ರಾಮನಗರ: ಕಲುಷಿತಗೊಂಡ ಅರ್ಕಾವತಿ ನದಿ ಪುನಶ್ಚೇತನಕ್ಕೆ ಸಾರ್ವಜನಿಕರ ಆಗ್ರಹ
ಅರ್ಕಾವತಿ ನದಿ ರಾಮನಗರ ಜಿಲ್ಲೆಯ ಜನರ ಜೀವನಾಡಿಯಾಗಿದೆ. ಕೆಲ ವರ್ಷಗಳ ಕೆಳಗೆ ಈ ನದಿಯ ನೀರನ್ನು ಬಳಸಿಕೊಂಡು ರೈತರು ವ್ಯವಸಾಯ ಮಾಡುತ್ತಿದ್ದರು. ಆದರೆ, ಇತ್ತೀಚಿಗೆ ನದಿಯ ಸ್ವರೂಪವೇ ಬದಲಾಗಿದೆ. ಅರ್ಕಾವತಿ ನದಿ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಹೀಗಾಗಿ, ನದಿ ಶುದ್ಧೀಕರಣ ಮಾಡಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.

ರಾಮನಗರ, ಜೂನ್ 07: ರೇಷ್ಮನಗರಿ ರಾಮನಗರ (Ramnagar) ಜಿಲ್ಲೆಯ ಜನರ ಜೀವನಾಡಿ ಅರ್ಕಾವತಿ ನದಿ (Arkavati River) ಸಂಪೂರ್ಣವಾಗಿ ಕಲುಷಿತಗೊಂಡಿದೆ. ಇದೀಗ ನದಿಯನ್ನ ಶುದ್ಧೀಕರಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಒಂದು ಕಾಲದಲ್ಲಿ ಆರ್ಕಾವತಿ ನದಿ ರಾಮನಗರ ಜಿಲ್ಲೆ ಜನರ ಜೀವನಾಡಿ ಆಗಿತ್ತು. ಆದರೆ, ನಗರಿಕರಣದ ಪ್ರಭಾವದಿಂದಾಗಿ ಇದೀಗ ನದಿ ಸಂಪೂರ್ಣವಾಗಿ ಕಲುಷಿತಗೊಂಡಿದೆ.
ಇಡೀ ರಾಮನಗರ ನಗರದ ಚರಂಡಿ ಹಾಗೂ ಒಳಚರಂಡಿ ನೀರನ್ನು ಅರ್ಕಾವತಿ ನದಿಗೆ ಬಿಡಲಾಗುತ್ತಿದೆ. ಜೊತೆಗೆ ಕೆಲ ತಾಜ್ಯವನ್ನು ಸಹ ನದಿಗೆ ಎಸೆಯಲಾಗುತ್ತಿದೆ. ಹೀಗಾಗಿ ಅರ್ಕಾವತಿ ನದಿ ಸಂಪೂರ್ಣವಾಗಿ ಕಲುಷಿತಗೊಂಡು ತನ್ನ ಸ್ವರೂಪವನ್ನೇ ಕಳೆದುಕೊಂಡಿದೆ. ಇದು ಸ್ಥಳೀಯರ ಆಕ್ರೋಶಕ್ಕೂ ಕೂಡ ಕಾರಣವಾಗಿದೆ. ಆದ್ದರಿಂದ, ಸಂಬಂಧಪಟ್ಟವರು ನದಿಯನ್ನು ಉಳಿಸುವ ಕೆಲಸ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಉಗಮಿಸುವ ಆರ್ಕಾವತಿ ನದಿ ರಾಮನಗರ ನಗರದಲ್ಲಿ ಸುಮಾರು ಏಳು ಕಿಲೋ ಮೀಟರ್ ಹರಿದು ಹೋಗುತ್ತದೆ. ಕೆಲ ವರ್ಷಗಳ ಕೆಳಗೆ ಇದೇ ನದಿ ನೀರನ್ನು ಕುಡಿಯಲು ಸಹ ಜನರು ಬಳಸುತ್ತಿದ್ದರು. ಅಲ್ಲದೇ ಸಾವಿರಾರು ರೈತರಿಗೆ ಜೀವನಾಡಿಯಾಗಿತ್ತು. ಅರ್ಕಾವತಿ ನದಿಯ ನೀರನ್ನೇ ಬಳಸಿಕೊಂಡು ವ್ಯವಸಾಯ ಕೂಡ ಮಾಡುತ್ತಿದ್ದರು. ಆದರೆ, ಇದೀಗ ನದಿಯ ನೀರಿನಲ್ಲಿ ಕಾಲಿಟ್ಟರೇ ಕಾಲಿಗೆ ಗಾಯವಾಗುವ ಸಂಭವ ಇದೆ. ಇನ್ನು ನದಿಯಲ್ಲಿ ಜೊಂಡು ಹುಲ್ಲು ಬೆಳೆದುಕೊಂಡಿದೆ. ನದಿಯ ಅಕ್ಕಪಕ್ಕದಲ್ಲಿ ಸಾವಿರ ಮನೆಗಳು ಇದ್ದು, ಪ್ರತಿನಿತ್ಯ ಭಯದಲ್ಲಿಯೇ ಮನೆಯವರು ಕಾಲ ಕಳೆಯುವಂತಾಗಿದೆ. ಆದ್ದರಿಂದ ನದಿಗೆ ಪುನಶ್ಚೇತನ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ವೈಜಿ ಗುಡ್ಡ ಜಲಾಶಯದಲ್ಲಿ ಬೆಂಗಳೂರಿನ ಮೂವರು ಯುವತಿಯರು ಜಲಸಮಾಧಿ
ಒಟ್ಟಾರೆಯಾಗಿ ಕೆಲ ವರ್ಷಗಳ ಕೆಳಗೆ ಸಾವಿರಾರು ರೈತರ ಜೀವನಾಡಿಯಾಗಿದ್ದ ಅರ್ಕಾವತಿ ನದಿ ಇಂದು ಸಂಪೂರ್ಣವಾಗಿ ಕಲುಷಿತಗೊಂಡು ತನ್ನ ಸ್ವರೂಪವನ್ನೇ ಕಳೆದುಕೊಂಡಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ನದಿಗೆ ಕಾಯಕಲ್ಪ ನೀಡಿ, ನದಿಯನ್ನು ಉಳಿಸುವ ಕೆಲಸ ಮಾಡಬೇಕಿದೆ.







