ಹೆಚ್​ಡಿ ದೇವೇಗೌಡಗೆ ತಪ್ಪಿದ ಎನ್​ಡಿಎ ರಾಜ್ಯಸಭೆ ಟಿಕೆಟ್: ಪ್ರೊ ಎಂ ನಾಗರಾಜಗೆ ಬಿಜೆಪಿ ಮಣೆ

ಕರ್ನಾಟಕದಿಂದ ರಾಜ್ಯಸಭಾ ಚುನಾವಣೆಗೆ ಬಿಜೆಪಿಯು ಪ್ರೊ. ಎಂ. ನಾಗರಾಜ ಹಾಗೂ ವಿಧಾನ ಪರಿಷತ್‌ಗೆ ಲಿಂಗರಾಜ್ ಪಾಟೀಲ್, ರಘು ಕೌಟಿಲ್ಯ ಅವರಿಗೆ ಟಿಕೆಟ್ ಘೋಷಿಸಿದೆ. ಆದರೆ, ಮರುಆಯ್ಕೆ ಬಯಸಿದ್ದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರಿಗೆ ವಯಸ್ಸಿನ ಕಾರಣದಿಂದ ಟಿಕೆಟ್ ಕೈತಪ್ಪಿದ್ದು ಜೆಡಿಎಸ್‌ಗೆ ಭಾರಿ ಆಘಾತ ನೀಡಿದೆ.

ಹೆಚ್​ಡಿ ದೇವೇಗೌಡಗೆ ತಪ್ಪಿದ ಎನ್​ಡಿಎ ರಾಜ್ಯಸಭೆ ಟಿಕೆಟ್: ಪ್ರೊ ಎಂ ನಾಗರಾಜಗೆ ಬಿಜೆಪಿ ಮಣೆ
ಹೆಚ್​​ಡಿ ದೇವೇಗೌಡ
Image Credit source: PTI

Updated on: Jun 09, 2026 | 9:03 AM

ಬೆಂಗಳೂರು, ಜೂನ್ 8: ಕರ್ನಾಟಕ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದ್ದ 2026ರ ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಎನ್​ಡಿಎ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಭಾರತೀಯ ಜನತಾ ಪಾರ್ಟಿ (BJP) ಪ್ರಕಟಿಸಿದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಈ ಪಟ್ಟಿಗೆ ಅನುಮೋದನೆ ನೀಡಿದ್ದು, ಕರ್ನಾಟಕದಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಒಬಿಸಿ ನಾಯಕ ಪ್ರೊ. ಎಂ. ನಾಗರಾಜ ಅವರಿಗೆ ಮಣೆ ಹಾಕಲಾಗಿದೆ. ಇನ್ನು ವಿಧಾನ ಪರಿಷತ್ (MLC) ಚುನಾವಣೆಗೆ ಪಕ್ಷದ ನಿಷ್ಠಾವಂತ ನಾಯಕರಾದ ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ಅವರನ್ನು ಕಣಕ್ಕಿಳಿಸಲಾಗಿದೆ. ಆದರೆ, ಬಿಜೆಪಿಯ ಈ ಹಠಾತ್ ನಿರ್ಧಾರವು ಮೈತ್ರಿ ಪಕ್ಷವಾದ ಜೆಡಿಎಸ್‌ಗೆ ಭಾರಿ ಆಘಾತ ನೀಡಿದ್ದು, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಮರುಆಯ್ಕೆಯ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದೆ.

ಮುಖ್ಯಾಂಶಗಳು

  • ರಾಜ್ಯಸಭೆಗೆ ಬಿಜೆಪಿಯಿಂದ ಪ್ರೊ.ಎಂ.ನಾಗರಾಜ ನಾಮನಿರ್ದೇಶನ.
  • ದೇವೇಗೌಡರ ರಾಜ್ಯಸಭೆ ಮರುಪ್ರವೇಶದ ಕನಸಿಗೆ ಬ್ರೇಕ್.
  • ಎಂಎಲ್‌ಸಿ ಅಭ್ಯರ್ಥಿಗಳಾಗಿ ಲಿಂಗರಾಜ್, ರಘು ಕೌಟಿಲ್ಯ.

ಜೆಡಿಎಸ್ ಲೆಕ್ಕಾಚಾರಕ್ಕೆ ಬಿಜೆಪಿ ಬಿಗ್ ಶಾಕ್

ರಾಜ್ಯಸಭಾ ಟಿಕೆಟ್ ಆಕಾಂಕ್ಷೆಯಲ್ಲಿದ್ದ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ (JDS) ತೀವ್ರ ನಿರಾಸೆಯಾಗಿದೆ. ಸದ್ಯ ರಾಜ್ಯಸಭಾ ಸದಸ್ಯರಾಗಿರುವ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಹಿರಿತನದ ಆಧಾರದ ಮೇಲೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಗೌಡರನ್ನೇ ಜಂಟಿ ಅಭ್ಯರ್ಥಿಯನ್ನಾಗಿ ಮರುಆಯ್ಕೆ ಮಾಡಬಹುದು ಎಂಬ ಬಲವಾದ ಆಸೆ ಜೆಡಿಎಸ್ ಶಾಸಕರಲ್ಲಿತ್ತು. ಆದರೆ, ಬಿಜೆಪಿ ಹೈಕಮಾಂಡ್ ವಯಸ್ಸು ಮತ್ತು ಆರೋಗ್ಯದ ಕಾರಣವನ್ನು ಮುಂದಿಟ್ಟುಕೊಂಡು ದೇವೇಗೌಡರಿಗೆ ಟಿಕೆಟ್ ನಿರಾಕರಿಸಿದೆ. ಮೈತ್ರಿಕೂಟದಲ್ಲಿದ್ದರೂ ‘ನಾವು ಯಾವುದೇ ಕಾರಣಕ್ಕೂ ಟಿಕೆಟ್‌ಗಾಗಿ ಬಿಜೆಪಿ ನಾಯಕರಿಗೆ ಒತ್ತಡ ಹಾಕುವುದಿಲ್ಲ’ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಪದೇ ಪದೇ ಹೇಳುತ್ತಿದ್ದರು. ಇದೀಗ ಬಿಜೆಪಿ ಹೊಸ ಮುಖಕ್ಕೆ ಮಣೆ ಹಾಕುವ ಮೂಲಕ ಜೆಡಿಎಸ್‌ನ ನಿರೀಕ್ಷೆಗೆ ತಣ್ಣೀರೆರಚಿದೆ.

ಮತ್ತೊಂದೆಡೆ, ವಿಧಾನ ಪರಿಷತ್ ಚುನಾವಣೆಗೆ ಆಯ್ಕೆಯಾಗಿರುವ ಲಿಂಗರಾಜ್ ಪಾಟೀಲ್ ಈ ಹಿಂದೆ ಬಿಜೆಪಿ ಶಿಸ್ತು ಸಮಿತಿಯ ಮಾಜಿ ರಾಜ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮತ್ತೊಬ್ಬ ಅಭ್ಯರ್ಥಿ ರಘು ಕೌಟಿಲ್ಯ ಪ್ರಸ್ತುತ ಬಿಜೆಪಿ ಒಬಿಸಿ ಮೋರ್ಛಾದ ರಾಜ್ಯಾಧ್ಯಕ್ಷರಾಗಿ ಹಿಂದುಳಿದ ವರ್ಗಗಳನ್ನು ಪಕ್ಷದತ್ತ ಸೆಳೆಯುವಲ್ಲಿ ಸಕ್ರಿಯರಾಗಿದ್ದಾರೆ. ಸಂಘಟನಾ ಶಕ್ತಿ ಮತ್ತು ನಿಷ್ಠೆಯನ್ನು ಪರಿಗಣಿಸಿ ಹೈಕಮಾಂಡ್ ಇವರಿಬ್ಬರಿಗೆ ಮೇಲ್ಮನೆ ಟಿಕೆಟ್ ನೀಡಿದೆ.

ಜೂನ್ 18 ರಂದು 10 ರಾಜ್ಯಗಳಲ್ಲಿ ಚುನಾವಣೆ

ರಾಜ್ಯಸಭೆ ಚುನಾವಣೆಗೆ ಬಿಜೆಪಿ ಈಗಾಗಲೇ ಜೂನ್ 4 ರಂದು ಮೊದಲ ಪಟ್ಟಿ ಬಿಡುಗಡೆ ಮಾಡಿ 11 ಅಭ್ಯರ್ಥಿಗಳನ್ನು ಘೋಷಿಸಿತ್ತು. ಗುಜರಾತ್‌ನಿಂದ ರಾಜುಭಾಯಿ ಶುಕ್ಲಾ, ಮುಖೇಶ್ ಭಾಯಿ ರಾಠ್ವಾ, ಅರುಣಾಚಲ ಪ್ರದೇಶದಿಂದ ತಾಯಿ ತಾಗಕ್ ಹಾಗೂ ಮಣಿಪುರದಿಂದ ಎ. ಶಾರದಾ ದೇವಿ ಕಣಕ್ಕಿಳಿದಿದ್ದಾರೆ. ಮಧ್ಯಪ್ರದೇಶದಿಂದ ಮಹೇಶ್ ಕೇವತ್ ಹಾಗೂ ತರುಣ್ ಚುಗ್ ಸೇರಿದಂತೆ ಹಲವು ರಾಜ್ಯಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಒಟ್ಟು 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18 ರಂದು ಮತದಾನ ನಡೆಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:49 am, Mon, 8 June 26

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us