ಜಪಾನ್ ಮಾದರಿ ಕರ್ನಾಟಕದಲ್ಲಿ ಜಾರಿ: ಹಾರೋಹಳ್ಳಿಯಲ್ಲಿ 600 ಜನರಿಗೆ ಉದ್ಯೋಗ ಸೃಷ್ಟಿಗೆ ಒಪ್ಪಂದ

ರಾಮನಗರ ಜಿಲ್ಲೆಯ ಕನಕಪುರದ ಮುನ್ಸಿಪಲ್ ಮೈದಾನದಲ್ಲಿ ಪರಿಶಿಷ್ಟ ಜಾತಿಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಕೃತಜ್ಞತಾ ಹಾಗೂ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್​, ಜಪಾನ್​ನ ಉತ್ತಮ ವ್ಯವಸ್ಥೆಯನ್ನ ನಮ್ಮ ರಾಜ್ಯದಲ್ಲಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಪರೋಕ್ಷವಾಗಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

ಜಪಾನ್ ಮಾದರಿ ಕರ್ನಾಟಕದಲ್ಲಿ ಜಾರಿ: ಹಾರೋಹಳ್ಳಿಯಲ್ಲಿ 600 ಜನರಿಗೆ ಉದ್ಯೋಗ ಸೃಷ್ಟಿಗೆ ಒಪ್ಪಂದ
ಡಿಕೆ ಶಿವಕುಮಾರ್​
Edited By:

Updated on: Nov 28, 2026 | 4:01 PM

ಮುಖ್ಯಾಂಶಗಳು

  • ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರದಲ್ಲಿ ಅಭಿನಂದನಾ ಸಮಾರಂಭ
  • ಬಡವರಿಗೆ 30X40 ಸೈಟ್ ಕೊಡಲು ತೀರ್ಮಾನಿಸಿದ್ದೇವೆ ಎಂದ ಸಿಎಂ
  • ಜಪಾನ್​ನ ಉತ್ತಮ ವ್ಯವಸ್ಥೆ ನಮ್ಮ ರಾಜ್ಯದಲ್ಲಿ ಅನುಷ್ಠಾನಕ್ಕೆ ಕ್ರಮ

ರಾಮನಗರ, ನವೆಂಬರ್​​ 28: ‘ಜಪಾನ್​ನ ಉತ್ತಮ ವ್ಯವಸ್ಥೆ ನಮ್ಮ ರಾಜ್ಯದಲ್ಲಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿದೆ. ಜಪಾನ್ ಪ್ರವಾಸದ ವೇಳೆ ಕವಾಸಕಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹಾರೋಹಳ್ಳಿಯಲ್ಲಿ ಸುಮಾರು 600 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯದಲ್ಲಿ ಟೊಯೋಟಾ ಘಟಕದ ವಿಸ್ತರಣೆಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಹೈಬ್ರಿಡ್ ಟ್ಯಾಕ್ಸಿ ಕಾರುಗಳ ಉತ್ಪಾದನೆಗೂ ಆಹ್ವಾನ ನೀಡಿದ್ದೇವೆ’ ಎಂದು ಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ.

ಜಪಾನ್ ಮಾದರಿ ವ್ಯವಸ್ಥೆ ಕರ್ನಾಟಕದಲ್ಲಿ ಅನುಷ್ಠಾನಕ್ಕೆ ಕ್ರಮ

ರಾಮನಗರ ಜಿಲ್ಲೆಯ ಕನಕಪುರದ ಮುನ್ಸಿಪಲ್ ಮೈದಾನದಲ್ಲಿ ಪರಿಶಿಷ್ಟ ಜಾತಿಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಕೃತಜ್ಞತಾ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್​, ‘ಜಪಾನ್‌ನ ನಗರ ಸಾರಿಗೆ, ಕಸ ವಿಲೇವಾರಿ, ನಗರಾಭಿವೃದ್ಧಿ, ಕೈಗಾರಿಕೆ ಹಾಗೂ ಮೂಲಸೌಕರ್ಯ ವ್ಯವಸ್ಥೆಗಳನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನಗರಾಭಿವೃದ್ಧಿ, ಉತ್ಪಾದನಾ ಕ್ಷೇತ್ರ, ನಗರ ಸಾರಿಗೆ ವ್ಯವಸ್ಥೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಜಪಾನ್‌ನಿಂದ ಕಲಿಯುವುದು ಬಹಳಷ್ಟಿದೆ. ಅಲ್ಲಿನ ಸಮಯ ಪಾಲನೆ, ಶಿಸ್ತು ಹಾಗೂ ಬದ್ಧತೆ ಅನುಕರಣೀಯವಾಗಿದೆ’ ಎಂದರು.

Loading...

ಇದನ್ನೂ ಓದಿ: ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ? ಇಂದು ದೆಹಲಿಗೆ ಸಿಎಂ ಡಿಕೆ ಶಿವಕುಮಾರ್, ಖರ್ಗೆ-ರಾಹುಲ್ ಭೇಟಿ ಸಾಧ್ಯತೆ

‘ಜಪಾನ್ ಪ್ರವಾಸದ ವೇಳೆ ಅನೇಕ ಕನ್ನಡಿಗರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ವಿವಿಧ ಭಾಗಗಳಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ಏಪ್ರಿಲ್, ಮೇನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ

‘ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲು ಉದ್ದೇಶಿಸಲಾಗಿದೆ. ಈ ಸಮಾವೇಶಕ್ಕೆ ವಿದೇಶಿ ಹೂಡಿಕೆದಾರರನ್ನು ಆಹ್ವಾನಿಸಿದ್ದೇವೆ. ಸಮಾವೇಶದ ಪೂರ್ವಭಾವಿಯಾಗಿ ವಿದೇಶಗಳಲ್ಲಿ ರೋಡ್‌ಶೋಗಳನ್ನು ನಡೆಸಲಿದ್ದೇವೆ. ಕರ್ನಾಟಕದಲ್ಲಿ ಹೂಡಿಕೆ ಮಾಡಲು ವಿದೇಶಿ ಕಂಪನಿಗಳು ಹೆಚ್ಚಿನ ಆಸಕ್ತಿ ತೋರುತ್ತಿವೆ’ ಎಂದು ಅವರು ತಿಳಿಸಿದರು.

ನನಗೆ ಸಿಕ್ಕಿರುವ ಅಧಿಕಾರ ನನ್ನದಲ್ಲ, ನಿಮ್ಮದು: ಸಿಎಂ

‘ನಾನು ಯಾವತ್ತೂ ಸನ್ಮಾನ ಮಾಡಿಸಿಕೊಂಡವನಲ್ಲ. ನನಗೆ ಸಿಕ್ಕಿರುವ ಅಧಿಕಾರ ನನ್ನದಲ್ಲ, ನಿಮ್ಮದು. ಜನರ ಸೇವೆ ಮಾಡಲು ನೀವು ನನಗೆ ಅವಕಾಶ ಮಾಡಿಕೊಟ್ಟಿದ್ದೀರಿ. ನನ್ನ 40 ವರ್ಷಗಳ ರಾಜಕಾರಣದಲ್ಲಿ ಯಾರ ಬಳಿಯೂ ಲಂಚ ಪಡೆದಿಲ್ಲ. ಯಾರಿಗೂ ಅಗೌರವ ತರುವ ಕೆಲಸ ಮಾಡಿಲ್ಲ. ನಾನು ಮುಖ್ಯಮಂತ್ರಿ ಎಂದು ತೋರಿಸಿಕೊಳ್ಳುವ ಅವಶ್ಯಕತೆಯೂ ನನಗಿಲ್ಲ. ನನಗೆ ಜಾತಿಯ ಬಗ್ಗೆ ನಂಬಿಕೆ ಇಲ್ಲ. ನನ್ನದು ಮಾನವ ಜಾತಿ. ಎಲ್ಲ ಧರ್ಮ ಹಾಗೂ ಜಾತಿಗಳೂ ನನಗೆ ಒಂದೇ. ಜನರು ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ . ನಿಭಾಯಿಸುವ ಕೆಲಸ ಮಾಡುತ್ತಿದ್ದೇನೆ’ ಎಂದಿದ್ದಾರೆ.

ಬಡವರಿಗೆ 30*40 ಸೈಟ್ ನೀಡಲು ತೀರ್ಮಾನ

‘ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದಾಗ ಕೆಲವರು ಟೀಕೆ ಮಾಡಿದರು, ಇನ್ನೂ ಕೆಲವರು ನಕ್ಕರು. ಆದರೆ ಜನರ ಹಿತದೃಷ್ಟಿಯಿಂದ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಬಡವರಿಗೆ 30*40 ಅಳತೆಯ ನಿವೇಶನಗಳನ್ನು ನೀಡಲು ತೀರ್ಮಾನಿಸಿದ್ದೇವೆ. ರೈತರ ಬದುಕು ಹಸನಾಗಲು ಹಾಲಿನ ದರ ಹೆಚ್ಚಳ ಮಾಡಿದ್ದೇವೆ. ನೇಗಿಲಯೋಗಿ ಯೋಜನೆ ಜಾರಿಗೆ ತರಲು ಈಗಾಗಲೇ ಸೂಚನೆ ನೀಡಿದ್ದೇನೆ’ ಎಂದು ಅವರು ತಿಳಿಸಿದರು.

ಹೆಚ್​ಡಿ ಕುಮಾರಸ್ವಾಮಿಗೆ ಪರೋಕ್ಷ ಟಾಂಗ್ ನೀಡಿದ ಡಿಕೆ ಶಿವಕುಮಾರ್​ 

‘ಈ ಹಿಂದೆ ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣೆ ಮುಂದೂಡಲು ಪ್ರಯತ್ನಿಸಿದ್ದರು. ಈ ಹಿಂದೆ ಚಂದ್ರಶೇಖರ್ ಹಾಗೂ ನನ್ನ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ನನಗೆ ಟಿಕೆಟ್ ತಪ್ಪಿಸಲಾಗಿತ್ತು. ಮಂತ್ರಿಯಾಗುವುದನ್ನೂ ತಪ್ಪಿಸಿದ್ದರು. ಕಳೆದ ಚುನಾವಣೆಯಲ್ಲಿ ನಾನು ಪ್ರಚಾರಕ್ಕೆ ಬರದಿದ್ದರೂ ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಕನಕಪುರದಲ್ಲಿ ‘ಬಂಡೆ ಕನಕಪುರ ಲೂಟಿ ಮಾಡಿಬಿಟ್ಟ’ ಎಂದು ಟೀಕೆ ಮಾಡಿದ್ದರು. ಆದರೆ ನಾನು ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಚುನಾವಣೆಯಲ್ಲಿ ನಿಂತು ನೋಡಿ ಆಗಿದೆ’ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:00 pm, Sat, 28 November 26

ಪ್ರಶಾಂತ್​ ಬಿ.

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More
Loading...
Unable to load recommendations.
Follow Us