Bengaluru News: ಬಿಟ್ ಕಾಯಿನ್ ಬಹುಕೋಟಿ ಅಕ್ರಮ ವ್ಯವಹಾರ ಪ್ರಕರಣ: ಮರು ತನಿಖೆ ನಡೆಸುವಂತೆ ಸಿಐಡಿಗೆ ಪತ್ರ ಬರೆದ ನಗರ ಪೊಲೀಸ್ ಕಮಿಷನರ್ ದಯಾನಂದ್
ರಾಜ್ಯದಲ್ಲಿ ಬಿಟ್ ಕಾಯಿನ್ ಬಹುಕೋಟಿ ಅಕ್ರಮ ವ್ಯವಹಾರ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಕೋರಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರು ಸಿಐಡಿ ಡಿಜಿಪಿ ಎಂ.ಎ.ಸಲೀಂ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು: ಕಳೆದ ವರ್ಷ ರಾಜ್ಯದಲ್ಲಿ ಬಿಟ್ ಕಾಯಿನ್ (Bitcoin) ಬಹುಕೋಟಿ ಅಕ್ರಮ ವ್ಯವಹಾರ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಕೋರಿ ಬೆಂಗಳೂರು ನಗರ ಪೊಲೀಸ್ (Bengaluru City Police) ಕಮಿಷನರ್ ದಯಾನಂದ್ (Commissioner Dayanand) ಅವರು ಸಿಐಡಿ (CID) ಡಿಜಿಪಿ ಎಂ.ಎ.ಸಲೀಂ (MA Salim) ಅವರಿಗೆ ಪತ್ರ ಬರೆದಿದ್ದಾರೆ. 2020ರಲ್ಲಿ ಬಿಟ್ ಕಾಯಿನ್ ಹಗರಣ ಸಂಬಂಧ ಬೆಂಗಳೂರಿನ ಕಾಟನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ವಿಶೇಷ ತಂಡ ರಚಿಸಿ ಹೆಚ್ಚಿನ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ.
ಈ ಹಿಂದೆ ಸಿಸಿಬಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26) ಬಂಧಿಸಿದ್ದರು. ಆರೋಪಿ ರಾಜ್ಯ ಸರ್ಕಾರದ ಇ-ಸಂಗ್ರಹಣಾ ಪೋರ್ಟಲ್ (https://eproc.karnataka.gov.in) ಜಾಲತಾಣ ಹ್ಯಾಕ್ ಮಾಡಿ 46 ಕೋಟಿ ದೋಚಿದ್ದ ಸಂಗತಿ ಪತ್ತೆ ಮಾಡಿದ್ದರು. ಜೊತೆಗೆ, ಶ್ರೀಕಿ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ್ದ ಬಿಟ್ ಕಾಯಿನ್ ಪ್ರಕರಣಗಳು ಹೊರಬಂದಿದ್ದವು. ಆದರೆ, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಿರಲಿಲ್ಲ. ಸಿಸಿಬಿ ಪೊಲೀಸರು ತರಾತುರಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ನಡೆ ಹಲವು ಅನುಮಾನಕ್ಕೆ ಕಾರಣವಾಗಿತ್ತು. ಇದೀಗ, ಪೊಲೀಸ್ ಕಮಿಷನರ್ ತನಿಖೆ ಮುಂದುವರಿಸಲು ಆಸಕ್ತಿ ತೋರಿಸಿದ್ದು, ಗೃಹ ಸಚಿವರ ಸೂಚನೆ ಮೇರೆಗೆ ತನಿಖೆಗೆ ನಡೆಸಲು ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಜನರ ಸುರಕ್ಷತೆಗಾಗಿ ಬಂದಿದೆ ಸೇಫ್ಟಿ ಐಲ್ಯಾಂಡ್, ಏನಿದರ ವಿಶೇಷತೆ ಇಲ್ಲಿದೆ ಮಾಹಿತಿ
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಬಿಟ್ ಕಾಯಿನ್ ವ್ಯವಹಾರವನ್ನು ಮರು ತನಿಖೆ ನಡೆಸುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ಇತ್ತೀಚೆಗಷ್ಟೆ ಹೇಳಿದ್ದರು. ಜೊತೆಗೆ, ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲೂ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಇದರ ಬೆನ್ನಲ್ಲೇ ಕಮಿಷನರ್ ದಯಾನಂದ್ ಅವರು ಸಿಐಡಿಯ ಡಿಜಿಪಿಗೆ ಪತ್ರ ಬರೆದಿದ್ದು, ಸದ್ಯದಲ್ಲೇ ಪ್ರಕರಣದ ಮರು ತನಿಖೆ ಆರಂಭವಾಗಲಿದೆ.
ಬಿಟ್ ಕಾಯಿನ್ ಹಗರಣ ಬಗ್ಗೆ ಮರುತನಿಖೆ ನಡೆಸುವ ವಿಚಾರ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾತನಾಡಿ ಕಾಟನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂತಾರಾಷ್ಟ್ರೀಯ ಜಾಲ ಇರುವ ಸಂಶಯವಿದೆ. ಹಾಗಾಗಿ ಹೆಚ್ಚಿನ ತನಿಖೆಗೆ ಆಗಬೇಕು ಎಂಬ ಅಭಿಪ್ರಾಯ ಇತ್ತು. ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶ ನೀಡಲಾಗಿದೆ ಎಂದರು.
ಅಶೋಕನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಶ್ರೀಕಾಂತ್ ತೋಟಗಿ ಅಮಾನತು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು 10 ದಿನದ ಹಿಂದೆ ಸಿಸಿಬಿ ಪೊಲೀಸರು ಪಬ್ ಮೇಲೆ ದಾಳಿ ಮಾಡಿದ್ದರು. ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆದಿತ್ತು. ಪಬ್ ನಲ್ಲಿ ಅನೈತಿಕ ಚಟುವಟಿಕೆ ಕಂಡುಬಂದಿತ್ತು. ಸ್ಥಳೀಯ ಅಧಿಕಾರಿಗಳ ಲೋಪ ಕಂಡುಬಂದಿತ್ತು. ಹಾಗಾಗಿ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ಬಿಟ್ ಕಾಯಿನ್ ಪ್ರಕರಣದ ಸಂಪೂರ್ಣ ತನಿಖೆ ನಡೆಸುತ್ತೇವೆ: ಪರಮೇಶ್ವರ
ಬಿಟ್ ಕಾಯಿನ್ ಪ್ರಕರಣದ ಸಂಪೂರ್ಣ ತನಿಖೆ ನಡೆಸುತ್ತೇವೆ. ವಿರೋಧ ಪಕ್ಷದಲ್ಲಿದ್ದಾಗ ತನಿಖೆ ನಡೆಸುವ ಬಗ್ಗೆ ಹೇಳಿದ್ದೇವು. ಬಿಟ್ ಕಾಯಿನ್ ಪ್ರಕರಣದ ತನಿಖೆಗಾಗಿ ಡಿಜಿಪಿ ಅವರಿಗೆ ಸೂಚನೆ ನೀಡಲಾಗಿದೆ. ಸಿಐಡಿ ಅಥವಾ ಬೇರೆ ಏಜೆನ್ಸಿಗೆ ಕೊಡಬೇಕು ಎಂಬುವುದರ ಬಗ್ಗೆ ಚರ್ಚೆ ಮಾಡುತ್ತೇವೆ. ತನಿಖೆ ನಡೆಸಲು ಸಿಐಡಿ ಅಧಿಕಾರಿಗಳು ಸಮರ್ಥರಾಗಿದ್ದಾರೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುಳ್ಳು ಸುದ್ದಿಗಳ ತಡೆಗೆ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ತಂತ್ರಜ್ಞಾನ ಬಳಸಿಕೊಂಡು ತಡೆಗೆ ಕ್ರಮಕೈಗೊಳ್ಳಲಾಗುವುದು. ಯಾರು ಪೋಸ್ಟ್ ಮಾಡುತ್ತಾರೆ, ಮೂಲ ಯಾವುದು, ಯಾರು, ಏನು ಎಂಬುದನ್ನ ಅರಿಯಲಾಗುವುದು. ಇದನ್ನ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಸೂಕ್ತವಾದ ಕಾನೂನನ್ನೂ ತರುತ್ತೇವೆ. ರಾಜ್ಯದಲ್ಲಿ ಸುಳ್ಳು ಸುದ್ದಿ ಹರಡಲು ಕೆಲವರು ನಿರತರಾಗಿದ್ದಾರೆ. ಸಮಾಜದ ಸ್ವಾಸ್ಥ್ಯ ಕದಡಲು ಸುಳ್ಳು ಸುದ್ದಿ ಹರಡಲಾಗುತ್ತಿದೆ. ಬೇರೆ ಬೇರೆ ವೇದಿಕೆಗಳಲ್ಲಿ ಹರಡಲಾಗುತ್ತಿದೆ. ಸಾಮಾಜಿಕ ಜಾಲರಾಣದಲ್ಲಿ ಹೆಚ್ಚಾಗಿ ಹರಡಲಾಗುತ್ತಿದೆ. ಭಾವಚಿತ್ರ, ವಿಡಿಯೋವನ್ನ ತಮಗೆ ಬೇಕಾದಂತೆ ಬದಲಾಯಿಸಿ ಬಿಂಬಿಸಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಇದನ್ನ ನೋಡಿದ್ದೇವೆ. ಈಗಲೂ ಸರ್ಕಾರ ರಚನೆಯಾದ ಬಳಿಕವೂ ಗಮನಿಸಿದ್ದೇವೆ. ಇದನ್ನ ನಿಲ್ಲಿಸದೇ ಹೋದರೆ ವ್ಯಕ್ತಿಗತ, ಸರ್ಕಾರ ಇಲ್ಲವೇ ಸಮಾಜದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:24 pm, Tue, 27 June 23