Bengaluru-Mysore Expressway: ಹೆಚ್ಚುತ್ತಿರುವ ಅಪಘಾತ ಪ್ರಕರಣಗಳು, ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ
ಬೆಂಗಳೂರು-ಮೈಸೂರು ಎಕ್ಸಪ್ರೆಸ್ವೇನಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಎಡಿಜಿಪಿ ಅಲೋಕ್ ಕುಮಾರ್ ಅವರು ಬೆಂಗಳೂರು ದಕ್ಷಿಣ ತಾಲೂಕಿನ ಬಾಬಾಸಾಹೇಬರ ಪಾಳ್ಯ ಬಳಿ ಹೈವೇಯನ್ನು ಪರಿಶೀಲಿಸಿದ್ದಾರೆ.
ರಾಮನಗರ: ಬೆಂಗಳೂರು-ಮೈಸೂರು ಎಕ್ಸಪ್ರೆಸ್ವೇನಲ್ಲಿ (Bengaluru-Mysore Expressway) ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಅವರು ಬೆಂಗಳೂರು ದಕ್ಷಿಣ ತಾಲೂಕಿನ ಬಾಬಾಸಾಹೇಬರ ಪಾಳ್ಯ ಬಳಿ ಹೈವೇಯನ್ನು ಪರಿಶೀಲಿಸಿದ್ದಾರೆ. ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಎನ್ಹೆಚ್ಎಐ (NHAI), ಪಿಡಬ್ಲೂ, ಆರ್ಟಿಓ, ಆರೋಗ್ಯ ಅಧಿಕಾರಿಗಳು, ಐಜಿಪಿ ರವಿಕಾಂತೇಗೌಡ ಹಾಗೂ ಎಸ್ಪಿ ಕಾರ್ತಿಕ್ ರೆಡ್ಡಿ ಸಾಥ್ ನೀಡಿದ್ದಾರೆ. ಪರಿಶೀಲನೆ ಬಳಿಕ ಅಧಿಕಾರಿಗಳ ಜೊತೆ ರಾಮನಗರದಲ್ಲಿ ಅಲೋಕ್ ಕುಮಾರ್ ಸಭೆ ನಡೆಸಲಿದ್ದಾರೆ. ಇತ್ತೀಚೆಗೆ ಹೆದ್ದಾರಿಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿತ್ತು. ಐದು ತಿಂಗಳಲ್ಲಿ 105 ಜನ ಸಾವನ್ನಪ್ಪಿದ್ದು, 250 ಅಪಘಾತ ಪ್ರಕರಣ ದಾಖಲಾಗಿವೆ.
ಅಪಘಾತಕ್ಕೆ ಕಾರಣಗಳ ಕುರಿತು ಎನ್ಹೆಚ್ಎಐಗೆ ವರದಿ ಸಲ್ಲಿಸಿದ 2 ಜಿಲ್ಲಾಡಳಿತ
ರಾಜ್ಯದ ಮೊದಲ ಎಕ್ಸಪ್ರೆಸ್ವೇ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಮೂರು ತಿಂಗಳಲ್ಲಿ ಅಪಘಾತದಿಂದ ಸಾವನ್ನಪ್ಪಿರುವ ಸಂಖ್ಯೆ ನೂರರ ಗಡಿ ದಾಟಿದೆ. ಮತ್ತು ಒಟ್ಟು ಗಾಯಗೊಂಡವರ ಸಂಖ್ಯೆ 350 ದಾಟಿದೆ. ಬಹುತೇಕ ಅಪಘಾತಗಳು ರಾಮನಗರ ಮತ್ತು ಮಂಡ್ಯ ಜಿಲ್ಲಾಡಳಿತ ವ್ಯಾಪ್ತಿಯ 117 ಕಿಮೀ ಉದ್ದದ ರಸ್ತೆಯಲ್ಲಿ ನಡೆದಿವೆ. ಈ ಹಿನ್ನೆಲೆ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಎರಡು ಜಿಲ್ಲಾಡಳಿತ ಅಪಘಾತಕ್ಕೆ ಕಾರಣವಾದ ಅಂಶಗಳನ್ನು ಅಧ್ಯಯನ ಮಾಡಿ ವಿವರವಾಗಿ ವಿಶ್ಲೇಷಣೆಯೊಂದಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿವೆ. ಅಲ್ಲದೇ ಅಪಘಾತ ತಪ್ಪಿಸುವ ಬಗ್ಗೆಯೂ ಕೆಲವೊಂದು ಸಲಹೆ ನೀಡಿತ್ತು.
ಪ್ರತಿದಿನ ಸರಾಸರಿ 56,000 ವಾಹನಗಳು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುತ್ತವೆ. ಈ ಹೆದ್ದಾರಿ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಸುಮಾರು 75 ನಿಮಿಷಗಳಿಗೆ ಇಳಿಸಿದೆ. ನೆರೆಯ ತಮಿಳುನಾಡು ಮತ್ತು ಕೇರಳಕ್ಕೆ ಪ್ರಮುಖ ಸಂಪರ್ಕ ರಸ್ತೆಯಾಗಿ ಕಾರ್ಯನಿರ್ವಹಿಸುತ್ತಿದೆ.
ರಾಮನಗರ ಮತ್ತು ಮಂಡ್ಯ ಜಿಲ್ಲೆಯ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಹೆದ್ದಾರಿಯಲ್ಲಿ 79 ಮಾರಣಾಂತಿಕ ಅಪಘಾತಗಳು ಮತ್ತು 226 ಮಾರಣಾಂತಿಕವಲ್ಲದ ಅಪಘಾತಗಳು ಸಂಭವಿಸಿದ್ದು, 94 ಮಂದಿ ಸಾವನ್ನಪ್ಪಿದ್ದಾರೆ ಮತ್ತು 353 ಜನರಿಗೆ ಗಾಯಗಳಾಗಿದ್ದವು.
ಎಕ್ಸ್‌ಪ್ರೆಸ್‌ವೇಯ ಸ್ವಲ್ಪ ಭಾಗವು ಮೈಸೂರು ಸಿಟಿ ಪೊಲೀಸ್ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲಿ ನಾಲ್ಕು ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು ಐವರು ಸಾವನ್ನಪ್ಪಿದ್ದಾರೆ. ಈ ಎಕ್ಸಪ್ರೆಸ್ವೇಯಲ್ಲಿ ಸಂಭವಿಸುವ ಅಪಘಾತಗಳಿಗೆ ಕಾರಣ ಅತಿ ವೇಗ ಮತ್ತು ಅಜಾಗರೂಕ ಚಾಲನೆ ಎಂದು ಪೊಲೀಸರು ಉಲ್ಲೇಖಿಸಿದ್ದರು.
ಸ್ಥಳ ಪರಿಶೀಲನೆಯ ಸಮಯದಲ್ಲಿ, ಸ್ಕೈವಾಕ್‌ಗಳ ಕೊರತೆ, ರಸ್ತೆಯಲ್ಲಿ ನೀರು ನಿಲ್ಲುವುದು, ಸರ್ವಿಸ್ ರಸ್ತೆಗಳಿಂದ ಮುಖ್ಯರಸ್ತೆಗೆ ಸಂಪರ್ಕಿಸುವಾಗ ರಸ್ತೆ ಫಲಕಗಳ ಕೊರತೆ, ಫ್ಲೈಓವರ್‌ಗಳ ಅಡಿಯಲ್ಲಿ ಬೀದಿ ದೀಪಗಳ ಕೊರತೆಯಿಂದ ರಸ್ತೆ ಬಳಕೆದಾರರ ಜೀವಕ್ಕೆ ಅಪಾಯವನ್ನುಂಟಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Tue, 27 June 23