
ರಾಯಚೂರು, ಏಪ್ರಿಲ್ 09: ರಾಯಚೂರು (Raichur) ನಗರದ ಸದರ ಬಜಾರ್ ಚಿನ್ನದ ಅಂಗಡಿಯೊಂದರಲ್ಲಿ (Gold Shop) 65 ವರ್ಷದ ಸಹದೇವಪ್ಪ ಎಂಬುವರು ಕೆಲಸ ಮಾಡುತ್ತಿದ್ದಾರೆ. ಸಹದೇವಪ್ಪ ಅವರಿಗೆ 65 ವರ್ಷ ವಯಸ್ಸಾದರೂ ದುಡಿದು ತಿನ್ನಬೇಕು ಎಂಬ ಸ್ವಾಭಿಮಾನವಿದೆ. ಏಪ್ರಿಲ್ 4 ರಂದು ಮಟಮಟ ಮದ್ಯಾಹ್ನ ಸಹದೇವಪ್ಪ ಅವರು ಬೇರೊಂದು ಕಡೆಯಿಂದ ಸುಮಾರು 25 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರಗಳನ್ನು ತಮ್ಮ ಚಿನ್ನದ ಅಂಗಡಿಗೆ ತೆಗೆದುಕೊಂಡು ಹೋಗುತ್ತಿದ್ದರು.
25 ಗ್ರಾಂ ತೂಕದ ಚಿನ್ನದ ಮಾಂಗಲ್ಯ ತೆಗೆದುಕೊಂಡು ಬರುವಾಗ ದಾರಿಯಲ್ಲಿ ಜೇಬಿನಿಂದ ಕೆಳಗೆ ಬಿದ್ದಿವೆ. ಎಷ್ಟೇ ಹುಡುಕಿದರೂ ಜೇಬಿನಲ್ಲಿದ್ದ ಚಿನ್ನದ ಮಾಂಗಲ್ಯ ಸರಗಳು ಸಿಗಲೇ ಇಲ್ಲ. ಆಗ, ಸಹದೇವಪ್ಪ ಅವರು ಅಳುತ್ತಾ ಅಂಗಡಿ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಈ ವಿಚಾರವನ್ನು ಅಂಗಡಿ ಮಾಲೀಕರು ಸದರ ಬಜಾರ್ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ತನಿಖೆಗೆ ಇಳಿದರು.
ಸಹದೇವಪ್ಪ ಅವರು ಯಾವ್ಯಾವ ಮಾರ್ಗದಲ್ಲಿ ಓಡಾಡಿದ್ದಾರೋ ಆ ಎಲ್ಲ ಮಾರ್ಗದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆಗ, ಇದೇ ಸದರ ಬಜಾರ್ನ ಸಿಸಿಟಿವಿ ದೃಶ್ಯವೊಂದರಲ್ಲಿ ಓರ್ವ ವ್ಯಕ್ತಿ ರಸ್ತೆಯಲ್ಲಿ ಬಿದ್ದಿದ್ದ ಚಿನ್ನದ ಮಾಂಗಲ್ಯ ಸರ ತೆಗೆದುಕೊಂಡಿರುವುದು ಸೆರೆಯಾಗಿತ್ತು. ನಂತರ, ಸದರ್ ಬಜಾರ್ ಪೊಲೀಸರು ಆ ವ್ಯಕ್ತಿಯನ್ನು ಹುಡುಕಲು ಆರಂಭಿಸಿದ್ದಾರೆ. ಆ ವ್ಯಕ್ತಿಯ ಫೋನ್ ಲೊಕೇಶನ್ ಪರಿಶೀಲಿಸತೊಡಗಿದರು.
ಆಗ, ಶ್ರೀಕಾಂತ್ ಎಂಬುವರು ರಸ್ತೆಯಲ್ಲಿ ಬಿದ್ದಿದ್ದ ಚಿನ್ನದ ಮಾಂಗಲ್ಯ ಸರಗಳನ್ನು ಎತ್ತುಕೊಂಡಿದ್ದಾರೆ ಅಂತ ಪೊಲೀಸರಿಗೆ ತಿಳಿದಿದೆ. ಚಿನ್ನದ ಮಾಂಗಲ್ಯ ಸರಗಳು ಸಿಕ್ಕ ಬಳಿಕ ಶ್ರೀಕಾಂತ್ ಅವುಗಳ ಸಮೇತ ನಗರದ ಬಹುತೇಕ ಕಡೆಗಳಲ್ಲಿ ಓಡಾಡಿದ್ದಾರೆ. ಅಲ್ಲದೇ, ನಗರದ ಹೊರ ಭಾಗದಲ್ಲಿರುವ ಮಲಿಯಾಬಾದ್ಗೆ ಹೋಗಿದ್ದಾರೆ. ಆಗ ಪೊಲೀಸರು ಈತ ಕಳ್ಳನೇ ಇರಬೇಕು ಅಂದುಕೊಂಡಿದ್ದರು.
ನಂತರ, ಪೊಲೀಸರು ಶ್ರೀಕಾಂತ್ ಅವರ ಫೋನ್ ನಂಬರ್ ಸಂಗ್ರಹಿಸಿ, ಕರೆ ಮಾಡಿದ್ದಾರೆ. ಸಹದೇವಪ್ಪ ಅವರು ಕಳೆದುಕೊಂಡಿರುವ ಚಿನ್ನದ ಸರದ ಬಗ್ಗೆ ಹೇಳಿದ್ದಾರೆ. ಆಗ, ಶ್ರೀಕಾಂತ್ ತನಗೆ ರಸ್ತೆಯಲ್ಲಿ ಸಿಕ್ಕಿದ್ದು, ಠಾಣೆಗೆ ತಂದು ನೀಡುತ್ತೇನೆ ಎಂದು ಹೇಳಿದ್ದಾರೆ.
ಬಳಿಕ, ಶ್ರೀಕಾಂತ್ ಅವರು 25 ಗ್ರಾಂ ಚಿನ್ನದ ಮಾಂಗಲ್ಯ ಸರಗಳನ್ನು ಠಾಣೆಗೆ ಬಂದು ಒಪ್ಪಿಸಿದ್ದಾರೆ. ಆಗ, ಪೊಲೀಸರು ಯಾಕೆ ಸಿಕ್ಕಸಿಕ್ಕಲೆಲ್ಲಾ ಓಡಾಡುತ್ತಿದ್ದೀರಿ ಅಂತ ಶ್ರೀಕಾಂತ ಅವರಿಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಶ್ರೀಕಾಂತ್, “ಸರ್ ನನಗೆ ನಾಯಿ ಕಚ್ಚಿದ್ದು, ನಾಯಿ ಕಡಿತದ ಚಿಕಿತ್ಸೆಗೆಂದು ಅಲೆದಾಡುತ್ತಿದ್ದೆ. ಇದೇ ಕಾರಣಕ್ಕೆ ಮಲಿಯಾಬಾದ್ಗೆ ಹೋಗಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರೇಮ ವಿವಾಹಕ್ಕೆ ಐವರ ಕೊಲೆ ಕೇಸ್: ಮೂವರಿಗೆ ಗಲ್ಲು, 9 ಮಂದಿಗೆ ಜೀವಾವಧಿ ಶಿಕ್ಷೆ
ಇತ್ತ ಸಹದೇವಪ್ಪ ಕಳೆದುಕೊಂಡಿದ್ದ 25 ಗ್ರಾಂ ಚಿನ್ನದ ಮಾಂಗಲ್ಯ ಸರಗಳನ್ನು ಯಥಾವತ್ತಾಗಿ ಶ್ರೀಕಾಂತ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇತ್ತ ಕಳೆದು ಹೋದ ಚಿನ್ನ ಮತ್ತೆ ಸಿಕ್ತು ಅಂತ ಸಹದೇವಪ್ಪ ಸಂತಸ ವ್ಯಕ್ತಪಡಿಸ್ತಿದ್ದಾರೆ.