರಿನ ಮಡ್ಡಿಪೇಟೆಯಲ್ಲಿ ಸೆಪ್ಟೆಂಬರ್ 27ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುರೇಶ್ ಬಾಬು, ಸುಮತಿ ದಂಪತಿಯ ಹೆಣ್ಣು ಮಗು ಮೃತಪಟ್ಟಿದ್ದು, ಅತಿಯಾದ ಡಿಜೆ ಸೌಂಡ್ನಿಂದ ಮೃತಪಟ್ಟಿದೆ ಎಂದು ಆರೋಪ ಮಾಡಿದ್ದಾರೆ.
ಡಿಜೆ ಸೌಂಡ್ ಜೊತೆ ಗಣೇಶ ಮೂರ್ತಿಗಳನ್ನು ಸಾಮೂಹಿಕ ವಿಸರ್ಜನೆ ಮಾಡಲಾಗುತ್ತದೆ. ಕಳೆದ 19 ದಿನಗಳ ಹಿಂದೆ ಜನಿಸಿದ್ದ ಮಗು ಆರೋಗ್ಯ ಸ್ಥಿತಿ ಸ್ಥಿರವಾಗಿತ್ತು. ಸೆ.27ರ ರಾತ್ರಿ ಮಗುವಿಗೆ ಹಾಲುಣಿಸಿ ತಾಯಿ ಸುಮತಿ ಮಲಗಿಸಿದ್ದಾರೆ. ಡಿಜೆ ಸೌಂಡ್ನಿಂದ ಹೃದಯದ ಸಮಸ್ಯೆಯಾಗಿ ಮೃತಪಟ್ಟಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಕರಾಳ ಭಾನುವಾರ: ಕರ್ನಾಟಕದ ವಿವಿಧೆಡೆ ಸಾಲು-ಸಾಲು ಅಪಘಾತ, 8 ಜನ ದುರ್ಮರಣ
ಮೃತ ಮಗುವಿನ ಅಜ್ಜ ಜಿಟಿ ರೆಡ್ಡಿ ವೃತ್ತಿಯಲ್ಲಿ ವಕೀಲರಾಗಿದ್ದು ನಗರದ ಮಡ್ಡಿಪೇಟೆಯಲ್ಲಿ ವಾಸವಾಗಿದ್ದಾರೆ. ಇವರು ತಮ್ಮ ಮಗಳ ಸುಮತಿಯನ್ನ ಹೆರಿಗೆಗೆ ಕರೆತಂದಿದ್ದರು. ಕಳೆದ 19 ದಿನಗಳ ಹಿಂದಷ್ಟೆ ಹೆಣ್ಣುಮಗು ಜನಿಸಿತ್ತು. ಮನೆಗೆ ಮಹಾಲಕ್ಷ್ಮೀ ಬಂದ್ಲು ಅಂತ ರೆಡ್ಡಿ ಅವರ ಇಡೀ ಕುಟುಂಬ ಸಂತಸದಲ್ಲಿತ್ತು. ಆದರೆ ಇದೇ ಸೆಪ್ಟೆಂಬರ್ 27 ರ ರಾತ್ರಿ ಸಾಮೂಹಿಕ ಗಣೇಶ ವಿಸರ್ಜನೆ ವೇಳೆಯ ಡಿಜೆಗಳ ಕರ್ಕಶ ಶಬ್ಧಕ್ಕೆ 19 ದಿನಗಳ ಹಸುಗೂಸು ಮೃತಪಟ್ಟಿದೆ. ಇದಕ್ಕೆ ಡಿಜೆಯ ಅತಿಯಾದ ಶಬ್ಧ ಕಾರಣ ಅಂತ ಮೃತ ಮಗು ಪೋಷಕರು ಆರೋಪಿಸುತ್ತಿದ್ದಾರೆ.
ಮೃತ ಮಗುವಿನ ಪೋಷಕರು ಅತಿಯಾದ ಡಿಜೆ ಬಳಕೆ ಸಂಬಂಧ ಹಾಗೂ ಮಗು ಸಾವಿಗೆ ಡಿಜೆ ಕಾರಣ ಅಂತ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.
ಈ ಕುರಿತಾಗಿ ಟಿವಿ9ಗೆ ಇಎನ್ಟಿ ತಜ್ಞ ವೈದ್ಯ ಡಾ.ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದು, ಅತಿಯಾದ ಡಿಜೆ ಸೌಂಡ್ನಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹೃದಯದ ಬಡಿತ ಏರುಪೇರಾಗುತ್ತೆ, ಖಿನ್ನತೆಯಂತಹ ಸಮಸ್ಯೆ ಆಗಬಹುದು. ಮಗು ಮಲಗಿದ್ದ ವೇಳೆ ಸಡನ್ ಆಗಿ ಅತಿಯಾದ ಶಬ್ದ ಕೇಳಿಬಂದರೆ ಆಘಾತವಾಗಬಹುದು ಎಂದಿದ್ದಾರೆ.
ಇದನ್ನೂ ಓದಿ: ಮನೆಯ ಪಾಯಾ ತೆಗೆಯುವಾಗ ಸಿಕ್ತು ಎಂದು ನಕಲಿ ಚಿನ್ನ ನೀಡಿ ವಂಚನೆ; ಹಣ ಕಳೆದುಕೊಂಡು ಕಂಗಾಲಾದ ಗುತ್ತಿಗೆದಾರ
ಪುಟ್ಟಮಕ್ಕಳಿಗೆ ಹೃದಯಸ್ತಂಭನವಾಗುವ ಸಾಧ್ಯತೆ ಇರುತ್ತೆ. ಆದರೆ ಈ ಘಟನೆ ಇದೇ ಕಾರಣಕ್ಕೆ ಆಯ್ತು ಎಂದು ಹೇಳಲು ಆಗುವುದಿಲ್ಲ. ಶಬ್ದ ಪ್ರಮಾಣ 185 ಡೆಸಿಬಲ್ಗಿಂತ ಹೆಚ್ಚಿದ್ದರೆ ಪ್ರಾಣಹಾನಿ ಸಾಧ್ಯತೆ ಇರುತ್ತೆ. ಡಿಜೆ ಶಬ್ದ ಅಂದಾಜು 100 ಡೆಸಿಬಲ್ನಿಂದ 120 ಡೆಸಿಬಲ್ ಇರುತ್ತೆ. ಡಿಜೆ ಶಬ್ದದಿಂದಲೇ 19 ದಿನದ ಮಗು ಮೃತಪಟ್ಟಿರುವ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಗಣೇಶೋತ್ಸವ ಮೆರವಣಿಗೆಯಲ್ಲಿ ಡಾನ್ಸ್ ಮಾಡುತ್ತಿದ್ದ ಮಹಿಳೆ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದರು. ಅನಂತಮ್ಮ (56) ಮೃತ ಮಹಿಳೆ. ಮೆರವಣಿಗೆಯಲ್ಲಿ ತಮಿಳು ಹಾಡಿಗೆ ಡಾನ್ಸ್ ಮಾಡುತ್ತಿದ್ದಾಗ ಮಹಿಳೆಗೆ ಎದೆ ನೋವು ಕಾಣಿಸಿಕೊಂಡಿದ್ದು ಇದ್ದಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ರಾಯಚೂರಿನ ಮಾರ್ಕೆಟ್ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:38 pm, Sun, 1 October 23