ತೀವ್ರ ಸ್ವರೂಪ ಪಡೆದ ಟ್ರಾಕ್ಟರ್ ಚಾಲಕನ ಮೇಲೆ ಪಿಎಸ್‌ಐ ಹಲ್ಲೆ ಕೇಸ್: ಠಾಣೆ ಎದುರು ಪ್ರತಿಭಟನೆ, ಅಮಾನತಿಗೆ ಪಟ್ಟು
ಅಕ್ರಮ ಮರಳು ಸಾಗಾಟ ಆರೋಪದಡಿ ಟ್ರಾಕ್ಟರ್ ಚಾಲಕನಿಗೆ ಜಿಲ್ಲೆಯ ಮಸ್ಕಿ ಠಾಣೆಯ ಪಿಎಸ್‌ಐ ಬಾಸುಂಡೆ ಬರುವಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ನಿರುಪಾದಿ ಹಲ್ಲೆಗೊಳಗಾಗಿರುವ ಟ್ರಾಕ್ಟರ್ ಚಾಲಕ. ಸದ್ಯ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಂದು ಮತ್ತೆ ಮಸ್ಕಿ ಪೊಲೀಸ್ ಠಾಣೆ ಎದುರು ಹೋರಾಟಗಾರರು ಪ್ರತಿಭಟನೆಗೆ ಕುಳಿತಿದ್ದಾರೆ.
ರಾಯಚೂರು, ಸೆಪ್ಟೆಂಬರ್ 23: ಅಕ್ರಮ ಮರಳು ಸಾಗಾಟ ಆರೋಪದಡಿ ಟ್ರಾಕ್ಟರ್ ಚಾಲಕನಿಗೆ ಜಿಲ್ಲೆಯ ಮಸ್ಕಿ ಠಾಣೆಯ ಪಿಎಸ್‌ಐ (PSI) ಬಾಸುಂಡೆ ಬರುವಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ನಿರುಪಾದಿ ಹಲ್ಲೆಗೊಳಗಾಗಿರುವ ಟ್ರಾಕ್ಟರ್ ಚಾಲಕ. ಸದ್ಯ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ನಿನ್ನೆ ಬೆಳಿಗ್ಗೆಯಿಂದ ಸಂಜೆವರೆಗೂ ಮೌನ ಪ್ರತಿಭಟನೆ ನಡೆಸಲಾಗಿದ್ದು, ಇಂದು ಮತ್ತೆ ಮಸ್ಕಿ ಪೊಲೀಸ್ ಠಾಣೆ ಎದುರು ಹೋರಾಟಗಾರರು ಪ್ರತಿಭಟನೆಗೆ ಕುಳಿತಿದ್ದಾರೆ. ಹಲ್ಲೆ ನಡೆಸಿದ ಪಿಎಸ್‌ಐ ಮಣಿಕಂಠ ವಿರುದ್ಧ ಕ್ರಮಕೈಗೊಳ್ಳದ ಹಿನ್ನೆಲೆ ಪ್ರತಿಭಟನೆ ಮಾಡಲಾಗುತ್ತಿದೆ.
ಪಿಎಸ್‌ಐ ಮಣಿಕಂಠ ವಿರುದ್ಧ ಸೂಕ್ತ ಕ್ರಮಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದ್ದು, ರೈತರು, ಕೆಲ ಸ್ಥಳೀಯರು ಕೂಡಲೇ ಅಮಾನತುಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ. ಮರಳು ಸಾಗಿಸಲು ಹಣಕ್ಕೆ ಬೇಡಿಕೆ ಇಟ್ಟು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಸದ್ಯ ರಾಯಚೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರುಪಾದಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಹಣ ಪಡೆದು ಡಿಡಿಪಿಐ, ಬಿಇಓ ಗಳಿಂದ ಶಿಕ್ಷಕರ ವರ್ಗ: ರಾಯಚೂರಿನಲ್ಲಿ ಮಕ್ಕಳ ಪರದಾಟ -ಎಸ್ಎಫ್ಐ ಗಂಭೀರ ಆರೋಪ
ಹಳ್ಳದಿಂದ ಸಂಬಂಧಿಕರ ಮನೆಗೆ ಮರಳು ಸಾಗಾಟ ಮಾಡುತ್ತಿದ್ದ ವೇಳೆ ಅಕ್ರಮವಾಗಿ ಮರಳು ಸಾಗಣೆ ಆರೋಪದಡಿ ಹಿಡಿದು ಮನಬಂದಂತೆ ಹೊಡೆದಿದ್ದಾರೆ ಎಂದು ನಿರುಪಾದಿ ಆರೋಪಿಸಿದ್ದಾರೆ. ಒಂದು ವೇಳೆ ಅಕ್ರಮವೆಸಗಿದ್ದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ ಹಲ್ಲೆ ನಡೆಸಿ ಪಿಎಸ್‌ಐ ಗೂಂಡಾವರ್ತನೆ ತೋರಿದ್ದಾರೆ ಎಂದು ನಿರುಪಾದಿ ಕುಟುಂಬಸ್ಥರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಹಶಿಲ್ದಾರ್ ಕಚೇರಿಯಲ್ಲಿ ಝಣಝಣ ಕಾಂಚಾಣ
ಜಿಲ್ಲೆಯಲ್ಲಿ ಎಲ್ಲವೂ ಸರಿಯಿಲ್ಲ. ಬಹುತೇಕ ಕಚೇರಿಯಲ್ಲಿ ಹಣ ಕೊಟ್ಟರೆ ಮಾತ್ರ ಕಾರುಬಾರು ಇಲ್ಲದಿದ್ದರೆ ದೇವರೇ ಬಲ್ಲ ಅನ್ನೋ ಆರೋಪವಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಾಯಚೂರು ನಗರದ ತಹಶಿಲ್ದಾರ್ ಕಚೇರಿಯಲ್ಲೊಂದು ಗರಿಗರಿ ನೋಟಿನ ಕಹಾನಿ ಬೆಳಕಿಗೆ ಬಂದಿತ್ತು. ರಾಯಚೂರು ನಗರದ ತಹಶಿಲ್ದಾರ್ ಕಚೇರಿಯಲ್ಲಿ ದಾಖಲೆ ಪಡೆಯಲು, ತಿದ್ದುಪಡಿ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಸೇರಿ ವಿವಿಧ ಸರ್ಟಿಫಿಕೇಟ್ಗಳನ್ನ ಪಡೀಬೇಕು ಅಂದರೆ ಗರಿ ಗರಿ ನೋಟು ಬೇಕೇ ಬೇಕು ಅನ್ನೋ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ನೈಟ್ ಶಿಫ್ಟ್ನಲ್ಲಿ ಮಹಿಳಾ ಇಂಜಿನಿಯರ್ ಜೊತೆ ಅಸಭ್ಯ ವರ್ತನೆ: ಸಾಕ್ಷ್ಯಾಧಾರ ಲಭ್ಯ, ಜೆಸ್ಕಾಂ ಇಂಜಿನಿಯರ್ ಸಸ್ಪೆಂಡ್
ಆಯಾ ದಾಖಲೆಗೆ ಒಂದೊಂದು ರೇಟ್ ಫಿಕ್ಸ್ ಆಗಿದೆಯಂತೆ. ಇದರಿಂದ ಸಾರ್ವಜನಿಕರು ಅಕ್ಷರಶಃ ಕಂಗಾಲಾಗಿದ್ದರು. ಪ್ರತಿದಿನ ಕಚೇರಿಗೆ ಬಂದು ಕ್ಯೂನಲ್ಲಿ ನಿಂತರು ಕೆಲಸವಾಗಲ್ಲ. ಅದೇ ಕೇಳಿದಷ್ಟು ಹಣ ಕೊಟ್ಟರೆ ಅಂಗೈಯಲ್ಲಿ ಕೆಲಸವಾಗಿಬಿಡತ್ತಂತೆ. ಈ ಆರೋಪಕ್ಕೀಗ ಸಾಕ್ಷಿಯೊಂದು ಸಿಕ್ಕಿದೆ. ತಹಶಿಲ್ದಾರ್ ಕಚೇರಿಯಲ್ಲಿ ಡೆಪ್ಯೂಟಿ ತಹಶಿಲ್ದಾರ್ ಶಶಿಕಲಾ ಅನ್ನೋರು ಹಣ ಪಡೆದ ಘಟನೆ ಬೆಳಕಿಗೆ ಬಂದಿತ್ತು. ಟಿವಿ9 ಕ್ಯಾಮೆರಾ ಕಂಡು ಮೇಡಂ ಕಕ್ಕಾಬಿಕ್ಕಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:48 pm, Sat, 23 September 23