ರಾಮನಗರ, (ಜೂನ್ 19): ಲೋಕಸಭೆ ಚುನಾವಣೆ (Loksabha Election 2024) ಫಲಿತಾಂಶ ಬಂದು ಹೆಚ್ಚು ಕಾಲ ಕಳೆದಿಲ್ಲ, ಅದರ ಬೆನ್ನಲ್ಲೇ ರಾಮನಗರದಲ್ಲಿ (Ramanagar) ಮತ್ತೆ ರಾಜಕೀಯ ಚುಟವಟಿಕೆ ಬಿರುಸು ಪಡೆದುಕೊಂಡಿವೆ. ಕಾರಣ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ (HD Kumaraswamy) ಅವರ ರಾಜೀನಾಮೆ ಸಲ್ಲಿಸಿದ ಪರಿಣಾಮ ಬೊಂಬೆನಾಡು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಬೈ ಎಲೆಕ್ಷನ್ ಎದುರಾಗಿದೆ. ಎಚ್ಡಿಕೆ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ಕ್ಷೇತ್ರವನ್ನ ಕಾಂಗ್ರೆಸ್ ವಶಕ್ಕೆ ಪಡೆದುಕೊಳ್ಳಲು ಡಿಕೆ ಬ್ರದರ್ಸ್ ಅಖಾಡಕ್ಕೆ ಧುಮುಕಿದ್ದಾರೆ. ಈ ಮೂಲಕ ಲೋಕಸಭೆಯಲ್ಲಾದ ಹೀನಾಯ ಸೋಲಿನ ಸೇಡನ್ನು ಬೈ ಎಲೆಕ್ಷನ್ನಲ್ಲಿ ತೀರಿಸಿಕೊಳ್ಳಲು ಮುಂದಾದಂತಿದೆ. ಹೀಗಾಗಿ ಇಂದು ಚನ್ನಪಟ್ಟಣಕ್ಕೆ ಭೇಟಿ ಕೊಟ್ಟಿದ್ದ ಡಿಸಿಎಂ ಡಿಕೆ ಶಿವಕುಮಾರ್ ಹತ್ತಕ್ಕೂ ಹೆಚ್ಚು ದೇವಾಲಯಗಳ ದರ್ಶನ ಪಡೆದು ಕ್ಷೇತ್ರದ ಮತದಾರರ ಜೊತೆ ಮಾತುಕತೆ ನಡೆಸಿದ್ದಾರೆ. ಥೇಟ್ ಚುನಾವಣೆ ಪ್ರಚಾರ ನಡೆಸುವಂತೆ ತೆರೆದ ಜೀಪಿನಲ್ಲಿ ನಿಂತು ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಹೊಸ ರಾಜಕೀಯ ಅಧ್ಯಾಯ ಶುರು ಮಾಡೋದಾಗಿ ದೇವರ ಸನ್ನಿಧಿಯಲ್ಲಿ ಮತದಾರರಿಗೆ ಮಾತು ಕೊಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಸಿಕ್ಕ ಅತಿದೊಡ್ಡ ಸೋಲಿನಲ್ಲೂ ಪಾಸಿಟಿವ್ ಅಂಶವನ್ನು ಮನಗಂಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಚನ್ನಪಟ್ಟಣ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಕೇವಲ 15 ಸಾವಿರ ಮತಗಳು ಬಂದಿದ್ದವು. ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಡಿಕೆ ಸುರೇಸ್ ಪಡೆದುಕೊಂಡ 85 ಸಾವಿರ ಮತಗಳು ಒಂದು ಲೆಕ್ಕದಲ್ಲಿ ಕಾಂಗ್ರೆಸ್ ಗೆ ಗೆಲುವಿನ ವಿಶ್ವಾಸ ಮೂಡಿಸಿವೆ. ಅಲ್ಲದೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಹಳೇ ನಂಟಿದ್ದು ಇಲ್ಲಿನ ಜನ ನನ್ನ ಮಾತಿಗೆ ಹಾಗೂ ನನ್ನ ಮುಖ ಬೆಲೆ ಕೊಡ್ತಾರೆ ಎಂದು ಡಿಕೆ ಶಿವಕುಮಾರ್ ಗುಡುಗಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಚುನಾವಣೆ ಕಾವು: ಉಪ ಚುನಾವಣೆಗಳಿಗೆ ಉಸ್ತುವಾರಿ ಸಮಿತಿ ರಚಿಸಿದ ಕಾಂಗ್ರೆಸ್
ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆ ಸೋಲಿನ ಬಳಿಕ ಮೊದಲ ಬಾರಿಗೆ ಭೇಟಿ ನೀಡಿದ್ದ ಡಿಸಿಎಂ ಡಿ ಕೆ ಶಿವಕುಮಾರ್, ಸೋಲಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಚನ್ನಪಟ್ಟಣ ಗೆಲುವಿಗಾಗಿ ಈಗಲೇ ಗೆರೆ ಎಳೆದಿದ್ದು ಎದುರಾಳಿಗಳಿಗೆ ಸ್ಪಷ್ಡಸಂದೇಶ ರವಾನೆ ಮಾಡಿದ್ದಾರೆ. ಕನಕಪುರ ತಮ್ಮನಿಗೆ ಬಿಟ್ಟು ಕೊಟ್ಟು ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಿಂದ ಗೆದ್ದರೆ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಪಟ್ಟ ಸಿಗಲಿದೆ ಎಂದಯ ದೊಡ್ಡ ಮಟ್ಟದ ಚರ್ಚೆ ನಡೆದಿದೆ. ಯಾಕಂದ್ರೆ ಚನ್ನಪಟ್ಟಣದಲ್ಲಿ ಗೆದ್ದರೆ ಅಂಥವರಿಗೆ ಸಿಎಂ ಪಟ್ಟ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಹೀಗಾಗಿ ಡಿಕೆ ಶಿವಕುಮಾರ್ ಅವರೇ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಈಗಾಗಲೇ ತಯಾರಿ ನಡೆಸಿದ್ದಾರೆ.
ಇನ್ನು ಚನ್ನಪಟ್ಟಣದಲ್ಲಿ ಕೆಡಿಪಿ ಸಭೆ ನಡೆಸಿದ ಡಿಕೆ ಶಿವಕುಮಾರ್ ಕ್ಷೇತ್ರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಶುರುವಾಗುತ್ತೆ. ಹಿಂದೆಯೂ ನಾನು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಮೊನ್ನೆ ನಾವು ಇಲ್ಲಿ ಸೋತರೂ ಜನಾಶೀರ್ವಾದ ಸಿಕ್ಕಿದೆ. ಚನ್ನಪಟ್ಟಣದಲ್ಲಿ ಪ್ರತಿದಿನ ಮೂರು ಸಭೆಗಳನ್ನು ನಡೆಸುತ್ತೇನೆ. ನಿತ್ಯ ಮೂರು ಪಂಚಾಯಿತಿ ಅಧಿಕಾರಿಗಳ ಸಭೆ ಮಾಡುತ್ತೇನೆ. ಮನೆ, ಸೈಟ್, ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯುವೆ . ಉಸ್ತುವಾರಿ ಸಚಿವರ ಜೊತೆಗೂ ಮೀಟಿಂಗ್ ನಡೆಸುತ್ತೇನೆ. ಕೆಲವು ಕಡೆ ಸ್ಮಶಾನ ಇಲ್ಲ, ಸಮುದಾಯ ಭವನ ಇಲ್ಲ ಅಂತಾರೆ. ಮುನ್ಸಿಪಾಲಿಟಿ ವ್ಯಾಪ್ತಿಯಲ್ಲೂ ಜನಸಾಮಾನ್ಯರ ಅಹವಾಲು ಸ್ವೀಕಾರ ಮಾಡುತ್ತೇನೆ ಎಂದರು.
ಚನ್ನಪಟ್ಟಣದಲ್ಲಿ ಕೇವಲ ಒಂದು ದಿನ ಸಭೆ ಮಾಡಿದ್ರೆ ಸಾಕಾಗಲ್ಲ. ಯಾಕೆಂದ್ರೆ ಇಷ್ಟು ದಿನ ಒಂದು ಕೆಡಿಪಿ ಮೀಟಿಂಗ್ ಸಹ ಆಗಿಲ್ಲ. ಇಂದು ಅಧಿಕಾರಿಗಳ ಸಭೆ ನಡೆಸಿದ್ದೇನೆ. ಆಶ್ರಯ ಯೋಜನೆಯಡಿ ಬಡವರಿಗೆ ಮನೆಗಳನ್ನು ಹಂಚಿಕೆ ಮಾಡಿಲ್ಲ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅನಾನುಕೂಲ ಇದೆ. ಇನ್ಮುಂದೆ ಪ್ರತಿ ಗ್ರಾಮ ಪಂಚಾಯಿತಿಗೆ ನಾನು ಭೇಟಿ ನೀಡುತ್ತೇನೆ. ಒಂದು ದಿನಕ್ಕೆ 3 ಗ್ರಾ.ಪಂ.ಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುತ್ತೇವೆ. ಕ್ಷೇತ್ರದ ಪ್ರತಿ ಮನೆಬಾಗಿಲಿಗೂ ಸರ್ಕಾರದ ಯೋಜನೆ ತಲುಪಬೇಕು. ಎಲ್ಲರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿ ಬದಲಾವಣೆ ತರುತ್ತೇವೆ. ವಿಶೇಷ ಅನುದಾನ ಕೊಡಬೇಕು, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಚನ್ನಪಟ್ಟಣದಲ್ಲಿ ಎಚ್ಡಿ ಕುಮಾರಸ್ವಾಮಿ ಅಭಿವೃದ್ಧಿ ಮಾಡಿರಲಿಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡಲ್ಲ. ಹಿಂದಿನದ್ದು ಮುಗಿದ ಅಧ್ಯಾಯ, ಈಗ ಹೊಸ ಅಧ್ಯಾಯ ಎಂದರು.
ಒಟ್ಟಿನಲ್ಲಿ ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ಈಗಿನಿಂದಲೇ ಸಿದ್ಧತೆ ನಡೆಸಿದ್ದು, ಡಿಕೆ ಶಿವಕುಮಾರ್ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಈ ಮೂಲಕ ಲೋಕಸಭೆ ಸೋಲಿನ ಸೇಡು ಬೈ ಎಲೆಕ್ಷನ್ನಲ್ಲಿ ತೀರಿಸಿಕೊಳ್ಳಲು ಡಿಕೆ ಬ್ರದರ್ಸ್ ಅಖಾಡಕ್ಕೆ ಧುಮುಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.