ರಾಯಚೂರು: ಸರ್ಕಾರಿ ಆಸ್ಪತ್ರೆಯಿಂದ ಸಿಸಿಟಿವಿಗಳ ಡಿವಿಆರ್ ಸಮೇತ ಲಕ್ಷಾಂತರ ರೂ. ಮೌಲ್ಯದ ಉಪಕರಣ ಕಳವು
ಸಾಮಾನ್ಯವಾಗಿ ಕಳ್ಳತನದಂಥ ಪ್ರಕರಣಗಳಾದಾಗ ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸುತ್ತಾರೆ. ಕಳ್ಳರ ಪತ್ತೆಗೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆದರೆ, ರಾಯಚೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಳ್ಳರು ಅದಕ್ಕೂ ಅವಕಾಶ ಕೊಟ್ಟಿಲ್ಲ. ಸಿಸಿಟಿವಿಗಳ ಡಿವಿಆರ್ಗಳನ್ನೇ ಕದ್ದೊಯ್ದಿದ್ದಾರೆ. ಜತೆಗೆ, ಲಕ್ಷಾಂತರ ರೂಪಾಯಿ ಮೌಲ್ಯದ ಉಪಕರಣಗಳನ್ನೂ ಕಳವು ಮಾಡಿದ್ದಾರೆ.
ರಾಯಚೂರು, ಅಕ್ಟೋಬರ್ 18: ರಾಯಚೂರಿನ ಸರ್ಕಾರಿ ಆಸ್ಪತ್ರೆಯಲ್ಲೇ ಕಳ್ಳತನವಾಗಿದೆ. ಜಿಲ್ಲೆಯ ದೇವದುರ್ಗ ತಾಲೂಕು ಆಸ್ಪತ್ರೆಯ ಸಿಸಿಟಿವಿಗಳ ಡಿವಿಆರ್ ಸಮೇತ ಲ್ಯಾಬ್ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಉಪಕರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಸುಮಾರು ಹತ್ತು ಲಕ್ಷ ರೂಪಾಯಿ ಮೌಲ್ಯದ ಮೂರು ಯಂತ್ರೋಪಕರಣಗಳು ಕಳವಾಗಿವೆ. ರಕ್ತ ಪರೀಕ್ಷೆ ಮಾಡುವ ಅತ್ಯಾಧುನಿಕ ಯಂತ್ರ, ಎಲೆಕ್ಟ್ರೋಲೈಟ್ ಸೇರಿದಂತೆ ಬೆಲೆ ಬಾಳುವ ವಸ್ತುಗಳು ಕಳವಾಗಿವೆ.
ಐದು ಲಕ್ಷ ರೂಪಾಯಿ ಮೌಲ್ಯದ ಎಜಿಡಿ ಫುಲಿ ಆಟೋಮೇಟೆಡ್ ಅನಲೈಸರ್, ಐದು ಲಕ್ಷ ಮೌಲ್ಯದ ಹೆಮೆಟಲಜಿ (ರಕ್ತಶಾಸ್ತ್ರ) ಅನಲೈಸರ್, 59 ಸಾವಿರ ಮೌಲ್ಯದ ಎಲೆಕ್ಟ್ರೋಲೈಟ್ ಕಳವಾಗಿವೆ. ಒಟ್ಟಾರೆಯಾಗಿ 10.59 ಲಕ್ಷ ರೂ. ಮೌಲ್ಯದ ಯಂತ್ರೋಪಕರಣಗಳ ಕಳ್ಳತನವಾಗಿದೆ.
ಆಗಂತುಕರು ಪ್ರಯೋಗಾಲಯದ ಬೀಗ ಮುರಿದು ಕೃತ್ಯ ಎಸಗಿದ್ದಾರೆ, ಯಂತ್ರೋಪಕರಣಗಳ ಕಳ್ಳತನದ ಬಳಿಕ, ಸುಳಿಸುವ ಸಿಗದಂತೆ ಮಾಡಲು ಸಿಸಿಟಿವಿ ಡಿವಿಆರ್ ಅನ್ನೂಬ ಕಳ್ಳರು ಹೊತ್ತೊಯ್ದಿದ್ದಾರೆ.
ಸದ್ಯ ತಾಲೂಕು ವೈದ್ಯಾಧಿಕಾರಿ ಡಾ. ಶಿವಾನಂದ್ ದೇವದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ, ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ದೇವದುರ್ಗ ಪೊಲೀಸರಿಂದ ಪ್ರಾಥಮಿಕ ಹಂತದ ತನಿಖೆ ಪ್ರಗತಿಯಲ್ಲಿದೆ.
ಇದನ್ನೂ ಓದಿ: ರಾಯಚೂರು: ಫಸ್ಟ್ ನೈಟ್ ವಿಡಿಯೋ ಮಾಡಿಟ್ಟುಕೊಂಡು ಸರ್ಕಾರಿ ಅಧಿಕಾರಿಯಿಂದ ಪತ್ನಿಗೆ ಬ್ಲ್ಯಾಕ್ಮೇಲ್
ವಿದ್ಯುತ್ ತಂತಿ ತಗುಲಿ 2 ಮೇಕೆಗಳು ಸಾವು
ರಾಯಚೂರಿನ ರಾಲಿಂಗಸುಗೂರು ತಾಲೂಕಿನ ಮಲ್ಲಾಪುರದಲ್ಲಿ ವಿದ್ಯುತ್ ತಂತಿ ತಗುಲಿ 2 ಮೇಕೆಗಳು ಮೃತಪಟ್ಟಿವೆ. ತಿಮ್ಮಣ್ಣ ಪೂಜಾರಿ ಎಂಬುವರಿಗೆ ಸೇರಿದ ಮೇಕೆಗಳು ಮೃತಪಟ್ಟಿವೆ. ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತ ಮನವಿ ಸಲ್ಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ