ಭಿಕ್ಷುಕನ ಸೋಗಲ್ಲಿ ಮನೆಗಳ ರಾಬರಿ: ರಾಯಚೂರಲ್ಲಿ ಖಾಕಿ ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಕಳ್ಳ
ರಾಜ್ಯದ ಆರು ಠಾಣೆಗಳಿಗೆ ಬೇಕಾಗಿದ್ದ ಕುಖ್ಯಾತ ಮನೆಗಳ್ಳನನ್ನು ಬಲೆಗೆ ಬೀಳಿಸುವಲ್ಲಿ ರಾಯಚೂರು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಮೊಬೈಲ್ ಬಳಸದೆ, ರೈಲಿನಲ್ಲಿ ಬಂದು ಭಿಕ್ಷುಕನಂತೆ ಓಡಾಡಿ ಲಾಕ್ ಮಾಡಿದ ಮನೆಗಳನ್ನು ಗುರುತಿಸಿ ಈತ ಕನ್ನ ಹಾಕುತ್ತಿದ್ದ. ಎಂತಹ ಭದ್ರತೆ ಇರುವ ಮನೆಯನ್ನೂ ದೋಚುವ ಚಾಕಚಕ್ಯತೆ ಹೊಂದಿದ್ದ ಈತ, ಕ್ಷಣಮಾತ್ರದಲ್ಲಿ ಮನೆಯೊಳಗೆ ನುಗ್ಗುತ್ತಿದ್ದ ಎನ್ನಲಾಗಿದೆ.

ರಾಯಚೂರು, ನವೆಂಬರ್ 21: ರಾಜ್ಯದ ಆರು ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಖತರ್ನಾಕ್ ಮನೆಗಳ್ಳನನ್ನು ಬಂಧಿಸುವಲ್ಲಿ ರಾಯಚೂರು ಪೊಲೀಸರು ಯಶಸ್ವಿಯಾಗಿದ್ದಾರೆ. ರಾಮಕೃಷ್ಣ ಅಲಿಯಾಸ್ ಗುಜ್ಜಲು ರಾಮಕೃಷ್ಣ ಬಂಧಿತ ಆರೋಪಿಯಾಗಿದ್ದು, ಈತ ಆಂಧ್ರಪ್ರದೇಶದ ಧರ್ಮಾವರಂ ಮೂಲದವನು ಎಂಬುದು ಗೊತ್ತಾಗಿದೆ. ಕರ್ನಾಟಕದ ರಾಯಚೂರು, ಗೌರಿಬಿದನೂರು, ಹಿರಿಯೂರು, ಹಾವೇರಿ, ಗಂಗಾವತಿ, ಶಿರಾ ಠಾಣೆಗಳ ವ್ಯಾಪ್ತಿಯಲ್ಲಿ ಈತ ಕೈಚಳಕ ತೋರಿಸಿ, ಮನೆಗಳ್ಳತನ ನಡೆಸಿದ್ದ.
ಮೋಸ್ಟ್ ವಾಂಟೆಡ್ ಮನೆಗಳ್ಳನಾಗಿದ್ದ ರಾಮಕೃಷ್ಣ ಮೊಬೈಲ್ ಬಳಸುತ್ತಿರಲಿಲ್ಲ. ರೈಲಿನ ಮೂಲಕ ತಾನು ಟಾರ್ಗೆಟ್ ಮಾಡುವ ನಗರಕ್ಕೆ ಬರುತ್ತಿದ್ದ ಈತ, ಭಿಕ್ಷುಕರ ರೀತಿ ಪೂರ್ತಿ ಏರಿಯಾ ಓಡಾಡುತ್ತಿದ್ದ. ಆ ವೇಳೆ ಯಾವ ಮನೆಗಳಿಗೆ ಬೀಗ ಹಾಕಿದೆ ಎಂಬುದನ್ನು ಗುರುತಿಸಿ, ರಾತ್ರಿ ವೇಳೆ ಅವುಗಳಿಗೆ ಕನ್ನ ಹಾಕುತ್ತಿದ್ದ. ಮನೆಗಳನ್ನ ಎಷ್ಟೇ ಭದ್ರವಾಗಿ ಲಾಕ್ ಮಾಡಿದ್ರೂ ನಿಮಿಷಗಳಲ್ಲೇ ಬಿಗ ಓಡೆದು ಒಳನುಗ್ಗುವ ಕಲೆ ಈತನದಾಗಿದ್ದು, ಮನೆಯಲ್ಲಿದ್ದ ಹಣ ಮತ್ತು ಬಂಗಾರ ಕದ್ದು ಎಸ್ಕೇಪ್ ಆಗುತ್ತಿದ್ದ. ಇದೇ ನಟೋರಿಯಸ್ ಕಳ್ಳ ರಾಮಕೃಷ್ಣ ರಾಯಚೂರು ನಗರದ ಪಶ್ಚಿಮ ಠಾಣಾ ವ್ಯಾಪ್ತಿ ಮೂರು ಮನೆಗಳಲ್ಲಿ ಕಳ್ಳತನ ಮಾಡಿದ್ದ. ಪ್ರಕರಣದ ತನಿಖೆ ವೇಳೆ ಪೊಲೀಸರಿಗೆ ಆರೋಪಿಯ ಫಿಂಗರ್ ಪ್ರಿಂಟ್ ಸಿಕ್ಕಿತ್ತು. ಆ ಸುಳಿವಿನ ಆಧಾರದಲ್ಲಿ ಸುಮಾರು 20 ದಿನಗಳ ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಇದನ್ನೂ ಓದಿ: ಪಕ್ಕದ ಜಮೀನಿನವರನ್ನ ಜೈಲಿಗೆ ಕಳಿಸಬೇಕೆಂದು ಸ್ವಂತ ಮಗಳನ್ನೇ ಕೊಂದ ತಂದೆ
ಬಂಧಿತ ಮನೆಗಳ್ಳ ರಾಮಕೃಷ್ಣನಿಂದ 36 ಲಕ್ಷ ಮೌಲ್ಯದ ಸುಮಾರು 315 ಗ್ರಾಂ ಚಿನ್ನಾಭರಣಗಳನ್ನ ಜಪ್ತಿ ಮಾಡಲಾಗಿದೆ. ಮನೆಗಳ್ಳತನ ಬಳಿಕ ಚಿನ್ನಾಭರಣವನ್ನ ಖಾಸಗಿ ಬ್ಯಾಂಕ್ಗಳಲ್ಲಿ ಅಡವಿಟ್ಟು ರಾಮಕೃಷ್ಣ ಹಣ ಪಡೆಯುತ್ತಿದ್ದ. ಬಳಿಕ ಮತ್ತೆ ಕಳ್ಳತನ ಮಾಡಿಕೊಂಡು ಓಡಾಡುತ್ತಿದ್ದ. ರಾಯಚೂರು ನಗರದ ಎಲ್ಐಸಿ ಅಧಿಕಾರಿ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲೂ ಈತನ ಪಾತ್ರವಿದ್ದು, ಕಪಾಟಿನ ಬದಲು ಬ್ಯಾಗ್ನಲ್ಲಿ ಇಟ್ಟಿದ್ದ ಚಿನ್ನವನ್ನೂ ಬ್ಯಾಗ್ ಸಮೇತ ಈತ ದೋಚಿದ್ದ. ದುರಂತ ಅಂದ್ರೆ ರಾಮಕೃಷ್ಣ ಮನೆಗಳ್ಳತನ ಮಾಡಿರೋ ವಿಷಯ ತಿಳಿದು, ಆತನಿಗೆ ಪರಿಚಯ ಇರೋ ಬೇರೆ ಕಳ್ಳರು ಈತನ ಮನೆಯಲ್ಲೇ ಚಿನ್ನಾಭರಣ ಕದ್ದ ಘಟನೆಯೂ ನಡೆದಿರೋದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಸದ್ಯ ರಾಯಚೂರು ಪಶ್ಚಿಮ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸ್ತಿದ್ದಾರೆ. ಇನ್ನೂ ಎಲ್ಲೆಲ್ಲಿ ಈತ ಕೈಚಳಕ ತೋರಿಸಿದ್ದ ಎಂಬ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:25 pm, Fri, 21 November 25



